ಪಿಂಡಸ್ಥಲ
1
ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ,
ಗುಹೇಶ್ವರಾ ನಿಮ್ಮ ಶರಣಸಂಬಂಧ
2
ಕಲ್ಲೊಣಗುಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು.
ಗುಹೇಶ್ವರನಿಂದ ನಿಲವ ಅನುಭ(ಭಾ?)ವ ಸುಖಿ ಬಲ್ಲ.
3
ಜಲದೊಳಗಿರ್ದ ಕಿಚ್ಚು ಜಲದ ಸುಡದೆ,
ಜಲವು ತಾನಾಗಿಯೆ ಇದ್ದಿತ್ತು ನೋಡಾ.
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.
ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು_ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ ನಿಲವು ನೋಡಾ.
4
ನೆಲದ ಮರೆಯ ನೀಧಾನದಂತೆ ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯನಡಗಿದ ಮರೀಚನಂತೆ (ಮರೀಚಿಯಂತೆ?)
ಕಂಗಳ ಮರೆಯಲಡಗಿದ ಬೆಳಗಿನಂತೆ_ಗುಹೇಶ್ವರಾ ನಿಮ್ಮ ನಿಲವು!
ಸೂತ್ರ: ಇಂತಪ್ಪ ಮಹತ್ ಪಿಂಡಸ್ಥಲವು ತನ್ನ ಲೀಲೆಯಿಂ ತನ್ನೊಳಡಗಿದ ಸಕಳ ನಃಕಳಾತ್ಮಕತತ್ವಂಗಳನ್ನುಂಟುಮಾಡಿ
ತೋರಬೇಕೆಂದು ಇಚ್ಛೈಸಲು ಅಲ್ಲಿ ಜ್ಞಾನೋದಯವಾಗಿತ್ತಾಗಿ ಮುಂದೆ ಪಿಂಡಜ್ಞಾನಸ್ಥಲವಾದುದು.
ಪಿಂಡಜ್ಞಾನಸ್ಥಲ
5
ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು, ಸಚಾರಾಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು.
6
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊರ್ಧ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
7
ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ
ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು,
ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು,
ತರು ಗಿರಿ ತೃಣ ಕಾಷ್ಠಾದಿಗಳಿಲ್ಲದಂದು,
ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು
ತೋರುವ ಬೀರುವ ಭಾವದ ಪರಿ,
ಭಾವದಲ್ಲಿ ಭರಿತ, ಅಗಮ್ಯ ಗುಹೇಶ್ವರ ನಿರಾಳವು!
8
ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ_
ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು;
ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ (ಸೆ?)
ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
ಸುತ್ತಿ ಹರಿದವು ಸಪ್ತಸಾಗರಂಗಳು.
ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ
ಭುವನ ಮಂಡಲಕ್ಕೆ ಉದಯ ಬ್ರಹ್ಮಾಂಡ.
ಅರುವತ್ತಾರು ಕೋಟಿ ತಾರಾಮಂಡಲವೆಂದಡೆ,
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ
ನಿಲಿಸಿ ತೋರಿದ ಹದಿನಾಲ್ಕು ಭುವನವ_
ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ
ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು.
ಗುಹೇಶ್ವರಾ, ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
9
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ!
ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು!
ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ.
ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ
ನಿರ್ದೋಷಿಯಾದೆನು ಕಾಣಾ ಗುಹೇಶ್ವರೀ.
10
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
ಮುನ್ನ (ನೀ) ಬಾಯ ಮುಚ್ಚಿಕೊಂಡಿರ್ದೆ ಎಂಬುದ,
ನಾ ನಿನ್ನ, ಕಣ್ಣಿಂದ ಕಂಡೆನು.
ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡೆದಡೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ.
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ!
ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
11
ಮಾಯದ ಬಲೆಯಲ್ಲಿ ಸಿಲುಕಿದ ಮರುಳ ನಾನೆಂದರಿದ ಪರಿಯ ನೋಡಾ!
ಲಿಂಗವೆಂದರಿದ ಪರಿಯ ನೋಡಾ!
ತನ್ನ ವಿನೋದಕ್ಕೆ ಬಂದು (ದ?) ನಿಶ್ಚಿಂತ ನಿರಾಳ
ಗುಹೇಶ್ವರನೆಂದರಿದ ಪರಿಯ ನೋಡಾ.
ಸೂತ್ರ: ಇಂತು ತನ್ನ ಪಿಂಡಜ್ಞಾನದ ಲೀಲೆಯಿಂದಾದ ಮಾಯಾಮಹದಾಡಿ ಪ್ರಪಂಚು ತನಗೆ ಅನ್ಯವಾಗಿರಲು, ಆ ಮಾಯೆಂದು
ತಾನರಿದು ಬೇರ್ಪಡಿಸಿ ನಿವೃತ್ತಿ ಮುಖದಿಂದ ವಿಡಂಬಿಸುತ್ತಿರಲು ಮುಂದೆ ಮಾಯಾವಿಲಾಸವಿಡಂಬನಸ್ಥಲವಾದುದು.
ಮಾಯಾವಿಲಾಸವಿಡಂಬನಸ್ಥಲ
12
ಕಾಯದ ಮೊದಲಿಗೆ ಬೀಜವಾವುದೆಂದರಿಯದೀ ಲೋಕ,
ಇಂದ್ರಿಯಂಗಳು ಬೀಜವಲ್ಲ,
ಆ ಕಳಾಭೇದವಲ್ಲ! ಸ್ವಪ್ನ ಬಂದೆರಗಿತ್ತಲ್ಲಾ!
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರಾ.
13
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
ಗಂಡಗಂಡರನರಸಿ ತೊಳಲುತ್ತೈದಾರೆ.
ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ:
ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು.
ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು.
ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
14
ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು_ಇದೇನು ಹೇಳಾ ಗುಹೇಶ್ವರಾ?
15
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ
ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು
ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆಯ ಕೂಳಾದ
ರುದ್ರಾನಾ ಗಿಳಿಗೆ ತಾ ಕೋಳಾನ (ಕೋಳುವೋದ?)
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟವಾಯಿತ್ತು_ಇದೆಂತೊ ಗುಹೇಶ್ವರಾ?
16
ನೆಲದ ಬೊಂಬೆಯ ಮಾಡಿ, ಜಲದ ಬಣ್ಣವನುಡಿಸಿ,
ಹಲವು ಪರಿಯಾಶ್ರಿ (ಶ್ರ?)ಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲನ ಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೋ?
ಬಯಲ ಕಂಭಕ್ಕೆ ತಂದು ಸಯವೆಂದು ಪರವ ಕಟ್ಟಿದಡೆ
ಸಯವದ್ವಯವಾಯಿತ್ತು_ಏನೆಂಬೆನು ಗುಹೇಶ್ವರಾ!
17
ಇಪ್ಪತ್ತೈದು ತಲೆಯೊಳಗೆ, ಏಳು ಮೊಲೆ ಮುಖವೆಂಟು,
ಹದಿನಾಲ್ಕು ಬಾಯಿ ನೂರಿಪ್ಪತ್ತು ಕೊರೆದಾಡೆ,
ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ(ಸೆ?)
ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ
ಹೆತ್ತ ತಾಯಿ ಮಗನ ನುಂಗಿ, ಶಿಶು ತಾಯ ಬೆಸಲಾಗಿ
ಗುಹೇಶ್ವರನೆಂಬ ನಿಲದ ಅಂಗಯ್ಯ ಮೊಲೆ ನುಂಗಿತ್ತು.
18
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ
ಕುಂಭಿನಿಯದರದ ಮೇಲೆ ಪಸರವನಿಕ್ಕಿದ,
ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು
ನೀರಡಿಸಿದಾತ ಅರಲುಗೊಂಡು ಬೆರಗಾದ.
ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ!
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
19
ಭೂಮಿಯ ಕಠಿಣವನು, ಆಕಾಶದ ಮೃದುವನು; ತಿಳಿವ ಗಮನ
ಅಲ್ಲಿಯೇ ನಿಂದಿತ್ತು.
ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತ್ತಲ್ಲಾ!
ಒಳಗೆ ಸತ್ತು ಹೊರಗೆ ಆಡುತ್ತದೆ!
ಗುಹೇಶ್ವರ ಬೆರಗಾಗಿ ಅಲ್ಲಿಯೇ ನಿಂದನು.
20
ಭೂಮಿಯಾಕಾಶ ಒಂದು ಜೀವನದುದರ.
ಅಲ್ಲಿ ಘನವೇನು ಘನವೆನ್ನದಮಂಗೆ? ಕಿರಿದೇನು ಕಿರಿದೆನ್ನದವಂಗೆ?
ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ?
21
ಬ್ರಹ್ಮಪಾಶ, ವಿಷ್ಣು ಮಾಯೆ ಎಂಬ ಬಲೆಯ ಬೀಸಿ,
ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣನಾಡಿದ ಬೇಂಟೆಯ.
ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದಯಲ್ಲಾ ಗುಹೇಶ್ವರಾ.
22
ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ
ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ
ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ
ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ
ಸರ್ವವೂ ನಿನ್ನ ಮಾಯೆ!
ಒಬ್ಬರನ್ನೊಳಕೊಂಡಿತ್ತೆ ಹೇಳಾ ಗುಹೇಶ್ವರಾ?
23
ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
ಹರಹರಾ ಮಾಯೆ ಇದ್ದೆಡೆಯ ನೋಡಾ.
ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
ಎರಡೆಂಬತ್ತು ಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು
ಮೈಯೆಲ್ಲಾ ಕಣ್ಣವರು, ನಂದಿವಾಹನ ರುದ್ರರು_ಇವರೆಲ್ಲರು,
ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ.
24
ಆಡಂಬರದೊಳಗಾಡಂಬರವಿದೇನೊ?
ಹಾರಿತ್ತು ಬ್ರಹ್ಮನೋಲಗ, ಕೆದರಿತ್ತಿದೇನಯ್ಯ?
‘ಸಾರು ಸಾರು’ ಎನುತ್ತ ವಿಷ್ಣು ಆಜನ ನುಂಗಿ
ರುದ್ರಯೊಳಡಗಿತ್ತಿದೇನೊ!
ಬೇರಿಲ್ಲದ ಮರ, ನೀರಿಲ್ಲದ ನೆಳಲೊಳಗೆ
ತೋರಿದ ಪ್ರತಿಬಿಂಬವ ನಾನೇನೆಂಬೆನು ಗುಹೇಶ್ವರಾ?
25
ಚಂದ್ರಮನೊಳಗಣ ಎರಳೆಯ ನುಂಗಿದ ರಾಹುವಿನ ನೋಟವು,
ಅಂದಂದಿಗೆ ಬಂದು ಕಾಡಿತ್ತು ನೋಡಾ.
ಒಂದರ ತಲೆ, ಒಂದರ ಬಸುರು_ಅಂದಂದಿಗೆ ಬಂದು ಕಾಡಿತ್ತು ನೋಡಾ.
ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ,
ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ.
26
ಊರ ಮಧ್ಯದ ಕಣ್ಣ ಕಾಡಿನೊಳಗೆ, ಬಿದ್ದೈದಾವೆ ಐದು ಹೆಣನು.
ಬಂದು ಬಂದು ಅಳುವರು.
ಬಳಗ ಘನವಾದ ಕಾರಣ-ಹೆಣನೂ ಬೇಯದು ಕಾಡೂ ನಂದದು.
ಮಾಡ ಉರಿಯಿತ್ತು ಗುಹೇಶ್ವರಾ.
27
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ, ಮೇದು ಬಂದೆನೆಂದಡೆ,
ಇದ ಕಂಡು ಬೆರಗಾದೆ.
ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ,
ಇದ ಕಂಡು ಬೆರಗಾದೆ.
ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,
ಇದ ಕಂಡು ಬೆರಗಾದೆ_ಗುಹೇಶ್ವರಾ.
28
ಹೃದಯಕಂದದ ಮೇಲೆ ಹುಟ್ಟಿತ್ತು,
ಹರಿದು ಹಬ್ಬಿ ಕೊಬ್ಬಿ ಹಲವು ಫಲವಾಯಿತ್ತು_ನೋಡಿರೆ!
ಪರಿಪರಿಯ ಫಲಂಗಳನು ಬೇಡಿದವರಿಗಿತ್ತು,
ಆ ಫಲದ ಬಯಸಿದವರು ಜಲದೊಳಗೆ ಬಿದ್ದಡೆ
[ನೋಡಿ]ನಗುತ್ತಿರ್ದೆನು_ ಗುಹೇಶ್ವರಾ.
29
ಪಂಚಾಶತ್ಕೋಟಿ ಭೂಮಂಡಲವನು,
ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು.
ತಲೆಯಿಲ್ಲದೆ ಕಂಡು ಬೆರಗಾದೆನು
ನವಖಂಡ ಮಂಡಲ ಭನ್ನವಾದಂದು_
ಆ ತಲೆಯ ಕಂಡವರುಂಟೆ ಗುಹೇಶವರಾ?
30
ಅರಗಿನ ಪುತ್ಥಳಿಯನುರಿ ಕೊಂಡಡೆ, ಉದಕ ಬಾಯಾರಿ ಬಳಲುತ್ತಿದೆ.
[ಅಗೆಯಿಂ ಭೋ ಬಾವಿಯನಗೆಯಿಂ ಭೋ]
ಬಾವಿಯನಗೆದಾತ ಸತ್ತ, ಬಾವಿ ಬತ್ತಿತ್ತು_ಇದು ಕಾರಣ,
ಮೂರು ಲೋಕವು ಬರುಸೂರೆವೋಯಿತ್ತು ಗುಹೇಶ್ವರಾ.
31
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು,
ಅಯ್ಯಾ ಇದು ಸೋಜಿಗೆ!_
ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು
ಮುಯ್ಯಾಂತಡೆ ಬಯಲಾಯಿತ್ತು_ಗುಹೇಶ್ವರಾ!
32
ಭೂತ ಭೂತವ ಕೂಡಿ ಅದ್ಭುತವಾಯಿತ್ತು,
ಕಿಚ್ಚು ಕೋಡಿತ್ತು, {ನೀರು} ನೀರಡಿಸಿತ್ತು_ ಅದ್ಭುತವಾಯಿತ್ತು!
ಉರಿ, ಪವನದೋಷದೊಳಡಗಿರ್ದು
ವಾಯುವಿಮ್ಮಡಿಸಿತ್ತ ಕಂಡೆ, ಗುಹೇಶ್ವರಾ.
33
ಅಡವಿಯೊಳಗೆ ಕಳ್ಳರು ಕಡವಸಿದ್ಧ (ಕಡವಸದ?)ಸ್ವಾಮಿಯನು
ಹುಡುಕಿ ಹುಡುಕಿ ಅರಸುತ್ತೈದಾರೆ. _ಸೊಡರು ನಂದಿ ಕಾಣದೆ!
ಅನ್ನಪಾನದ ಹಿರಿಯರೆಲ್ಲರು ತಮ್ಮ ತಾವರಿಯದೆ,
ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ,
ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು,
ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ_ಗುಹೇಶ್ವರಾ.
34
ಮುಗಿಲ ಬಣ್ಣದ ಪಕ್ಷಿ ಮಗನ ಕೈಯ ಅರಗಿಳಿ,
ಗಗನ[ದ]ಕೋಲಂಬಿನಲ್ಲಿ ಸ್ವಪ್ನದ ನಿಲವನು ತೆಗೆದೆಚ್ಚವನಾರೂ?
ಉಪಮಿಸಬಾರದು!
ಜಾಗ್ರ ಸ್ವಪ್ನ ಸುಷುಪ್ತಿಯ ನಡುವೆ ತ್ರಿಜಗವಾಯಿತ್ತು.
ಜಗಜ್ಯೋತಿ, ನಿನ್ನ ಮಾಯೆಯನೇನೆಂಬೆನು ಗುಹೇಶ್ವರಾ.
35
ಕಡಲನುಂಗಿದ ಕಪ್ಪಿನ ಪರಿ ನವಸಾಸಿರ!
ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ?
ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ!
ಅಂಗವಿಲ್ಲದ ರೂಹಿಂಗೆ ಸಂಗವುಂಟೆ?_ಇದೇನೋ!
ಗಗನದ ಹೆಣ್ಣನೆ ಕೊಯ್ದ, ಮುಗುದೆ ರುಚಿಯನರಿಯಳು!
ಹಗರಣದಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ?
36
ಮಾಯದ ಕೈಯಲಿ ಓಲೆ ಕಂಠವ ಕೊಟ್ಟಡೆ,
ಲಗುನ ವಿಗುನವ ಬರೆಯಿತ್ತು ನೋಡಾ
ಅರಗಿನ ಪುತ್ಥಳಿಗೆ ಉರಿಯ, ಸೀರೆಯನುಡಿಸಿದಡೆ,
ಅದು ಸಿರಿಯ ಸಿಂಗಾರವಾಯಿತ್ತು ನೋಡಾ.
ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದ ಆದಲಿತ್ತು ನೋಡಾ_ ಗುಹೇಶ್ವರಾ.
37
ಹಿರಿದಪ್ಪ ಜಲಧಿಯ ಮಡುವಿನೊಳಗೆ,
ಕರಿಯ ಕಬ್ಬಿಲ ಜಾಲದ ಬೀಸಿದ ನೋಡಯ್ಯಾ.
ಅರಿದ ತಲೆ ಐದು, ಅರಿಯದ ತಲೆ ಐದು, ಕರಿಯ ತಲೆ ಐದು,
ಮುಂದೈದಾವೆ ನೋಡಯ್ಯಾ.
ಕರಿಯ ಕಬ್ಬಿಲ ಜಾಲವ ಹೊತ್ತುಕೊಂಡು ಹೋದಡೆ
ನೇತ್ರದಲೋಕುಳಿಯಾಡಿತ್ತ ಕಂಡೆನು ಗುಹೇಶ್ವರಾ.
38
ಕೋಣನ ಕೊಂಬಿನ ತುದಿಯಲ್ಲಿ, ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ, ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ,
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
ಆನೆ ನೇರಿತ್ತ ಕಂಡೆ ಗುಹೇಶ್ವರಾ.
39
ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ_
ಈ ಎರಡರ ನಡು ಒಂದಾಯಿತ್ತು!_ಹುಲಿಯಲ್ಲ ಹುಲ್ಲೆಯಲ್ಲ.
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದಡೆ,
ಎಲೆ ಮರೆಯಾಯಿತ್ತು ಕಾಣಾ, ಗುಹೇಶ್ವರಾ.
40
ಕರೆಯದೆ ಬಂದುದ, ಹೇಳದೆ ಹೋದುದನಾರೂ. ಅರಿಯರಲ್ಲಾ.
ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!
41
ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ.
ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವು!
ಕತ್ತಲೆಗವಿಯಿತ್ತು ಮೂರು ಲೋಕದೊಳಗೆ.
ಇದರಚ್ಚುಗವೇನು ಹೇಳಾ ಗುಹೇಶ್ವರಾ?
42
ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವರೈವರೂ ಮಾನಿಸರು, ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದರಿಚ್ಛೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.
43
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು.
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು.
ಇದಾರಕ್ಕೇ? ಏನಕ್ಕೆ?_ಮಾಯದ ಬೇಳುವೆ ಹುರುಳಿಲ್ಲ.
ಕೊಂದು ಕೂಗಿತ್ತು ನೋಡಾ ಗುಹೇಶ್ವರಾ.
44
ತೋಟದ ಬಿತ್ತಿದ[ರೆಮ್ಮ]ವರು, ಕಾಹ ಕೊಟ್ಟವರು ಜವನವರು.
ನಿತ್ಯವಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ!
ಗುಹೇಶ್ವರನಿಕ್ಕಿದ ಕಿಚ್ಚು ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ.
45
ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ!
ಮಾಯಾ ಸೂತ್ರವಿದೇನೊ! ಕಂಗಳೊಳ [ಗಣ] ಕತ್ತಲೆ ತಿಳಿಯದಲ್ಲಾ!
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.
ಸೂತ್ರ:ಇಂತು ಮಾಯಾವಿಲಾಸವ ವಿಡಂಬಿಸುತ್ತಿದ್ದಾತನು, ತಾನು ಮಾಯೆಗೆ ಸಮೀಪನು, ಅದೆಂತೆಂದಡೆ: ತನಗೆ
ಮಾಯೆ ಇದಿರಿಟ್ಟು ತೋರಿಹುದಾಗಿ. ತನ್ನಲ್ಲಿ ಭಿನ್ನವಿಲ್ಲವೆಂಬ ವಿಚಾರ ಹುಟ್ಟಲಾಗಿ, ತಾನೇ ಮಾಯಾವಿಕಾರಿಯೆಂದರಿದು,
ಅನ್ಯವ ವಿಡಂಬಿಸುವದ ಬಿಟ್ಟು ತನ್ನ ಹೇಯೋಪಾಯವ ತಾನೇ ವಿಡಂಬಿಸುತ್ತಿರಲು ಮುಂದೆ ಸಂಸಾರಹೇಯಸ್ಥಲವಾದುದು.
ಸಂಸಾರಹೇಯಸ್ಥಲ
46
ಸಂಸಾರವೆಂಬ ಹೆಣ ಬಿದ್ದಿದ್ದಡೆ, ತಿನಬಂದ ನಾಯ ಜಗಳವ ನೋಡಿರೆ!
ನಾಯ ಜಗಳವ ನೋಡಿ ಹೆಣ [ನೆದ್ದು] ನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ.
47
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು, ನೊರೆ ತೆರೆಗಳು ತಾಗಿದುವಲ್ಲಾ!
ಸಂಸಾರವೆಂಬ ಸಾಗರದೊಳಗೆ ಸುಖದುಃಖಗಳು ತಾಗಿದವಲ್ಲಾ!
ಇದಕ್ಕಿದು ಮೂರ್ತಿಯಾದ ಕಾರಣ ಪ್ರಳಯವಾಯಿತ್ತು ಗುಹೇಶ್ವರಾ.
48
ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು,
ತಾಳುದ್ದ (ತಾಳ ಮರದುದ್ದ?)ವೆರಡು ಕೋಡು ನೋಡಾ!
ಅದನರಸ ಹೋಗಿ ಆರುದಿನ, ಅದು ಕೆಟ್ಟು ಮೂರುದಿನ!
ಆಘಟಿತ ಘಟಿತ ಗುಹೇಶ್ವರಾ, [ಅರಸುವ ಬಾರೈ]
49
ಆನೆಯ ಹೆಣ ಬಿದ್ದಡೆ ಕೋಡಗ ಮುದ್ದಾಡಿಸಿತ್ತ ಕಂಡೆನಯ್ಯಾ,
ಕಾಡೊಳಗೊಬ್ಬ ಸೂಳೆ ಕರೆದು ಒತ್ತಯ ಕೊಂಬುದ ಕಂಡೆನಯ್ಯಾ,
ಹಾಳೂರೊಳಗೆ ನಾಯ ಜಗಳವ ಕಂಡೆ;
ಇದೇನು ಸೋಜಿಗವೊ ಗುಹೇಶ್ವರಾ!
50
ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ,
ಕುಲ ಕೆಡದಿಪ್ಪ ಈ ಪರಿಯ ನೋಡಾ!
ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
ಕುಲವುಳ್ಳವರೆಲ್ಲರೂ ಕೈವಿಡಿದರು.
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು,
ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
ಸೂತ್ರ: ಇಂದು ಸಂಸಾರವೆಂಬ ದುಸ್ಸಾರವ ಬೇರ್ಪಡಿಸಿ, ತನ್ನ ನಿಜವನೋಡಿಹೆನೆಂದಡೆ, ಇದಿರಿಟ್ಟಲ್ಲದೆ ತನ್ನ
ಕಾಣಬಾರದಾಗಿ. ಅದೆಂತೆಂದಡೆ: ತನ್ನ ಮುಖವ ತಾನೆ ನೋಡಿಹೆನೆಂಬವನು ಇದಿರೆ ಕನ್ನಡಿಯನುಂಟುಮಾಡಿಕೊಂಡು
ನೋಡುವವನಂತೆ; ತನ್ನ ಇದಿರೆ ಗುರುವನುಂಟುಮಾಡಿಕೊಂಡು, ಉಪಾಸ್ತಿಯ ಮಾಡಲು ಮುಂದೆ ಗುರುಕರುಣಸ್ಥಲವಾದುದು.
ಗುರುಕರುಣಸ್ಥಲ
51
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದೆಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ.
52
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝುಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಾಹಾಪ್ರಸಾದವೆಂದೆನಯ್ಯಾ.
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
53
ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು,
ಎನ್ನ ಕಾಯದ ಕರ್ಮದ ತೊಡೆದು,
ಎನ್ನ ಪ್ರಾಣನ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡಾ ಗುಹೇಶ್ವರಾ.
54
ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು,
ಅಟ್ಟಾಟಿಕೆಯಲಿ ಅರಿದಾವುದು?
ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು.
ಮೂರ್ತಿಯಾದುವೆ ಅಮೂರ್ತಿಯಾದತ್ತು,
ಅಮೂರ್ತಿಯಾದುದೆ ಮೂರ್ತಿಯಾದತ್ತು.
ಇದನೆಂತು ತೆಗೆಯಬಹುದು? ಇದನೆಂತು ಕೊಳುಬಹುದು?
ಅಗಮ್ಯ, ಅಗೋಚರ.
ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು,
ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು,
ಕಾರಣ್ಯವ ಮಾಡು ಗುಹೇಶ್ವರಾ.
55
ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ?
ಘನಕ್ಕೆ ಘನವಾದವಸ್ತು;
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾರೂಪನಾದ._
ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ.
ಇನ್ನು ನಿರ್ವಿಕಾರ ಗುಹೇಶ್ವರ.
56
ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,
ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ,
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
ಗುಹೇಶ್ವರಲಿಂಗದಲ್ಲಿ ಹಿಂದಣ ಹುಟ್ಟಿರತು ಹೋದುದ ಕಂಡೆನಯ್ಯಾ.
57
ಎಣ್ಣೆ ಬತ್ತಿ ಪ್ರಣತೆ ಕೂಡಿ ಜ್ಯೋತಿಯ ಬೆಳಗಯ್ಯಾ.
ಅಸ್ಥಿ ಮಾಂಸ ದೇಹ ಪ್ರಾಣ ನಃಪ್ರಾಣವಾಯಿತ್ತು.
ದೃಷ್ಟಿ ಪರಿದು ಮನಮುಟ್ಟಿದ ಪರಿಯೆಂತೊ?
ಮುಟ್ಟಿ ಲಿಂಗದ ಕೊಂಡಡೆ, ಕೆಟ್ಟಿತ್ತು ಜ್ಯೋತಿಯ ಬೆಳಗು!
ಇದು ಕಷ್ಯವೆಂದರಿದೆನು ಗುಹೇಶ್ವರಾ.
58
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ;ಹೊರಗಣ ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು.
59
ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
60
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗೆ!
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ!
61
ಆದಿಯ ಮುಟ್ಟಿಬಂದ ಶರಣಂಗೆ ಬದ್ಧ (ಬಂಧ?)ವಿಲ್ಲಯ್ಯಾ.
ಜನ್ಮಕೋಟಿ ಕ್ರೂರಕರ್ಮವ ಮಾಡಿದವಂಗೆ, ಸೋಂಕಿನ ಸೊಬಗ
ಹೇಳಲಿ(ಲೇ?)ಕೆ?
ಅಂಗದಲ್ಲಿ ಲಿಂಗ ಸೋಂಕಿದ ಶರಣಂಗೆ,
ಕಾಯದೊಳಗುಳ್ಳ ಕರಣಂಗಳು ಕಳಾಕುಳ ಕಳಾಭೇದವಯ್ಯಾ
ಸುಖದ ಸೋಂಕಿನ ಸೊಬಗ, ಇನ್ನಾರಿಗೆಯೂ ಹೇಳಲಿಲ್ಲ ಗುಹೇಶ್ವರ.
62
ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ_ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?
63
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ_ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು!
ಸೂತ್ರ:ಇಂತು ಗುರುಕರುಣಸ್ಥಲದಿಂದ ಅವಿರಳ ಲಿಂಗಸಂಬಂಧವ ಹಡದ ಸತ್ಯಿಷ್ಯನು ತನ್ನ ಸಾಂಗಕ್ರಿಯಾವರ್ತನೆಯ
ಆಚರಿಸಿ ತೋರುತ್ತಿರಲು ಮುಂದೆ ಭಕ್ತಸ್ಥಲವಾದುದು.
ಭಕ್ತಸ್ಥಲ
64
ಭವಿಯ ತಂದು ಭಕ್ತನ ಮಾಡಿ, ಪೂರ್ವಾಶ್ರಯವ ಕಳೆದ ಬಳಿಕ,
ಮರಳಿ ಪೂರ್ವಾಶ್ರಯವನೆತ್ತಿ ನುಡಿವ, ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು, ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ
ಈ ತ್ರಿವಿಧಸ್ಥಲವನರಿಯದೆ ಕೆಟ್ಟರು ಗುಹೇಶ್ವರಾ.
65
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ,
ಆ ಬೆವಸಾಯದ ಘೋರವೇತಕಯ್ಯಾ?
ಕ್ರಯವಿಕ್ರಯದ ಮಾಡಿ ಮನೆಯ ಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕಯ್ಯಾ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ;
ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ,_
ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ,
ಗುಹೇಶ್ವರನೆಂಬವನತ್ತಲೆ ಹೋಗಲಿ.
66
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲುಮೊರಡಿಯ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿ[ಯೆ] ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜವನೆ ಸಾಲದೆ?
67
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯಾ!
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದ,
ದೇವಕನ್ನಿಕೆಯ ಮೊರೆಹೊಕ್ಕು,
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ,
ಆತನೆ ಭಕ್ತನೆಂದೆಂಬೆ ಗುಹೇಶ್ವರಾ.
68
ರಾಜಸಭೆ ದೇವಸಭೆಯೊಳಗೆ, ದೇವ_ರಾಜ_ಪೂಜಕರೆಲ್ಲಾ ಮುಖ್ಯರಿಗೆ,
ಗುರುವಿನ ಕರುಣ!
ಇದ ಬಲ್ಲರೆ ಅಯ್ಯಾ ಪೂಜಕರೆಲ್ಲರು?
ಇಂತಹ ಪರಿಗಳ ಕಂಡು ಬೆರಗಾದೆ,
ಗುಹೇಶ್ವರಾ_ಇವರೆಲ್ಲ ಸಂಸಾರವ್ಯಾಪಕರು.
69
ಅಕ್ಷರದ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
ಗುರು ಹಿರಿಯರು ತೋರಿದ ಉಪದೇಶದಿಂದ;
ವಾಗದ್ವೈತವನೆ ಕಲಿತು ವಾದಿಪರಲ್ಲದೆ
ಆಗು_ಹೋಗೆಂಬುದನರಿಯರು.
ಭಕ್ತಿಯನರಿಯರು ಯುಕ್ತಿಯನರಿಯರು, [ಮುಕ್ತಿಯನರಿಯರು].
ಮತ್ತೂ ವಾದಕೆಳಸುವರು.
ಹೋದರು ಗುಹೇಶ್ವರಾ ಸಲೆ ಕೊಂಡವಾರಿಗೆ.
70
ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ!
ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ;
ಬಾಯ್ಗೆ ಬಂದಂತೆ ನುಡಿವರು,
ಗುಹೇಶ್ವರಾ ನಿಮ್ಮನರಿಯದ ಜಡರುಗಳು.
71
ಎಣ್ಣೆ ಬೇರೆ ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
72
ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ,
ಹೆಣ್ಣು ಮಾಯೆ ಎಂಬುರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯ ಮಾಯೆ ಕಾಣಾ ಗುಹೇಶ್ವರ.
73
ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ?_
ಇಂತೀ ಮೃತ್ಯುವಿನ ಬಾಯ ತುತ್ತಾದ, ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.
74
ಐದು ಸರ್ಪಂಗಳಿಗೆ ತನು ಒಂದು, ದಂತವೆರಡು.
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವದ ಕಂಡೆ.
ಈ ನಿತ್ಯವನರಿಯದ ಠಾವಿನಲ್ಲಿ, ಭಕ್ತಿಯೆಲ್ಲಿಯದೊ ಗುಹೇಶ್ವರಾ?
75
ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ.
ಪುಣ್ಯಪಾಪವೆಲ್ಲರಿಗೆಯೂ ಸ್ವಭಾವ.
ಮಹಾ ಶಿವತತ್ವದಲ್ಲಿ ಹುಟ್ಟಿದ ಶಿವಭಕ್ತರು,
ಆಗಮ ತತ್ವದಲ್ಲಿ ಹೊಂದಿದಡೇನು?
ಆ ಪುಣ್ಯಪಾಪವಿಲ್ಲಾಗಿ, ಅವರು ಮಹಾನುಭಾವರು.
ಆದಡೇನು? ಲೋಕದ ಪರಿಯೆ?_ಅಲ್ಲ.
ಇದ, ಲೋಕದ ಪರಿಯೆಂಬ ಅಜ್ಞಾನಿಗಳನೇನೆಂಬೆ ಗುಹೇಶ್ವರಾ.
76
ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,
ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ!
ಆ ಉರಿಯೊಳಗೆ ಮನೆ ಬೇವಲ್ಲಿ, ಮನೆಯೊಡೆಯನೆತ್ತ ಹೋದನೊ?
ಆ ಉರಿಯೊಳಗೆ ಬೆಂದ ಮನೆ, ಚೇಗೆಯಾಗುದದ ಕಂಡು,
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕಂಡು,
ಮನದಲ್ಲಿ ಹೇಸಿ ತೊಲಗಿದೆನಯ್ಯಾ.
77
“ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶ್ರುತಿ ಹುಸಿ.
ಲಿಂಗವಿದ್ದ ಠಾವಿಂಗೆ (ಠಾವಿನಲ್ಲಿ?) ಪ್ರಳಯವುಂಟೆ?
ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು.
78
ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
‘ಸೋಹಂ’ ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳವೆ ನೋಡಾ ಗುಹೇಶ್ವರಾ.
79
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
80
ಗಂಡಂಗಿಂದ ಹೆಂಡಿತಿ ಮುನ್ನವೆ ಹುಟ್ಟಿ,
ಗಂಡಿಂಗಿಂದ ಕಿರಿಯಳಾದಳು
ಆ ಹೆಂಡತಿಯೆ ಒಡಹುಟ್ಟಿದಳಾದಳೆಂಬುದ ಕೇಳಿ,
ಆ ಗಂಡ ಸಂಗವ ಮಾಡಿದಡೆ
ಇಬ್ಬರಿಗೊಂದು ಮಗು ಹುಟ್ಟಿತ್ತಲ್ಲಾ!
ಆ ಹುಟ್ಟಿದ ಮಗುವ ತಾಯಿ ಮುದ್ದಾಡಿಸಿದಡೆ
ತಾಯ ತಕ್ಕೈಸಿತ್ತಿದೇನು ಹೇಳಾ?
ತಾಯೆದ್ದು ಪತಿಭಕ್ತಿಯ ಮಾಡಿತ್ತ ಕಂಡು
ಗುಹೇಶ್ವರಲಿಂಗಕ್ಕೆ ಭಕ್ತಿ ಪರಿಣಾಮವಾಯಿತು.
81
ಮುನ್ನಿನ ಪರಿಯುಂತುಟಲ್ಲ.
ಆದಡೆಂತಹುದು? ಆಗದಡೆಂತಾಯಿತ್ತು? (ಆದಡಿಂತಹುದೆ? ಆಗದಡಿಂತಾಯಿತ್ತು)
ಹಲವು ಪರಿ ಬಗೆಯ ಬಯಕೆ ತಾರ್ಕಣೆಯದಂತೆ
ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ಱನು.
82
ಕಾಯಕ್ಕೆ ಮಜ್ಜದ ಪ್ರಾಣಕ್ಕೆ ಓಗರ_
ಇದ ಮಾಡಲೆ ಬೇಕು.
ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆ ಬೇಕು.
ಗುಹೇಶ್ವರನೆಂಬ [ಲಿಂಗಕ್ಕೆ] ಆತ್ಮವುಳ್ಳನ್ನಕ್ಕ
ಭಕ್ತಿಯ ಮಾಡಲೆ ಬೇಕು.
83
ಬಂದ ಬಟ್ಟೆಯ ನಿಂದು ನೋಡದೆ, ಬಂದ ಬಟ್ಟೆಯ ಕಂಡು ಸುಖಿಯಾದೆ.
ನಿಂದ ನಿಲವ ಮುಂದುಗೆಡಿಸಿ, ನಿಂದನಿಲವ ಮುಂದುಗೊಂಡಿತ್ತು.
ತಂದೆ ಮಕ್ಕಳ ಗುಣ ಒಂದು ಭಾವದೊಳಡಗಿ,
ಸಂದಿಲ್ಲದ ಕಾಲೊಳಗೆ ಕೈ ಮೂಡಿತ್ತು.
ಒಂದೊಂದನೆ (ಒಂದನೆ?) ಹಿಡಿದು ಒಂದೊಂದನೆ (ಒಂದನೆ?) ಬಿಟ್ಟಡೆ_
ಇದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನಬಸವಣ್ಣಾ.
84
ತಂದೆಯ ಸದಾಚಾರ ಮಕ್ಕಳದೆಂಬರು,
ಗುರುಮಾರ್ಗಾಚಾರ ಶಿಷ್ಯನದೆಂಬರು.
ಮೇಲು ಪಂಕ್ತಿಯ ಕಾಣರು ನೋಡಾ.
ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು.
ಕತ್ತಲೆಯ ಮರೆಯಲ್ಲಿ ಕಾಣರು ನೋಡಾ.
ತತ್ವದ ಹಾದಿಯನು, ಭಕ್ತಿಯ ಭೇದವನು,
ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ.
85
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯಾ.
86
ಹಳೆಗಾಲದಲಿ ಒಬ್ಬ ಪುರುಷಂಗೆ, ಎಳೆಯ ಕನ್ನಿಕೆಯ ಮದುವೆಯ ಮಾಡಲು,
ಕೆಳದಿಯರೈವರು ನಿಬ್ಬಣ ಬಂದರು.
ಹಸೆಯ ಮೇಲೆ ಮದವಣಿಗನ ತಂದು ನಿಲಿಸಲೊಡನೆ,
ಶಶಿವದನೆ ಬಂದು ಕೈಯ ಪಿಡಿದಳು.
ಮೇಲುದಾಯದಲೊಬ್ಬ ಸತಿ ಕಣ್ಣು ಸನ್ನೆಯ ಮಾಡುತ್ತಿರೆ,
ಕೂಡೆ ಬಂದ ನಿಬ್ಬಣಗಿತ್ತಿಯರೆಲ್ಲ ಹೆಂಡತಿಯರಾದರು!
ದೂರವಿಲ್ಲದ ಗಮನಕ್ಕೆ ದಾರಿಯ ಪಯಣ ಹಲವಾಯಿತ್ತು.
ಸಾರಾಯ ನಿರ್ಣಯವನೇನೆಂಬೆ ಗುಹೇಶ್ವರಾ.
87
ದೇವ ಕಂಡಾ, ಭಕ್ತ ಕಂಡಾ; ಮರಳಿ ಮರಳಿ ಶರಣೆಂಬ ಕಂಡಾ.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ!
ಸಾವನ್ನಕ್ಕ ಸರಸವುಂಟೆ ಗುಹೇಶ್ವರಾ?
88
ಮುಂದು ಜಾವದಲೆದ್ದು, ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ ಶಿವಭಕ್ತರ ಮುಖವ ನೋಡುವುದು.
ಹುಟ್ಟಿದುದಕ್ಕೆ ಇದೇ ಸಫಲ ನೋಡಾ,
ಸತ್ಯವಚನವಿಂತೆಂದುದು_ಇವಿಲ್ಲದವರ ನಾನೊಲ್ಲೆ ಕಾಣಾ ಗುಹೇಶ್ವರಾ.
89
ಉಲುಹಿನ ವೃಕ್ಷದ ನೆಳಲಡಿಯಲಿರ್ದು,
ಗಲಭೆಯನೊಲ್ಲೆನೆಂಬುದೆಂತಯ್ಯಾ?
ಪಟ್ಟದರಾಣಿಯ ಮುಖದ ಮುದ್ರಿಸಿ, ಮೆಟ್ಟಿ ನಡೆವ ಸತಿಯ ಶಿರವ,
ಮೆಟ್ಟಿ ನಿಲುವ ಪರಿಯೆಂತಯ್ಯಾ?
ಆದಿಯ ಹೆಂಡತಿಯನಪಲ್ಲಂಘಿಸಿದ ಕಾರಣ,
ಮೇದಿನಿಯ ಮೇಲೆ ನಿಲಬಾರದು.
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತ್ತಿರ್ದೆನು ಗುಹೇಶ್ವರಾ.
90
ಆಚಾರವರಿಯದೆ, ವಿಭವವಳಿಯದೆ,
ಕೋಪವಡಗದೆ ತಾಪ ಮುರಿಯದೆ,
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ
ನಾನು ಮರುಗುವೆ ಕಾಣಾ ಗುಹೇಶ್ವರಾ.
91
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
92
ಆದಿಯಲ್ಲಿ ಬಸವಣ್ಣನುತ್ಯವಾದ ಕಾರಣ
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಮರ್ತ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ದೇವ ಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಗುಹೇಶ್ವರಾ ನಿಮ್ಮಾಣೆ,
ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.
93
ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ,
ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ.
ಲಿಂಗ ಬಂದು ಉಂಬಡೆ ಪ್ರಸಾದಕಾಯವಪ್ಪಡೆ,
ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ.
ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣರೆ.
ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು,
ರಸವುಂಡ ಹೊನ್ನು_ಗುಹೇಶ್ವರಾ ನಿಮ್ಮ ಶರಣ!
94
ನಚ್ಚುಮಚ್ಚಿನ ಲಿಂಗವ ಗ್ರಹಿಸಿ, ಮಚ್ಚು ಒಳಕೊಂಡಿತ್ತಯ್ಯಾ.
ಕರ್ಪುರದ ಕರಡಿಗೆಯ ಘಾಸಿ ಮಾಡಿದಂತಾಯಿತ್ತು.
ಲಿಂಗಾನುಭಾವಿಗಳ ಸಂಗದಿಂದ ನಾನು ಕಣ್ಣೆರೆದೆನು ಕಾಣಾ ಗುಹೇಶ್ವರಾ.
95
ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು,
ಹಾರಿಹೋಗಿ ಆಕಾಶವ ನುಂಗಿತ್ತಯ್ಯಾ!
ಆ ತುಂಬಿಯ ಗರಿಯ ಗಾಳಿಯಲ್ಲಿ,
ಮೂರು ಲೋಕವೆಲ್ಲವೂ ತಲೆಕೆಳಕಾಯಿತ್ತು!
ಪಂಚ ವರ್ಣದ ಹಂಸೆಯ ಪಂಜರವ ಖಂಡಿಸಿದಡೆ,
ಗರಿ ಮುರಿದು, ತುಂಬಿ ನೆಲಕ್ಕುರುಳಿತ್ತು!
ನಿಜದುದಯದ ಬೆಡಗಿನ ಕೀಲ,
ಗುಹೇಶ್ವರಾ ನಿಮ್ಮ ಶರಣರ ಅನುಭವಸಂಗದಲ್ಲಿರ್ದು ಕಂಡೆನಯ್ಯಾ.
96
ಲಿಂಗವನೂ ಪ್ರಾಣವನೂ ಒಂದುಮಾಡಿ ತೋರಿದ
ಗುರುವಿದ್ದಾನಲ್ಲಾ ಲಿಂಗವಿದ್ದಾವಲ್ಲಾ,
ಇದಕ್ಕೆ ಸಾಕ್ಷಿ ಮುಂದೆ ಜಂಗಮವಿದ್ದಾನಲ್ಲಾ_
ಈ ತ್ರಿವಿಧ ದೃಷ್ಟವ ಕಂಡು, ಬೇರೆಂಬ ಅಜ್ಞಾನಕ್ಕೆ
ನಾನು ಬೆರಗಾದೆನು ಗುಹೇಶ್ವರಾ.
97
ಕಬ್ಬಿನ ಬಿಲ್ಲ ಮಾಡಿ, ಪರಿಮಳದಲದ್ದಿ ಅಂಬ ಮಾಡಿ ನ(ನಿ?)ಲ್ಲೊ ಬಿಲ್ಲಾಳೆ
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ, ಗುಹೇಶ್ವರನೆಂಬ ಲಿಂಗವನು!
98
ಕಂಗಳೀಕೆ ‘ನೋಡಬೇಡಾ’ ಎಂದರೆ ಮಾಣವು?
ಶ್ರೋತ್ರಂಗಳೇಕೆ ‘ಆಲಿಸಬೇಡಾ’ ಎಂದರೆ ಮಾಣವು?
ಜಿಹ್ವೆ ಏಕೆ ‘ರುಚಿಸಬೇಡಾ’ ಎಂದರೆ ಮಾಣವು? (ದು?)
ನಾಸಿಕವೇಕೆ ‘ವಾಸಿಸಬೇಡಾ’ ಎಂದರೆ ಮಾಣವು? (ದು?)
ತ್ವಕ್ಕು ಏಕೆ ‘ಸೋಂಕಬೇಡಾ’ ಎಂದರೆ ಮಾಣವು? (ದು?)_
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು
ಹೋಯಿತ್ತು.
99
ಬಿಸುಜಂತೆ ಜವಳಿಗಂಭ!
ಲೇಸಾಯಿತ್ತು ಮನೆ, ಲೇಸಾಯಿತ್ತು ಮೇಲುವೊದಕೆ.
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ ಸುಟ್ಟು,
ಮನೆಯನಿಂಬು ಮಾಡಿದ ಲಿಂಗಜಂಗಮಕ್ಕೆ.
ಹುಟ್ಟುಗೆಟ್ಟು ಬಟ್ಟಬಯಲ್ಲಲ್ಲಿ ನಾನಿದೇನೆ ಗುಹೇಶ್ವರಾ.
100
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ.
ನೋಟವೇ ಪ್ರಾಣವಾಗಿ ಆಪ್ಯಾಯನ ನಿಮ್ಮಲ್ಲಿ ಅರತುದಯ್ಯಾ.
ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರ ನಿರಾಳವಯ್ಯಾ!
101
ಮನ ಬಸುರಾದಡೆ ಕೈ ಬೆಸಲಾಯಿತ್ತ ಕಂಡೆ!
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ!
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ!
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ!
ಒಂದು ನೀಲದೊಳಗೆ ಮೂರುಲೋಕವಡಗಿತ್ತ ಕಂಡೆ, ಗುಹೇಶ್ವಾರಾ.
102
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.
ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ.
ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ, _
ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ?
103
ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ?
ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ?
ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ?
ಕರಸ್ಥಲದೊಳಗೆ ಲಿಂಗವಿರ್ದು ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ?
104
ಈಶ್ವರ ನುಡಿದ ನುಡಿಯನರಿದೆಹವೆಂದು,
ಬೀಸರವೋದರು ಅಣ್ಣಗಳೆಲ್ಲಾ.
ಪ್ರಾಣಲಿಂಗವೆಂಬರಯ್ಯಾ.
ಮನ ಘನವೆಂದರಿಯದೆ ಮರುಳುಗೊಂಡರು.
ಈಶ್ವರನನರಿದಡೆ ತಾ ಶಿವನು.
ಗುಹೇಶ್ವರನೆಂಬುದು ಬೇರಿಲ್ಲ.
105
ಕರ್ಮ ನಾಸ್ತಿ ಎಂಬೆ, ಅಸ್ತಿ ನಸ್ತಿ (ಅನಾಸ್ತಿ?) ಎಂಬೆ.
ಜ್ಞಾನ [ದ] ಕೊಬ್ಬಿನಲಿ ಉಲಿವೆ, ಉಲಿವೆ, ಉಲಿದಂತೆ ನಡೆವ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು,
ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ_ಗುಹೇಶ್ವರಾ.
106
ನಿಚ್ಚಕ್ಕೆ ನಚ್ಚ ಒತ್ತೆಯ ಬೇಡಿದಡೆ,
ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ.
ಕಿಚ್ಚನೆ ಹೊತ್ತು ಕೊಂಡು ಅರ್ಚನೆಯನಾಡಲು,
ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ.
ಅರ್ಚನೆಯ ಗಳಿಹವ ನಿಳುಹಿದಡೆ,
ಬಳಿಕ ನಿಶ್ಚಿಂತವಾಯಿತ್ತು ಗುಹೇಶ್ವರಾ.
107
ಆಸೆಯೆಂಬ ಕೂಸನೆತ್ತಲು,
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ_
ಇಂತೀ ಎರಡಿಲ್ಲದ ಕೂಸನೆತ್ತ ಬಲ್ಲಡೆ
ಆತನೇ ಲಿಂಗೈಕ್ಯನು ಗುಹೇಶ್ವರಾ.
108
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾಗಲ್ಲದೆ ಸಸಿ ಗತವಾಗದು.
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
ಗುಹೇಶ್ವರನೆಂಬ ಲಿಂಗದ ನಿಜವನೆಯ್ದವಡೆ,
ಪೂಜೆಯ ಫಲ ಮಾದಲ್ಲದೆ ಭವಂ ಲಾಸ್ತಿಯಾಗದು.
109
ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆ ಇದ್ದಡೆ ಏನನುಡಿಸುವರಯ್ಯಾ?
ಭಕ್ತನು ಭವಿಯಾದಡೆ ಅದೇನನುಪಮಿಸುವೆನಯ್ಯಾ ಗುಹೇಶ್ವರಾ?
110
ಸತ್ತ ಬಳಿಕ ಮುಕ್ತಿಯ ಹೆಡೆದೆಹೆನೆಂದು ಪೂಜಿಸ ಹೋದಡೆ,
ಆ ದೇವರೇನ ಕೊಡುವರೊ?
ಸಾಯದೆ ನೋಯದೆ ಸ್ವತಂತ್ರನಾಗಿ, ಸಂದುಭೇದವಿಲ್ಲದಿಪ್ಪ
ಗುಹೇಶ್ವರಾ ನಿಮ್ಮ ಶರಣ.
111
ನೀರ ನೆಳಲನೆ ಕಡಿದು, ಮೇರುವೆಂಬುವ ನುಂಗಿ,
ಶಾರದೆಯೆಂಬವಳ ಬಾಯ ಕಟ್ಟಿ,
ಕಾರ ಮೇಘದ ಬೆಳಸ ನೀರ ಹರಿ ನುಂಗಲ
ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತ್ತು.
ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು,
ನೀರ ಹೊಳೆಯವರೆಲ್ಲರ ಕೊಡನೊಡೆದವು.
ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ,
ಸೋರುಮುಡಿಯಾಕೆ ಗೊರವನ ನೆರೆದಳು.
ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ?) ಸಮುದ್ರವ ಕುಡಿದು,
ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ,
ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ,
ಹತ್ತಿರಿರ್ದ ಹಾವಡಿಗನನು ಅದು ನುಂಗಿತ್ತು!
ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ,
ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು,
ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ,
ಕಟ್ಟಿದಿರ ಕ್ರರ್ಪೂರದ ಜ್ಯೋತಿಯಂತೆ!
112
ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು_
ಒಂದು ಮಠಕ್ಕೆ ಒಂಬತ್ತು ತುಂಬಿಯ ಆಳಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ!
ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ,
ರಣವುಂಡ ಭೂಮಿಯನು ಮೀರಿದನು ಗುಹೇಶ್ವರಾ!
ಸೂತ್ರ: ಇಂತು ಭಕ್ತಸ್ಥಲದಲ್ಲಿ ಸದಾಚಾರ ಸಂಪತ್ತುವಿಡಿದು ಆಚರಿಸಿ ಐಕ್ಯವಾದ ಸದ್ಭಕ್ತನು ಮುಂದೆ ಮಾಹೇಶ್ವರಸ್ಥಲದಲ್ಲಿ
ನಿಷ್ಠಾಮುಖದಿಂದಾಚರಿಸಿ ಬೆರಸುವ ಭೇದೆವೆಂತಿರ್ದುದಂದಡೆ ಮುಂದೆ ಮಾಹೇಶ್ವರಸ್ಥಲವಾದುದು.
ಪ್ರಾಣಲಿಂಗಿಸ್ಥಲ
113
ಆಗಮ ಪುರುಷರಿರಾ,
ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ.
ವಾದ್ಯಾ ಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ,
ಬರುಮುಖರಾಗಿ ಇದ್ದಿರಲ್ಲಾ.
ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ,
ವೇದವೇ ದೈವವೆಂದು ಕೆಟ್ಟಿರಲ್ಲಾ.
ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರ ಭ್ರಷ್ಟವಾಗಿ ಹೋದಲ್ಲಿ,
ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ.
ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ
ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ.
‘ಯತ್ರ ಶಿವಸ್ತತ್ರ ಮಾಹೇಶ್ವರ’ನೆಂದು ಹೇಳಿತ್ತು ಮುನ್ನ,
ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
114
ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
ಹುಲ್ಲ ಮೇವ ಎರಳೆಯ, ಹುಲಿಯ, ಸರಸವ ಕಂಡೆ
ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ.
ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ?
115
ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ?
ಆ ಸರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ?
ಧನವುಳ್ಳವರ ನೆನೆದಡೆ ದರಿದ್ರ (ದಾರಿದ್ರ್ಯ?) ಹೋಹುದೆ?
ಪುರಾತರನು ನೆನೆದು ಕೃತಾರ್ಥರಾದೆವೆಂಬರು,
ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚಿನು ಗುಹೆಶ್ವರನು.
116
ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ ಭಕ್ತರಾದೆವಿಂಬಿರೊ?
ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ.
ಮೂರು ಸಂಕಲೆಯ ಕಳೆಯಲರಿಯಿರಿ.
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ.
117
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ.
ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ.
ಲಿಂಗಕ್ಕೆ ನೇಮವಿಲ್ಲ.
ಇರುಳಿಗೊಂದು ನೇಮ, ಹಗಲಿಗೊಂದು ನೇಮ?
ಲಿಂಗಕ್ಕೆ ನೇಮವಿಲ್ಲ.
ಕಾಯ ಒಂದು ದೆಸೆ, ಜೀವ ಒಂದು ದೆಸ,
ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ.
118
ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.
119
ಮಜ್ಜನಕ್ಕೆರೆದು ಫಲದ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ?
ಸೈದಾನವ(ಸುಯಿಧಾನವ?)ನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ!
120
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ.
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ.
ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ.
ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ._
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
121
ಅಗ್ನಿಸ್ತಂಭದ ರಕ್ಷೆಯಿದ್ದು ಮನೆ ಬೆಂದಿತ್ತಯ್ಯಾ.
ಬಲಮುರಿಯ ಶಂಖವಿದ್ದು ಪದ ಹೋಯಿತ್ತಯ್ಯಾ.
ಏಕಮುಖ ರುದ್ರಾಕ್ಷಿಯಿದ್ದು ವಿಘ್ನವಾಯಿತ್ತಯ್ಯಾ.
ಇವೆಲ್ಲವ ಸಾಧಿಸಿದಡೆ,
ಏನೂ ಇಲ್ಲದಂತಾಯಿತ್ತು ಕಾಣಾ ಗುಹೇಶ್ವರಾ.
122
ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ,
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ,
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,_
ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?
123
ಸಾಸವೆಯಷ್ಟ ಸುಖಕ್ಕೆ ಸಾಗರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.
ತನ್ನನ್ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ,
ಬಿನ್ನಾಣ ತಪ್ಪಿತ್ತು ಗುಹೇಶ್ವರಾ.
124
ಜವನ ಕದ್ದ ಕಳ್ಳನು ಅಗಲಿ ಮಿಕ್ಕು ಹೋದಡೆ,
ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು.
ಶರಣರ ಸಂಗವನರಸುವರೆಲ್ಲಾ ಅಲ್ಲಲ್ಲಿ ನೋಡಿರೆ!
ಸಾಧಕರೆಲ್ಲರೂ ಸಾಧಿಸ ಹೋಗಿ,
ಆಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ.
125
ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ ಅವಸ್ಥೆ ಮಾಣದು.
ಗುಹೇಶ್ವರನೆಂಬ [ನೆನಹು] ಉಳ್ಳನ್ನಕ್ಕ, ಲಿಂಗವೆಂಬುದ ಬಿಡಲಾಗದು.
126
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?
ಮುದ್ರಾಧಾರಿಗಳಪ್ಪರಯ್ಯಾ.
ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ
ವೇಷಧಾರಿಗಳಪ್ಪರಯ್ಯಾ.
ಲಾಂಭನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ,
ಗುಹೇಶ್ವರ ಮೆಚ್ಚನಯ್ಯಾ.
127
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು,
ವೀರರೂ ಅಲ್ಲ, ಧೀರರೂ ಅಲ್ಲ, ಇದು ಕಾರಣ_
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?
128
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ.
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ _ಗುಹೇಶ್ವರ.
129
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು,
ಗುಹೇಶ್ವರನರಿಯದ ಕರ್ಮಿಗಳು.
130
ಅಳವರಿಯದ ಭಾಷೆ, ಬಹುಕುಳವಾದ ನುಡಿ_
ಇಂತೆರಡರ ನುಡಿ ಹುಸಿಯಯ್ಯಾ.
ಬಹು ಭಾಷಿತರು; ಸುಭಾಷಿತ ವರ್ಜಿತರು.
‘ಶರಣಸತಿ ಲಿಂಗಪತಿ’ ಎಂಬರು, ಹುಸಿಯಯ್ಯಾ.
ಇಂತಪ್ಪವರ ಕಂಡು ನಾನು ನಾಚಿದೆನಯ್ಯಾ ಗುಹೇಶ್ವರಾ.
131
ಅಮರಾವತಿಯ ಪಟ್ಟಣದೊಳಗೆ,
ದೇವೇಂದ್ರನಾಳುವ ನಂದನವನವಯ್ಯಾ.
ಅತ್ತ ಸಾರೆಲೆ ಕಾಮಯ್ಯಾ, ಮೋಹವೆ ನಿನಗೆ?
ಲೋಕಾದಿಲೋಕವೆಲ್ಲವ ಮರುಳು ಮಾಡಿದೆ.
ಕಾಮಾ, ಗುಹೇಶ್ವರಲಿಂಗವನರಿಯೊ.
132
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ.
ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ.
133
ಆ ಮಾತು, ಈ ಮಾತು, ಹೋ ಮಾತ_ಎಲ್ಲವೂ ನೆರೆದು ಹೋಯಿತ್ತಲ್ಲಾ
ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ.
ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?
134
ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? [ಕನ್ನಗಳ್ಳಂಗೆ] ಕರುಳುಂಟೆ?
ಗುಹೇಶವರಾ, ನಿಮ್ಮ ಶರಣರು,
ಮೂರು ಲೋಕವರಿಯೆ ನಿಶ್ಚಟರಯ್ಯಾ.
135
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು.
ಲಿಂಗಭಕ್ತನ ಇಂಬಾವುದೆಂದರಿಯರು.
ಲಿಂಗಭಕ್ತ ಹಮ್ಮಬಿಮ್ಮಿನವನೆ? ಲಿಂಗಭಕ್ತ ಸೀಮೆಯಾದವನೆ?
ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ,
ಉಳಿದುವೆಲ್ಲಾ ‘ಸಟೆ’ ಎಂಬೆನು ಗುಹೇಶ್ವರಾ.
136
ಭಕ್ತ ಭಕ್ತನೆಂಬರು,
ಪೃಥ್ವಯ ಪೂರ್ವಾಶ್ರಯವ ಕಳೆಯ[ಲರಿಯ]ದನ್ನಕ್ಕ,
ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆಕಾಶದ ಪೂರ್ವಾಶ್ರಯದ ಕಳೆಯಲರಿಯದನ್ನಕ್ಕ,
ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,_
ಭಕ್ಕರೆಂದು ಲಿಂಗವ ಪೂಜಿಸುವವರ ಕಂಡು
ನಾನು ಬೆರಗಾದೆ ಗುಹೇಶಅವರಾ.
137
ಅನ್ಯ ರಜವ ಸೋಂಕದೆ, ತನ್ನ ರಜವ ಬಾಧಿಸದೆ,
ರವಿಯ ಬೆಳಸ ಬಳಸಗೆ ಲಿಂಗದಲ್ಲಿ ಬೆಳೆದ ಬೆಳಸ ತಂದು,
ಜಂಗುಮದಲ್ಲಿ ಸವೆಸುತಿಪ್ಪ[ನು]ಲಿಂಗಭಕ್ತ.
ಆ ಭಕ್ತನಲ್ಲಿ ಗುಹೇಶಅವರಲಿಂಗವಿಪ್ಪನು.
138
ತ್ರಿವಿಧದ ನಿತ್ಯಮ, ತ್ರಿವಿಧದ ಅನಿತ್ಯವ ಬಲ್ಲವರಾರೊ?
ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ;
ಆತನು ತ್ರಿವಿಧನಾಥನೆಂಬೆನು, ಆತನು ವೀರನೆಂಬೆನು.
ಆತನು ಧೀರನೆಂಬೆನು,
ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು.
139
ಪ್ರಣವಮಂತ್ರದ ಕರ್ಣದಲ್ಲಿ ಹೇಳಿ,
ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ,
ಪ್ರಾಣದಲ್ಲಿ ಲಿಂಗನಿಷ್ಟುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಕೆಯೊಳಗೆ?
ಅಲ್ಲಿ ಪ್ರಾಣವಿಷ್ಟುವಲ್ಲದೆ ಲಿಂಗವಿಷ್ಟುದೆ?
ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ,
ಆತನೆ ಪ್ರಾಣಲಿಂಗಸಂಬಂಧಿ.
ಅಲ್ಲದವರ ಮೆಚ್ಚವನೆ ನಮ್ಮ ಗುಹೇಶ್ವರಲಿಂಗವು.
140
ಕಾಯದೊಳಗಣ ಜೀವವ ಮೀರಿ ಹೋಹ ಕಳ್ಳನ ಸಂಗ ಬೇಡ.
ನಿಮ್ಮ ನಿಮ್ಮ ವಸ್ತುವ ಸುಯಿಧಾನವ ಮಾಡಿಕೊಳ್ಳಿ
ಗುಹೇಶ್ವರನೆಂಬ ಕಳ್ಳನ ಕೊಂದಡೆ ಅಳುವವರಾರೂ ಇಲ್ಲ!
141
ಅಕ್ಕಟಾ ಜೀವನ ತ್ರವಿಧವೆ,
ಮೂರಕ್ಕೆ ಮುಟ್ಟದೆ ಹೋದೆಯಲ್ಲಾ!
ಬಿಂದುವಿನ ಕೊಡನ ಹೊತ್ತುಕೊಂಡು,
ಅಂದಚಂದಗೆಟ್ಟು ಅಡುವರಯ್ಯಾ!
ಗುಹೇಶ್ವರ ನಿರಾಳವೆ, ಐದರಿಂದ ಕೆಟ್ಟಿತ್ತು ಮೂರು ಲೋಕ!
142
ಅಷ್ಟದಳಕಮಲದ ಮೇಲಿಪ್ಪ ನಿಶ್ಯೂನ್ಯನ ಮರ್ಮವನರಿಯದೆ,
ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು.
ಅಂಗದ ಆಪ್ಯಾಯನಕ್ಕೆ ಲಿಂಗವನರಸುವ,
ಭಂಗಿತರನೇನೆಂಬೆ ಗುಹೇಶ್ವರಾ.
143
ಲಿಂಗಾರ್ಚನೆಯಿಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ.
ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚನ್ನನ ಮನೆಯಲ್ಲಿ.
ಚಿತ್ರಗುಪ್ತರರಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ,
ಬೈಚಿಟ್ಟರಿ ಕೈಲಾಸದಲ್ಲಿ.
ನಿಮ್ಮ ಚಿಕ್ಕುಟ ಉದರದಲ್ಲಿ ಈರೇಳು ಭುಮನಂಗಳೆಲ್ಲವು.
ನಿಮ್ಮ ರೋಮಕೊಪದಲ್ಲಿ ಆಡಗಿದವು;
ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಗಳು]_ಗುಹೇಶ್ವರಾ.
144
ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ನ.
145
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛಗೆ ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ.
146
ಓಡಿನಲುಂಟೆ ಕನ್ನಡಿಯ ನೋಟ?
ಮರುಳಿನ ಕೂಟ ವಿಪರೀತಚರಿತ್ರ.
ನೋಟದ ಸುಖ ತಾಗಿ ಕೋಟಲೆಗೊಂಡೆನು.
ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ,
ಉಳಿದವರೆಲ್ಲರೂ ಸೂತಕಿಗಳು.
147
ಎಸೆಯದಿರು ಎಸೆಯದಿರು ಕಾಮಾ,
ನಿನ್ನ ಬಾಣ ಹುಸಿಯಲೇಕೊ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ಇವು ಸಾಲವೆ ನಿನಗೆ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ,
ಮರಳಿ ಸುಡಲುಂಟೆ ಮರುಳು ಕಾಮಾ?
148
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,
ಪತಿ ಭಕ್ತನಾದಡೆ ಕುಲಕಂಜಲಾಗದು.
ಸತಿ_ಪತಿಯೆಂಬ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ
ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ?
ಹಾಲುಂಡು ಮೇಲುಂಬರೆ ಗುಹೇಶ್ವರಾ?
149
ಉರಿಗೆ ಉರಿಯನೆ ತೋರುವೆನು, ಅಮೃತದ ಕಳೆಯಲ್ಲಿ ನಿಲಿಸುವೆನು.
ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ_ನಿರಂತರವಾಗಿರ್ದೆನಯ್ಯಾ.
150
ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
ಆ ಅದ್ಭುತದೊಳಗೊಂದು ಗ್ರಹ, ನಿರಂತರ ನಲಿದಾಡುತ್ತಿದ್ದಿತ್ತಯ್ಯಾ!
ವಜ್ರಯೋಗಿ ಖಗರಂಧ್ರಪುರದಲ್ಲಿ,
ಗುಹೇಶ್ವರಲಿಂಗವು ತಾನೇ ನೋಡಾ.
151
ಅನಲನಾರಣ್ಯದೊಳಗೆ ಎದ್ದಲ್ಲಿ;
ದೂ(ಧು?)ರದೆಡೆಯಲಾರನೂ ಕಾಣೆವು,
ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ!
ಮಾಯಾಮಂಜಿನ ಕೋಟಿಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ.
ಗುಹೇಶ್ವರನ ಶರಣ ಐಕ್ಯಸ್ಥಲದ ಮೆಟ್ಟಲೊಡನೆ,
ಸರ್ವವೂ ಸಾಧ್ಯವಾಯಿತ್ತು.
152
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೋ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_
ವಿಷಯವನತಿಗಳೆದಲ್ಲಿ ಫಲವೇನೊ?
ಇವೆಲ್ಲದ ಕೊಂದ ಪಾಪ ನಿಮ್ಮ ತಾಗುವುದು_ಗುಹೇಶ್ವರಾ.
153
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಎಡನೊ ಬಲನೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಮುಂದೊ ಹಿಂದೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಸ್ಥೂಲವೊ ಸೂಕ್ಷ್ಮವೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಪ್ರಾಣವೊ, ಪ್ರಾಣ ಲಿಂಗವೊ?
ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು?
154
ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು.
ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು.
ಪ್ರಾಣ ನಿಮ್ಮ ನೆರೆವ ರತಿಸುಖಕ್ಕೆ ಸಂದುದು_
ಇಂತು, ತನು ಮನ ಪ್ರಾಣ ನಿಮಗೆ ಸಂದಿಪ್ಪ
ನಿಸ್ಸಂಗಿಯಾದ ನಿಚ್ಚಟ,_ನಿಜಲಿಂಗೈಕ್ಯ ಕಾಣಾ ಗುಹೇಶ್ವರಾ.
155
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ,
ಇದ್ದುದನಾರು ಬಲ್ಲರೊ?
ಅದು ದೂರವೆಂದು, ಸಮೀಪವೆಂದಿ,
ಮಹಂತ ಗುಹೇಶ್ವರ [ನು], ಒಳೆಗೆಂದು ಹೊರಗೆಂದು,
ಬರುಸೂರೆವೋದರು.
156
ಖೇಚರಪಲನದಂತೆ ಜಾತಿಯೋಗಿಯ ನಿಲವು!
ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ?
ಭೂಚಕ್ರವಳಯವನು ಆಚಾರ್ಯ ರಚಿಸಿದ.
ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ ಗ್ರಾಮ ಪ್ರಭುವನೆ ನುಂಗಿ,
‘ಗುಹೇಶ್ವರ ಗುಹೇಶ್ವರ’ ಎನುತ ನಿರ್ವಯಲಾಯಿತ್ತು.
ಸೂತ್ರ: ಇಂತು ಮಾಹೇಶ್ವರಸ್ಥಲದಲ್ಲಿ ನಿಷ್ಠಾ [ಮುಖ]ದಿಂದ ಆಚರಿಸಿ ಐಕ್ಯವಾದ ಮಾಹೇಶ್ವರನು ಮುಂದೆ ಪ್ರಸಾದಿಸ್ಥಲದಲ್ಲಿ
ಸಾವಧಾನಮುಖದಿಂದ ಆಚರಿಸಿ ಬೆರಸುವ ಭೇದವು ಎಂತಿರ್ದುದೆಂದಡೆ_ಮುಂದೆ ಪ್ರಸಾದಿಸ್ಥಲವಾದುದು.
ಪ್ರಸಾದಿಸ್ಥಲ
157
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತಿ
ಬೇಡವನೆ(ದೆ?) ಲಿಂಗಜಂಗಮವು?
ಬೇಡುವರಿಗೆಯೂ ಬೇಡಿಸಿಕೊಂಬವರುಗೆಯೂ
ಪ್ರಸಾದವಿಲ್ಲ_ಗುಹೇಶ್ವರಾ.
158
ಲಿಂಗಜಂಗಮ ಒಂದೇ ಎಂದು ಕಂದೊಳಲುಗೊಂಡಿರಲ್ಲಾ!
ಮೂರೆಡೆಯ ಮುಟ್ಟಿತ್ತು ತ್ರಿವಿಧಾಚಾರ;_
ಲಿಂಗ ಒಂದೆಡೆಯಲ್ಲಿ, ಜಂಗಮ ಒಂದೆಡೆಯಲ್ಲಿ, ಪ್ರಸಾದ ಒಂದೆಡೆಯಲ್ಲಿ.
_ಇಂತು ಎಲ್ಲಿಯ ಪ್ರಸಾದವೊ ಗುಹೇಶ್ವರಾ.
159
ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ.
ತೃಷೆಯಾಯಿತ್ತೆಂದು ಅರ್ಪಿತವ ಮಾಡುವರಯ್ಯಾ.
ಇದೆಂತೊ ಭಕ್ತಸಂಬಂಧ ಇದೆಂತೊ ಶರಣಸಂಬಂಧ?
ಇದೆಂತೊ ಲಿಂಗಸಂಬಂಧ?
ಕಾರಣವಿಲ್ಲದ ಭಕ್ತಿಯ ಕಂಡಡೆ,
ಹೋಗ ನೂಕುವನು ಗುಹೇಶ್ವರಾ.
160
ಪ್ರಾಣದ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ?
ಇಷ್ಟಲಿಂಗಪೂಜಕರೆಲ್ಲ ನೇಮವ ಮಾಡುತ್ತಿಪ್ಪರು.
ಸೂನೆಗಾರಂಗೆ ಪ್ರಾಸಾದವೆಲ್ಲಿಯದೊ ಗುಹೇಶ್ವರಾ.
161
ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ.
162
ಮಾಡಿದ ಓಗರ ಮಾಡಿದಂತಿದ್ದಿತ್ತು,
ನೀಡಿದ ಕೈಗಳೆಡೆಯಾಡುತ್ತಿರ್ದವು.
ಲಿಂಗಕರ್ಪಿತವ ಮಾಡಿದೆವೆಂಬರು,
ಒಂದರಲೊಂದು ಸವೆಯದು ನೋಡಾ.
ಲಿಂಗವಾರೋಗಣೆಯ ಮಾಡಿದನೆಂಬರು,
ತಾವುಂಡು ನಿಮ್ಮ ದೂರುವರು ಗುಹೇಶ್ವರಾ.
163
ತಮ್ಮ ತಮ್ಮ ಮುಖದಲ್ಲಿ;
ಲಿಂಗವನೊಲಿಸಿದರು, ಆರಾಧಿಸಿದರು, ಬೇಡಿತ್ತ ಪಡೆದರು ಎಲ್ಲಾ_
ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ.
ಗಂಗೆವಾಳುಕರೆಲ್ಲ ವರಮುಖಿಗಳಾಗಿ
ಮೂರ್ತಿಯಳಿದು ಹೋದರು ಗುಹೇಶ್ವರಾ.
164
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು,
ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ_ಆತ ಲಿಂಗಪ್ರಸಾದಿ!
ಜಾತಿ ಸೂತಕವಳಿದು ಶಂಕೆ ತಲೆದೋರದೆ,
ನಿಶ್ಯಂಕನಾಗಿ_ಆತ ಸಮಯಪ್ರಸಾದಿ!
ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ_
ಬಸವಣ್ಣನೊಬ್ಬನೆ [ಆಚ್ಚ]ಪ್ರಸಾದಿ!
165
ತನುವ ತಾಗದ ಮುನ್ನ, ಮನವ ತಾಗದ ಮುನ್ನ,
ಆಪ್ಯಾಯನ ಬಂದು ಎಡೆಗೊಳ್ಳವ ಮುನ್ನ_ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ_ ಅರ್ಪಿತವ ಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು ಬಲದ ಕೈಯಲ್ಲಿ ಹುಲ್ಲು,
ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ!
166
ತನ್ನ ಮುಟ್ಟಿ ನೀಡಿದುದೆ ಪ್ರಸಾದ,
ತನ್ನ ಮುಟ್ಟಿ [ದೆ] ನೀಡಿದುದೆ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದು ಕಾರಣ_ಇಂತಪ್ಪ ಭೃತ್ಯಾಚಾರಿಗಲ್ಲದೆ
ಪ್ರಸಾದವಿಲ್ಲ ಗುಹೇಶ್ವರಾ.
167
ಆಧಿ ಇಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆನು,
ವ್ಯಾಧಿ ಇಲ್ಲದಿರ್ದಡೆ ಜಂಗಮಪ್ರಸಾದಿಯೆಂಬೆನು.
ಲೌಕಿಕವ ಸೋಂಕದಿರ್ದಡೆ ಸಮಯಪ್ರಸಾದಿಯೆಂಬೆನು.
_ಇಂತೀ ತ್ರಿವಿಧ ಪ್ರಸಾದಸಂಬಂಧಿಯಾದಡೆ
ಆತನ ಅಚ್ಚಪ್ರಸಾದಿಯೆಂಬೆನು ಕಾಣಾ_ಗುಹೇಶ್ವರಾ.
168
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ,
ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು.
ಆಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ
ಹೊರಳಿ ಹೋಗಬಾರದು!
ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ,
ಅರ್ಪಿತವ ಮಾಡಬಲ್ಲಡೆ;
ಭಿನ್ನಭಾವವೆಲ್ಲಿಯದೊ_ಗುಹೇಶ್ವರಾ?
169
ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ;
ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ].
ವಾಯು ಬೀಸದ ಮುನ್ನ, ಆಕಾಳ ಬಲಿಯದ ಮುನ್ನ,
ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ.
ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ ಭಂಗ ನೋಡಾ ಗುಹೇಶ್ವರಾ.
170
ಅನುಭಾವದಿಂದ ಹುಟ್ಟಿತ್ತು ಲಿಂಗ,
ಅನುಭಾವದಿಂದ ಹುಟ್ಟಿತ್ತು ಜಂಗಮ,
ಅನುಭಾವದಿಂದ ಹುಟ್ಟಿತ್ತು ಪ್ರಸಾದ.
ಅನುಭಾವ ಅನುವಿನಲ್ಲ ಗುಹೇಶ್ವರಲಿಂಗವನುಪಮ ಸುಖಿ.
171
ಮನಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾಮುಖದ ಜ್ಯೋತಿ ನಂದಿತ್ತು,
ಕತ್ತಲೆಯಲ್ಲಿ ಗತಿಯ ಕಾಣದೆ ದುಮ್ಮಾನ ನೆಲೆಗೊಂಡಿತ್ತು,
ಸುಮ್ಮಾನ ಹೋಯಿತ್ತು.
ಸಕಳಕಲಾವಿದ್ಯಾಗುರುವಲ್ಲಾ!ಮತಿತಾಳವೆಂಬ ಗುಹ್ಯತಾಗಿ,
ಸುತಾಳವೆಂಬ ಶರಣಸಂಗದಲ್ಲಿ ಬಿದ್ದು,
ಗುರುವಿಂಗೆ ಪ್ರಸಾದವಾದುದು, ಶಿಷ್ಯಂಗೆ ಓಗರವಾದುದು ನೋಡಾ!
ಲೌಕಿರಕಾಯಕ ನರಕ (ಲೌಕಿಕ ನಾಯಕನರಕ?)
ಅರ್ಪಿತಮುಖವನರಿಯದೆ, ಅನರ್ಪಿತಮುಖವಾಯಿತ್ತು ಗುಹೇಶ್ವರ
172
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ, ಪ್ರಸಾದವನಪ್ರಿಸಬಾರದು.
ಗುಹೇಶ್ವರಾ ನಿಮ್ಮ ಶರಣರು,
ಹಿಂದ ನೋಡಿ ಮುಂದುನರ್ಪಿಸುವರು.
173
ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು,
ಗುರುಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಈ ತೆರೆದ ಘನವಪ್ಪ ಲಿಂಗವನು,
ಒಂದನುವಿನಲ್ಲಿ ತಂದಿರಿಸಿ,
ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ,
ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ._
ಇಂತೀ ತೆರನ ಬೆಸಗೊಳ್ಳಬಲ್ಲಡೆ,
ಎನ್ನ ಬೆಸಗೊಳ್ಳೈ_ಗುಹೇಶ್ವರಾ.
ಸೂತ್ರ: ಇಂತು ಪ್ರಸಾದಿಸ್ಥಲದಲ್ಲಿ ಸಾವಧಾನಮುಖದಿಂದ ಆಚರಿಸಿ ಐಕ್ಯವಾದ ಪ್ರಸಾದಿಯು ಮುಂದೆ ಅನುಭವಮುಖದಿಂದ
ಆಚರಿಸಿ ಬೆರಸುವ ಭೇದವೆಂತಿರ್ದುದೆಂದಡೆ_ಮುಂದೆ ಪ್ರಾಣಲಿಂಗಿಸ್ಥಲವಾದುದು.
ಮಾಹೇಶ್ವರಸ್ಥಲ
174
ಕದಳಿಯ ಬನದ ಹೊಕ್ಕು ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ,
ಬರಿದೆ ಬಹುದೆ ಶಿವಜ್ಞಾನ?
ಪಡುವರ್ಣ (ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ?
ಅಷ್ಟಮದವಳಿಯದನ್ನಕ್ಕ [ಬರಿದೆ ಬಹುದೆ]
ಮದಮತ್ಸರ ಮಾಜಲಿಲ್ಲ, ಹೊದಕುಳಿಗೊಳಲಿಲ್ಲ,
ಗುಹೇಶಅವರಲಿಂಗ ಕಲ್ಪಿತದೊಳಗಿಲ್ಲ.
175
ಶಬ್ದಸ್ಪರ್ಶ ರೂಪು ರಸ ಗಂಧ, ಪಂಚ ಇಂದ್ರಿಯ,
ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು
ನೀವು ಕೇಳಿರೆ;
ಲಿಂಗದ ವಾರ್ತೆಯ ವಚನದಲ್ಲಿ ರಚನೆಯ ಮಾಡುವ (ವಿ?) ರಯ್ಯಾ.
ಸಂಸಾರದ ಮಚ್ಚು ಬಿಡದನ್ನಕ್ಕ, ಸೂಕ್ಷ್ಮ ಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ,
ಮನ ಪಾಕವಾಗದನ್ನಕ್ಕ?
176
ಮರ್ತ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು.
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜನೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.
177
ಬರಿಯ ನಚ್ಚಿನ ಮಚ್ಚಿನ ಭಕ್ತರು,
ಲಿಂಗವ ಮುಟ್ಟಿಯೂ ಮುಟ್ಟದ ಒಳಲೊಟ್ಟಿಗಳು,
ನೆರೆದು ಗಳಹುತ್ತಿಪ್ಪರು,
ತಮ ತಮಗೆ ಅನುಭಾವನ ನುಡಿವರು.
ಅನುಭಾವದ ಆಯತವನರಿಯದಿರ್ದರೆ ಹಿಂದಣ ಅನುಭಾವಿಗಳು?
ಗುಹೇಶ್ವರಲಿಂಗದ ಸುಖವನು ಮುಟ್ಟಿದರೆ, ಮರಳಿ ಭವಕಲ್ಪಿತವೆಲ್ಲಿಯದೊ?
178
ಭಾವನಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
179
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗಸ್ವಾಯತವಾದಡೇನು?
ಭಕ್ತವನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ? ಆ ಮಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ_ಗುಹೇಶ್ವರಾ.
180
ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ ಪ್ರಸಾದ ಮೃತ್ತಿಕೆಯಾಗಿ(ಗೆ?)
ಪ್ರಾಣಲಿಂಗವಲ್ಲೊ!
ಪ್ರಾಣಲಿಂಗವೆಂಬುದು ಕರಕಷ್ಟ ನೋಡಾ.
ಪ್ರಾಣಲಿಂಗವೆಂಬುದು ಕರನಾಚಿಕೆ ನೋಡಾ.
ಒಡೆದ ಮಡಕೆಗೆ ಒತ್ತಿ ಮಣ್ಣ ಮೆತ್ತಿದಡೆ,
ಅದು ತರಹರವಾಗಬಲ್ಲುದೆ ಗುಹೇಶ್ವರಾ?
181
ಇಷ್ಟಲಿಂಗನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ?
ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ.
ಇಷ್ಟಲಿಂಗ ಪ್ರಾಣಲಿಂಗದ ಭೇದವನು
ಗುಹೇಶ್ವರಾ, ನಿಮ್ಮ ಶರಣ ಬಲ್ಲ.
182
ವ್ರತಗೇಡಿ ವ್ರತಗೇಡಿ ಎಂಬವ, ತಾನೆ ವ್ರತಗೇಡಿ
ವ್ರತ ಕೆಡಲಿಕೇನು ಹಾಲಂಬಿಲವೆ?
ವ್ರತ ಕೆಟ್ಟ ಬಳಿಕ ಘಟ ಉಳಿಯಬಲ್ಲುದೆ?
ಕಾಯದೊಳಗೆ ಜೀವ ಉಳ್ಳನ್ನಕ್ಕ, ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರಾ.
183
ಅಂಗದ ಕಳೆಯಲೊಂದು ಲಿಂಗವ ಕಂಡೆ.
ಲಿಂಗದ ಕಳೆಯಲೊಂದು ಅಂಗವ ಕಂಡೆ.
ಅಂಗ ಲಿಂಗ[ದ] ಸಂದಣಿಯನರಸಿ ಕಂಡೆ, ನೋಡಿರೆ.
ಇಲ್ಲಿಯೆ ಇದಾನೆ ಶಿವನು! ಬಲ್ಲಡೆ ಇರಿಸಿಕೊಳ್ಳಿರಿ;
ಕಾಯವಳಿಯದ ಮುನ್ನ ನೋಡಬಲ್ಲಡೆ.
ಗುಹೇಶ್ವರಲಿಂಗಕ್ಕೆ ಬೇರೆ ಠಾವುಂಟೆ ಹೇಳಿರೆ?
184
ಪೂಜಿಸಿ ಕೆಳಯಿಂಕೆ ಇಳುಹಲದೇನೂ?
ಆನಾಗತ (ಅನಾಯತ?) ಪೂಜೆಯ ಮಾಡಲದೇನೊ?
ದೇಹವೆ ಪಿಂಡಿಗೆ, ಜೀವವೆ ಲಿಂಗ_ಗುಹೇಶ್ವರಾ.
185
ಅರಿದರಿದು ಅರಿವು ಬರುದೊರೆವೋಯಿತ್ತು.
ಕುರುಹ ತೋರಿದೊಡಿಂತು ನಂಬರು.
ತೆರಹಿಲ್ಲದ ಘನವ ನೆನೆದು
ಗುರು ಶರಣು ಶರಣೆಂಬುದಲ್ಲದೆ,
ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ
ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ.
186
ಸಂಬಂಧ ಅಸಂಬಂಧವೆಂದು ಹೆಸರಿಟ್ಟುಕೊಂಡು ನುಡಿವಿರಿ.
ಸಂಬಂಧವಾವುದಿ? ಅಸಂಬಂಧವಾವುನು?_ಬಲ್ಲಡೆ ನೀವು ಹೇಳಿರೆ?
ಕಾಯಸಂಬಂಧ ಜೀವಸಂಬಂಧ ಪ್ರಾಣಸಂಬಂಧ_
ಇಂತೀ ತ್ರಿವಿಧಸಂಬಂಧವನರಿದಡೆ
ಆತನೆ ಸಂಬಂಧಿ ಕಾಣಾ ಗುಹೇಶ್ವರಾ.
187
ಭಾನು ಶಶಿ ಕಳೆಗುಂದಿ,
ಪ್ರಾಣ ಆಪಾನ ವ್ಯಾನ ಉದಾನ ಸಮಾನವೆಂಬ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ_
ವಾಯುವನರಿಯವೊ!
ಆದಿಪ್ರಣಮವನರಿದೆಹೆನೆಂಬವಂಗೆ,
ಬಯಲು ಆಕಾಶದೊಳಗೊಂದು ರಸದ ಬಾವಿ!
ಮುನ್ನಾ ದವರೆಲ್ಲಿಯವರೆಂದೆನಬೇಡ
ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ!
188
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು_ವ, ಶ, ಷ, ಸ,
ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ದಾಕ್ಷಾಯಣಿ.
ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ,
ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು_ಬ, ಭ, ಮ, ಯ, ರ, ಲ,
ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಆಧಿದೇವತೆ ಬ್ರಹ್ಮನು.
ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಾಹಾಭೂತ,
ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_
ಡ, ಢ, ಣ, ತ, ಥ, ದ, ಧ, ನ, ಪ, ಫ,
ಆದರ ವರ್ಣ ಕೃಷ್ಣವರ್ಣ, ಅದಕ್ಕೆ ಅಧಿದೇವತೆ ವಿಷ್ಣು.
ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಪಟ್ಕೋಣೆ, ದ್ವಾದಳಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು_
ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ, ಠ
ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರನು.
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಾಹಾಭೂತ,
ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು_
ಅ, ಆ, ಇ, ಈ, ಉ, ಊ, ಋ, ೠ, ಒ, ಓ, ಏ, ಐ, ಓ, ಔ, ಅಂ, ಅಃ,
ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು.
ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು_ಹಂ, ಕ್ಷಂ.
ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು.
ಉನ್ಮನಿಜ್ಯೋತಿ ಬ್ರಹ್ಮರಂಧ್ರದ ಮೇಲೆ, ಸಹಸ್ರದಳ ಪದ್ಮ,
ಅಲ್ಲಿ ಆಮೃತವಿಹುದು, ಅಲ್ಲಿ, ‘ಓಂ’ ಕಾರಸ್ವರೂಪವಾಗಿ
ಗುಹೇಶ್ವರಲಿಂಗವು ಸದಾಸನ್ನಹಿತನು.
189
ಆಧಾರ ಸ್ವಾದಿಷ್ಠಾನ ಮಣಿಪೂರಕಸ್ಥಾನವನರಿಯರು
ಅಷ್ಟದಳ ಕಮಲದಲ್ಲಿ ಸೂಕ್ಷ್ಮನಾಳವೈದುವದೆ?
ಇನ್ನೇನನರಿವರಾರೊ? ಬೇರೆ ಮತ್ತೆ ಅರಿಯಲುಂಟೆ ಹೇಳಾ?
ಸಹಸ್ರದಳಕಮಲದ ಬ್ರಹ್ಮರಂಧ್ರದಲ್ಲಿಪ್ಪ
ಅಮೃತಸ್ವರವನರಿದು, ಹಿಡಿದುಕೊಂಬುದು, ಅರಿದು!_ಗುಹೇಶ್ವರಾ.
190
ಆಧಾರ ಲಿಂಗ ನಾಭಿ ಹೃದಯ ಕಂಠ ಭ್ರೂಮಧ್ಯದ ಮೇಲೆ
ನಿಂದುದದೇನೊ?
ನಿತ್ಯ ನಿರಂಜನ ನಿರುಪಾಧಿಕರೇಖೆಯಾಗಿ,
ಇರ್ದುದದೇನೊ?
ವಿದ್ರುಮಕುಸಮಚಕ್ಷು ಪರಿಮಳದಿಂದತ್ತತ್ತಲೆ,_
ಗುಹೇಶ್ವರನೆಂಬುದದೇನೊ?
191
ಘಟಸರ್ಪನಂತೆ ಅತಿಶಯವು!
ನಾಭಿಸರವರಸ್ಥಾನಕವೆ ದಳವೆಂಟು!
ನವದಳಕಮಲ ಊರ್ಧ್ವಮಂಡಲದ ಅಮೃತಸೇವನೆಯಾಗಿ,
ಶಿವಯೋಗಿಯಾದೆವೆಂಬರು.
ಗುಹೇಶ್ವರಲಿಂಗವು ಪವನವಿಯೋಗ!
192
ಅರ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು,
ತಪ್ಪುಕರಾಕರು ಹಲಬರು.
ಬಿಂದು ಬಿಂದುವನೆ ಕೂಡಿ ಲಿಂಗಲೀಯವಾಯಿತ್ತು.
ನಿಂದನು ಗುಹೇಶ್ವರನೆನ್ನೊಳಗೆ ಭರಿತನಾಗಿ.
193
ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ.
ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯುತ್ತು ಸ್ವದೇಹ ಶಿವಪುರದಲ್ಲಿ.
ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟೆ.
ಪೂಜಿಸುತಿರ್ದುದು_ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ!
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು.
194
ಕಳಸವುಳ್ಳ ಶಿವಾಲಯವೊಂದಕ್ಕೆ, ಚೌಕದಲ್ಲಿ ಎರಡು ಕಂಬ,
ಮೂರುಭಾವ_ಪೂಜಕರಾರೊ? ಅನುಭಾವಿಗಳಿನ್ನಾರೊ?
ಪೂಜಿಸುವರಿನ್ನಾರೊ?
ಇದರ ಸ್ಥಾನದ ನೆಲಗತಿಯನಾರು ಬಲ್ಲರು ಗುಹೇಶಅವರಾ?
195
ಕಾಲೇ ಕಂಬಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ!
ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ_ಇದೇನಯ್ಯಾ!
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ,
ಪಲ್ಲಟವಾಗದಂತಿದ್ದೆನಯ್ಯಾ.
196
ಅಚಲಸಿಂಹಾಸನವನಿಕ್ಕಿ;
ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
ರುಚಿಗಳೆಲ್ಲವ ನಿಲಿಸಿ_
ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,
ಖೇಚರಾದಿಯ ಗಮನ.
ವಿಚಾರಪರ ನುಂಗಿ._ಗುಹೇಶ್ವರ ನಿಂದ ನಿಲವು
ಸಚರಾಚರವ ನುಂಗಿತ್ತು!
197
ಭುವರ್ಲೋಕದಜ ಸ್ಥಾವರಕ್ಕೆ,
ಸತ್ಯಲೋಕದ ಅಗ್ಘಣಿಯಲ್ಲಿ ಮಜ್ಜನಕ್ಕೆರೆದು,
ದೇವಲೋಕದ ಪುಷ್ಪದಲ್ಲಿ ಪೂಜೆಯ ಮಾಡಿದಡೆ
ಹತ್ತು ಲೋಕದಾಚಾರ ಕೆಟ್ಟಿತ್ತು,
ಮೂರು ಲೋಕದರಸುಗಳು ಮುಗ್ಧರಾದರು,
ಗುಹೇಶ್ವರಲಿಂಗವು ಸ್ಥಾವರಕ್ಕೆ ಸ್ಥಾವರವಾದನು.
198
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ,
ಹೂವಿಲ್ಲದ ಪರಿಮಳದ ಪೂಜೆ!
ಹುದಯಕಮಳದಲ್ಲಿ ‘ಶಿವಶಿವಾ’ ಎಂಬ ಶಬ್ದ_
ಇದು, ಅದ್ವೈತ ಕಾಣಾ ಗುಹೇಶ್ವರಾ.
199
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕ,
ಮನೋಬುದ್ಧಿ ಚಿತ್ತ ಅಹಂಕಾರ ಚತುಷ್ಟಯ ಕರಣಂಗಳು,
ಸತ್ವ ರಜ ತಮದಲ್ಲಿ_ಆತ್ಮನ ಎತ್ತಲೆಂದರಿಯರು!
ಇದನರಿದಡೆ; ಸಮತೆ ಸದಾಚಾರ ಆಶ್ರಮಸ್ಥಾನಕ
ಸಹಸ್ರದಳಕಮಲದಲ್ಲಿ ಗುಹೇಶ್ವರಲಿಂಗವು.
200
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬವು;
ಪಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ_
ಅಂತರಂಗದಲ್ಲಿ ನಾಲ್ಕು ಸ್ಥಲ;
ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ,
_ಇಂತೀ ಸ್ಥಾನಂಗಳನರಿಯರಾಗಿ!
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ,
ನಾಶಿಕಾಗ್ರದಲ್ಲಿ ಪ್ರಸಾದಾಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ,
ಅಷ್ಟದಳಕಮಲದಲ್ಲಿ ಸರ್ವಸ್ವಾಯತ, _
ಇದು ಕಾರಣ ಗುಹೇಶ್ವರಾ ನಿಮ್ಮ ಶರಣರು ಸದಾ ಸನ್ನಹಿತರು.
201
ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾದಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ,
ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ,
ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ,
ಅಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ_
ಇವರೆಲ್ಲರು; ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ
ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ.
202
ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ,
ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ,
ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು.
ಶಿಖಾಗ್ರದಲ್ಲಿ ಸರ್ವಗತ ಶಿವನು._
ಆದಿ ಅನಾದಿಯಿಲ್ಲದಂದು ಗುಹೇಶ್ವರಂಲಿಂಗ ನಿರಾಳನು.
203
ಹೊತ್ತಾರೆ ಪೂಜಿಸಲು ಬೇಡ ಕಂಡಾ.
ಬೈಗೆಯೂ ಪೂಜಿಸಲು ಬೇಡ ಕಂಡಾ.
ಇರುಳುವುನು ಹಗಲುವನು ಕಳೆದು,
ಪೂಜೆಯನು ಪೂಜಿಸಲು ಬೇಕು ಕಂಡಾ.
ಇಂತಪ್ಪ ಪೂಜಿಯನು ಪೂಜಿಸುವರ,
ಏನಗೆ ನೀ ತೋರಾ ಗುಹೇಶ್ವರಾ.
204
ಅಂಗದಲ್ಲಿ ಮಾಡುವ ಸುಖ, ಲಿಂಗಕ್ಕದು ಭೂಷಣವಾಯಿತ್ತು,
ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ_
ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ.
ಅಂಗ ಲಿಂಗವೆಂಬನ್ನಕ್ಕರ ಫಲದಾಯಕ,
ಲಿಂಗೈಕ್ಯವದು ಬೇರೆ ಗುಹೇಶ್ವರಾ.
205
ಎನ್ನ ಮನದ ಕೊನೆಯ ಮೊನೆಯ ಮೇಲೆ.
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ,
ಆತನ ಕಂಡು ಬೆರಗಾದೆನವ್ವಾ,
ಎನ್ನಂತರಂಗದ ಅತುಮನೊಳಗೆ.
ಅನು (ನಿ?)ಮಿಷ ನಿಜೈಕ್ಯ ಗುಹೇಶ್ವರನ ಕಂಡು!
206
ಮನದ ಸುಖವ ಕಂಗಳಿಗೆ ತಂದರೆ,
ಕಂಗಳ ಸುಖವ ಮನಕ್ಕೆ ತಂದರೆ,
ನಾಚಿತ್ತು, ಮನ ನಾಚಿತ್ತು,
ಸ್ಥಾನವಿಲ್ಲಟವಾದ ಬಳಿಕ ವ್ರತಕ್ಕೆ ಭಂಗ ಗುಹೇಶ್ವರಾ.
207
ಎನಗೊಂದು ಲಿಂಗ ನಿನಗೊಂದು ಲಿಂಗ ಮನೆಗೊಂದು ಲಿಂಗವಾಯಿತ್ತು,
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ,
ಉಳಿ ಮುಟ್ಟದ ಲಿಂಗವ ಮನ ಮುಟ್ಟಬಲ್ಲದೆ ಗುಹೇಶ್ವರಾ.
208
ಅರಳಿಯ ಮರದ ಮೇಲೆ,
ಒಂದು ಹಂಸೆ ಗೂಡನಿಕ್ಕಿತೆ ಕಂಡೆ.
ಆ ಗೂಡಿನೊಳಗೆ,
ಒಬ್ಬ ಹೆಂಗಸು ಉಯ್ಯಾಲೆಯಾಡುತ್ತಿರ್ದಳು,
ಉಯ್ಯಾಲೆ ಹರಿದು,
ಹೆಂಗಸು ನೆಲಕ್ಕೆ ಬಿದ್ದು ಸತ್ತಡೆ,
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರಾ.
209
ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕುಟಿಗಂಗೆ ಹುಟ್ಟಿದ ಮೂರುತಿ,
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ!
ಈ ಮೂವರಿಗೆ ಹುಟ್ಟಿದ ಮಗನ (ಮಗುವ?) ಲಿಂಗವೆಂದು ಕೈವಿಡಿವ,
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ.
210
ಕಲ್ಲ, ದೇವರೆಂದು ಪೂಜಿಸುವರು_ಆಗದು ಕಾಣಿರೊ.
ಅಗಡಿಗರಾದಿರಲ್ಲ!
ಮುಂದೆ ಹುಟ್ಟುವ ಕೂಸಿಂಗೆ.
ಇಂದು ಮೊಲೆಯ ಕೊಡುವಂತೆ ಗುಹೇಶ್ವರ!
211
ಮೂರು ಪುರದ ಹೆಬ್ಬಾಗಿಲೊಳಗೊಂದು ಕೋಡಗ ಕಟ್ಟಿರ್ದುದ ಕಂಡೆ.
ಅದು ಕಂಡಕಂಡವರನೇಡಿಸುತ್ತಿದ್ದಿತ್ತು ನೋಡಾ!
ಆ ಪುರದರಸು ತನ್ನ ಪಾಯದಳ ಸಹಿತ ಬಂದಡೆ,
ಒಂದೆ ಬಾರಿ ಮುರಿದು ನುಂಗಿತ್ತ ಕಂಡೆ,
ಆ ಕೋಡಗಕ್ಕೆ ಒಡಲುಂಟು ತಲೆಯಿಲ್ಲ,
ಕಾಲುಂಟು ಹಜ್ಜೆಯಿಲ್ಲ, ಕೈಯುಂಟು ಬೆರಳಿಲ್ಲ.
ಇದು ಕರಚೋದ್ಯ ನೋಡಾ,
ತನ್ನ ಕರೆದವರ ಮುನ್ನವೆ ತಾ ಕರೆವುದು!
ಆ ಕೋಡಗ ತನ್ನ ಬಸುರಲ್ಲಿ ಬಂದ ಮದಗಜದ ನೆತ್ತಿಯನೇರಿ,
ಗಾಳಿಯ ದೂಳಿಯ ಕೂಡಿ ಓಲಾಡುತ್ತಿಹುದ ಕಂಡೆ!
ಪಾಯದ ಗಗನದ ಮೇಲೆ ತನ್ನಕಾಯವ,
ಪುಟನೆಗೆದು ತೋರುತ್ತಿಹುದ ಕಂಡೆ!
ಹತ್ತು ಮುಖದ ಸರ್ಪನ ತನ್ನ ಹೇಳಿಗೆಯೊಳಗಿಕ್ಕಿ,
ಆಡಿಸುತ್ತಿಹುದ ಕಂಡೆ!
ಐವರು ಕೊಡಗೂಸುಗಳ ಕಣ್ಣಿಂಗೆ,
ಕನ್ನಡಕವ ಕಟ್ಟುತಿಹುದ ಸುಳಿವ ಹರಿಯ ನೆತ್ತಿಯ ಮೆಟ್ಟಿ,
ಹುಬ್ಬೆತ್ತುತ್ತಿಹುದ ಕಂಡೆ!
ಆ ಕೋಡಗದ ಕೈಯೊಳಗೆ ಮಾಣಿಕವ ಕೊಟ್ಟರೆ,
ನೋಡುತ್ತ ನೋಡುತ್ತ ಬೆರಗಾದುದ ಕಂಡೆ!
ಕೂಡಲಿಲ್ಲ ಕಳೆಯಲಿಲ್ಲ;
ಗುಹೇಶ್ವರ (ನ) ನಿಲವು, ಪ್ರಾಣಲಿಂಗಸಂಬಂಧವಿಲ್ಲದವರಿಗೆ ಕಾಣಬಾರದು,
212
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ.
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೂ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ_ _ಗುಹೇಶ್ವರಾ.
213
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ?
ಎರಡಕ್ಕೆ ಹೇಳಲಿಲ್ಲಯ್ಯಾ.
ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನೆಪ್ಪನು?
214
ಒಡಲುವಿಡಿದು ಪಾಷಾಣಕ್ಕೆ ಹಂಗಿರಾದಿರಲ್ಲಾಸ.
ಅಂಗಸಿಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ!
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ.
ಗಸಣಿಗೊಳಗಾದರು ಗುಹೇಶ್ವರಾ,
215
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ!
ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು,
ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ.
ಉರಿಯ ಬಾಣದಲೆಚ್ಚು ತೆಗೆದೆ ನೋಡಾ!
ಒಂದೆ ಬಾಣದಲ್ಲಿ ಸತ್ತ ಮೃಗವು,
ಮುಂದಣ ಹೆಜ್ಜೆ ಯನಿಕ್ಕಿತ್ತ ಕಂಡೆ!
ಅಂಗೈಯೊಳಗೊಂದು ಕಂಗಳು ಮೂಡಿ,
ಸಂಗದ ಸುಖವು ದಿಟವಾಯಿತ್ತು!
ಲಿಂಗಪ್ರಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
216
ಉದಯ ಮುಖದಲ್ಲಿ ಪೂಜಿಸ ಹೋದರೆ,
ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು,
ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ.
ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ.
217
ಸೃಷ್ಟಿಯ ಮೇಲಣ ಕಣಿಯ ತಂದು,
ಅಷ್ಟತನುವಿನ ಕೈಯಲ್ಲಿ ಕೊಡಲು,
ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ- ಕೆಟ್ಟೆನಲ್ಲಾ.
ಅನಾಚಾರಿಯೆಂದು ಮುಟ್ಟರು ನೋಡಾ,
ಮುಟ್ಟದ ಭೇದವನು, ವಿಖಂಡಿಸಿದ ಭಾವವನು;
ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ?
218
ಇರುಳಿನ ಮುಖದೊಳಗೊಂದು ನವರತ್ನದಖಂಡಿತ ಹಾರವಡಗಿತ್ತು.
ಹಗಲಿನ ಮುಖದೊಳಗೊಂದು ನವಚಿತ್ರಪತ್ರದ ವೃಕ್ಷವಡಗಿತ್ತು.
ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ,
ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು.
219
ಹಿಡಿವ ಕೈಯ (ಮೇ)ಲೆ ಕತ್ತಲೆಯಯ್ಯಾ,
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ,
ನೆರೆವ ಮನದ ಮೇಲೆ ಕತ್ತಲೆಯಯ್ಯಾ,
ಗುಹೇಶ್ವರನೆಂಬುದು ಅತ್ತಲೆಯಯ್ಯಾ.
220
ಅಡವಿಯಲೊಂದು ಮನೆಯ ಮಾಡಿ,
ಆಶ್ರಯವಿಲ್ಲದಂತಾಯಿತ್ತು.
ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು.
ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ!
221
ಕಲ್ಪತದುದಯ ಸಂಕಲ್ಪಿತದ ಸುಳುಹು.
ಪವನಭೇದವನರಿಯದೆ,
ಪ್ರಾಣಲಿಂಗವೆಂಬುದು ಅಂಗಸಂಸಾರಿ.
ಜಂಗಮವೆಂಬುದು ಲಿಂಗಸಂಸಾರಿ.
ಪರವಲ್ಲ ಸ್ವಯವಲ್ಲ, ನಿರವಯ,
ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ.
222
ಇರುಳಿನ ಸಂಗವ ಹಗಲೆಂದರಿಯರು
ಹಗಲಿನ ಸಂಗವನಿರುಳೆಂದರಿಯರು.
ವಾಯಕ್ಕೆ ನಡೆವರು, ವಾಯಕ್ಕೆ ನುಡಿವರು,
ವಾಯುಪ್ರಾಣಿಗಳು.
ಗುಹೇಶ್ವರನೆಂಬ ಅರುಹಿನ ಕುರುಹು
ಇನ್ನಾರಿಗೆಯೂ ಅಳವಡದು.
223
ಯೋಗದಾಗೆಂಬುದನಾರು ಬಲ್ಲರೊ!
ಅದು ಮೂಗ ಕಂಡ ಕನಸು!
ನಡೆವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ!
ಒಂದನೊಂಬತ್ತ ಮಾಡಿ ನಡೆದೆಹೆವೆಂಬರು
ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರೆ],
ಮೂರು ಮುಖದ ಕತ್ತಲೆ ಒಂದು ಮುಖಾವಾಗಿ ಕಾಡುತ್ತಿಪ್ಪುದು.
ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ.
224
ಆಸನಬಂಧನರು ಸುಮ್ಮನಿರರು.
ಭಸ್ಮವ ಹೂಸಿ ಸ್ವರವ ಹಿಡಿವರು ಸಾಯದಿಪ್ಪರೆ?
ಸತ್ಯವನೆ ಮರೆದು, ಅಸತ್ಯವನೆ ಹಿಡಿದು,
ಸತ್ತು ಹೋದರು ಗುಹೇಶ್ವರಾ.
225
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ[ಮೊನೆಯ]ಮೇಲೆ
ಘನವನರಿದೆವೆಂಬರ ಅನುಮಾನಕ್ಕೆ ದೂರ.
ತಮತಮಗೆ ಅರಿದೆವೆಂಬರು,_ಕನಸಿನಲಿಂಗ ಗುಹೇಶ್ವರಾ.
226
ತಲೆಯಬಟ್ಟುಂಬುದ, ಒಲೆಯಲಟ್ಟುಂಬರು,
ಒಲೆಯಲುಳ್ಳುದ, ಹೊಟ್ಟೆಯಲುಂಬೈಸಕ್ಕರ
ಹೊಗೆ ಘನವಾಯಿತ್ತು_
ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ.
227
ಉತ್ತರಾಪಥದ ಮೇಲೆ ಮೇಘರ್ಷ ಕರೆಯಲು,
ಆ ದೇಶದಲ್ಲಿ ಬರನಾಯಿತ್ತು!
ಆ ದೇಶದ ಪ್ರಾಣಿಗಳೆಲ್ಲರೂ ಮೃತವಾದರು!
ಅವರ ಸುಟ್ಟ ರುದ್ರಭೂಮಿಯಲ್ಲಿ,
ನಾ ನಿಮ್ಮನರಸುವೆ ಗುಹೇಶ್ವರಾ.
228
ರಸದ ಬಾವಿಯ ತುಡುಕಬಾರದು,
ಕತ್ತರಿವಾಣಿಯ ದಾಂಟಿದವಂಗಲ್ಲದೆ.
ಪರುಷವಿದೆ ಕಬ್ಬುನವಿದೆ ಸಾಧಿಸಬಲ್ಲವಂಗೆ.
ಶ್ರೀಶೈಲದುದಕವ ಧರಿಸಬಾರದು ಗಹೇಶ್ವರಾ_
ನಿಮ್ಮ ಶರಣಂಗಲ್ಲದೆ.
229
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ, ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
230
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ,
ಲಿಂಗದ ಅನುಭಾವದ ಮಾತೇಕೊ?
ಮಾತಿನ ಮಾತಿನ ಮಹಂತರು ಹಿರಿಯರು!
ಗುಹೇಶ್ವರನೆಂಬ ಲಿಂಗಸಾರಾಯವು
ಬಹುಮುಖಿಗಳಿಗೆ ತೋರದು, ತೋರದು.
231
ಕರ್ಮಾಧೀನವೆಂಬ, ಕರ್ಮಿ. ಲಿಂಗಾಧೀನವೆಂಬ, ಭಕ್ತ.
ದೇಹ ಪ್ರಾರಬ್ಧವೆಂಬ, ದ್ವೈತಿ_
ಈ ತ್ರಿವಿಧವೆನ್ನದವ[ರ], ನೀನೆಂಬೆ, ಗುಹೇಶ್ವರಾ.
232
ಉದಕದಲುತ್ಪತ್ಯವಾದ ಶತಪತ್ರದಂತೆ
ಸಂಸಾರಸಂಗವ ತಾ ಹೊಗ(ದ್ದ?)ದಿರಬೇಕು.
ಕಾಯವೇ ಪೀಠ, ಮನವೇ ಲಿಂಗವಾದಡೆ,
ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ?_ಗುಹೇಶ್ವರಾ
233
ತಮ್ಮ ತಮ್ಮ ಭಾವಕ್ಕೆ, ಊಡಿಯಲ್ಲಿ ಕಟ್ಟಿಕೊಂಡ(ಬ?)ರು.
ತಮ್ಮ ತಮ್ಮ ಭಾವಕ್ಕೆ, ಕೊರಳಲ್ಲಿ ಕಟ್ಟಿಕೊಂಡು(ಬ?)ರು,
ನಾನ್ನೆನ ಭಾವಕ್ಕೆ ಪೂಜಿಸ ಹೋದಡೆ,
ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ.
ಸಾಧಕನಲ್ಲ ಭೇದಕನಲ್ಲ_ಗುಹೇಶ್ವರಲ್ಲಯ್ಯ ತಾನೆ ಬಲ್ಲ.
234
ನಾನು ಭಕ್ತನಾದಡೆ, ನೀನು ದೇವನಾದಡೆ,
ನೋಡಿವೆವೆ ಇಬ್ಬರ ಸಮರಸವನೊಂದು ಮಾಡಿ?
ಭೂಮಿಯಾಕಾಶವನೊಂದು ಮಾಡಿ,
ಚಂದ್ರ_ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ?
ಜಡೆಯ ಮೇಲಣ ಗಂಗೆ ನೀನು ಕೇಳಾ,
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ,
ರಂಡೆಗೂಳನುಂಬುದು ನಿಮಗೆ ಲೇಸೆ?
235
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು.
ದೂರ[ದ]ಧಾತು ಸಾರಾಯದೊಳಗಡಗಿತ್ತು.
ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ.
ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು,
ಘೋರ ರುದ್ರನ ದಳ ಮುರಿಯಿತ್ತು_ಗುಹೇಶ್ವರಾ.
236
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಪ್ರಾಣ ಹೋದರೆ ಕಾಯ ಬಿದ್ದಿತ್ತು,
ಲಿಂಗ ಒಂದೆಸೆಯಾದಡೆ ಮನ ನಾಚಿತ್ತು.
ಗುಹೇಶ್ವರನೆಲಿಲ್ಲದ ಘನವು.
237
ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ,
ದೇಹ ದಹನವಾಗವಾಗದು, ನಿಕ್ಷೇಪಿಸದೆ ಇರಲಾಗದು
ಸಂಸಾರಸಂಗದ ಕಷ್ಟವ ನೋಡಾ!
ಆನಾಹತದಲ್ಲಿ ನಿರೂಪ ಸ್ವಾಯತ,
ಗುಹೇಶ್ವರಾ, ನಿಮ್ಮ ಶರಣರಂತಹರಿಂತಹರೆಂದಡೆ,
ನಾಯಕನರಕ.
238
ಹರಿಯ ಬಾಯ ಹಾಲು, ಉರಿಯ ಕೈಯ ಬೆಣ್ಣೆ
ಗಿರಿಯ ಮೇಲಣ ಶಿಶು ಹರಿದಾಡಿತ್ತಿದೆ,
ಕರೆಯಿಂ ಭೋ ಹಾಲುಗುಡಿ[ಯೆ].
ಸುರಪತಿಯ ಗಜವೇರಿ ಮರಳಿ ಹೋಹನ ಕಂಡು
ಕರೆಯಿಂ ಭೋ.
ಹರನ ಮಂತಣೆಯ ಶೂಲದಲ್ಲಿ,
ಶಿರದಲುಂಗುಟ ಊರಿ, ನೆರೆವುತ್ತಿರ್ದುದ
ನಾನೇನೆಂಬೆ ಗುಹೇಶ್ವರಾ.
239
ಹೋಹ ಬಟ್ಟೆಯಲೊಂದು, ಮಾಯೆ ಇದ್ದುದ ಕಂಡೆ.
ಠಾಣಾಂತರ ಹೇಳಿತ್ತು, ಠಾಣಾಂತರ ಹೇಳಿತ್ತು,
ಆಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ.
ಗುಹೇಶ್ವರನ ಕರಣಂಗಳು ಕುತಾಪಿಗಳು.
240
ಮಂಜರನೇತ್ರದಲ್ಲಿ ಉಭಯಚಂದ್ರರ ಕಾಬವರಾರೊ?
ಕಂಡುದ ದಶರವಿ ಕರದಲ್ಲಿ ಪಿಡಿದು
ಅಗ್ನಿ ಮುಖಕ್ಕೆ ಸಲಿಸುವರಲ್ಲದೆ, ಲಿಂಗಮುಖಕ್ಕೆ ಸಲಿಸುವರಾರೊ?
ತದನಂತರ ಪ್ರಾಣಲಿಂಗಕ್ಕೆ ಕೊಟ್ಟು ಕೊಂಬಲ್ಲಿ
ನಿರಂತರ ಸಾವಧಾನಿ ಗುಹೇಶ್ವರಾ_ನಿಮ್ಮ ಪ್ರಸಾದಿ.
241
ಉಲಿನ ಉಯ್ಯಲೆಯ ಹರಿದು ಬಂದೇರಲು,
ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ!
ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ?
ಆತನಿರ್ದ ಸರ ಹರಿಯದೆ ಇದ್ದಿತ್ತು.
ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ?
242
ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು,
ಮತ್ತೈದರ ಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
ಹಣ್ಣ ಮೆಲ ಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ!
243
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು!
ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ.
ಬಾಳೆ ಬೀಗಿ ಸರ್ಪನೆದ್ದಡೆ_ನಿರಾಳವು ಕಾಣಾ ಗುಹೇಶ್ವರಾ.
244
ನಾಭಿ ಮಂಡಲದೊಳಗೆ ಈರೈದು ಪದ್ಮದಳ,
ಸದಮದ ಗಜಮಸ್ತಕದೊಳಗೆ ತೋರುತ್ತದೆ.
ಆಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ
ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ,
ಹೊಸರಸದ ಅಮೃತವನು ಓಸರಿಸಿ,
ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ.
245
ತೆಗೆದು ವಾಯುವ ನೇಣ ಗಗನದಲ್ಲಿ ಗಂಟಿಕ್ಕಿ,
ತ್ರಿಜಗಾಧಿಪತಿಯ ಕೋಣೆಯಲ್ಲಿ ಹಸುವಿದ್ದು,
ಕರುವ ಕೊಂದು ಕಂದಲನೊಡೆದು, ಕರೆಯಬಲ್ಲವಂಗಲ್ಲದೆ,
ಹಯನಾಗದು ನೋಡಾ!
ಹಯನೆ ಬರೆಡು, ಬರಡೆ ಹಯನು!
ಅರುಹಿರಿಯರ ಬಾಯ, ಕರು ಒದೆದು ಹೋಯಿತ್ತು!
ಎರಡಿಲ್ಲದ ನಿರಾಳ ಗುಹೇಶ್ವರ.
246
ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು!
ಕರೆದುಂಬಾತಂಗೆ ಕೈಕಾಲಿಲ್ಲ!
ಕರು ನಾಲ್ವೆರಳಿನ ಪ್ರಮಾದಲ್ಲಿಹುದು!
ಇದ, ಕರೆದುಂಬಾತನೆ ದೇವ_ಗುಹೇಶ್ವರಾ.
247
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ
‘ಸೋಹಂ ಸೋಹಂ’ ಎನಿತ್ತಿರ್ದತ್ತದೊಂದು ಬಿಂದು,
ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ.
ಗುಹೇಶ್ವರಾ ನಿಂದ(ನಿಮ್ಮ)ಲ್ಲಿಯೆ ಎನಗೆ ನಿಮಾಸವಾಯಿತ್ತು.
248
ಮೊಲೆಯಿಲ್ಲದಾವಿಂಗೆ ತಲೆ[ಯೆ]ಮೊಲೆ!
ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ!
ತಾ ಸತ್ತು, ಹಾಲ ಕುಡಿಯ ಬಲ್ಲಡೆ,
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ!
249
ಅಂಬುಧಿ ಉರಿಯಿತ್ತು ಅವನಿಯ ಮೇಲನರಿಯಲು.
ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ
ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ,
ಆ ಪ್ರಸಾದದಿಂದ ಸುಖಿಯಾದೆನಯ್ಯಾ_ಗುಹೇಶ್ವರಾ.
250
ಹಸಿಯ ಬಿಸಿಲನೆ ಕೋಯ್ದು ಪದಾರ್ಥವ ಮಾಡಿ,
ಉಸಿರ ಎಸರಲ್ಲಿ ಬಾಗುತ್ತಿಪ್ಪರಯ್ಯಾ!
ಇಕ್ಕಲಿಲ್ಲಾರಿಗೆಯು, ಎರೆಯಲ್ಲಿಲ್ಲಾರಿಗೆಯು
ಭಿಕ್ಷಾವೃತ್ತಿಗಳು ಬಂದು ಬೇಡುತ್ತಿಪ್ಪರಯ್ಯಾ.
ನಿಮ್ಮ ಒಕ್ಕುವ ಮಿಕ್ಕುದ ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ.
ಗುಹೇಶ್ವರಾ ನಿಮ್ಮ ಶರಣರು.
251
ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ,
ಹಿರಿಯರು ಓಗರವ ಮಾಡುತ್ತಿಪ್ಪರು.
ಗಿರಿ ಬೇಯದಾಗಿ ಓಗರವಾಗದು.
ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ.
252
ಚಂದ್ರಕಾಂತದ ಗಿರಿಗೆ ಉದಕದ ಸಂಚ,
ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ,
ಪರುಷದ ಗಿರಿಗೆ ರಸದ ಸಂಚ.
ಬೆರಸುವ ಭೇದವಿನ್ನೆಂತೊ?
ಅಪ್ಪುವನು ಅಗ್ನಿಯನು ಪಕ್ವಕ್ಕೆ ತಂದು ಅಟ್ಟುಂಬ ಭೇದವನು ಗುಹೇಶ್ವರ ಬಲ್ಲ.
253
ತನು ಹೊರಗಿರಲು, ಪ್ರಾಸಾದ ಒಳಗಿರಲು
ಏನಯ್ಯಾ ನಿಮ್ಮ ಮನಕ್ಕೆ ಮನ ನಾಚದು?
ಪ್ರಾಣಕ್ಕೆ ಲಿಂಗದಲ್ಲಿ ಪ್ರಸಾದವ ಕೊಂಡಡೆ,
ವ್ರತಕ್ಕೆ ಭಂಗ ಗುಹೇಶ್ವರಾ.
254
ಇಷ್ಟಲಿಂಗಕ್ಕೆ ರೂಪನರ್ಪಿನ ದ್ರವ್ಯಶುದ್ಧವಾಯಿತ್ತೆಂದು
ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ,
ನಿಚ್ಚ[ಕ್ಕೆ] ನಕ್ಕ ಕಿಲ್ಬಿಷವೆಂದರಿಯರು.
ಇಷ್ಟಲಿಂಗ ಪ್ರಾಣಲಿಂಗದ, ಆದಿ [ಅಂತುವ] ನಾರೂ ಅರಿಯರು_
ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು
ಹಿಂದುಗಾಣದೆ ಮುಂದುಗೆಟ್ಟರು.
255
ಮದ್ದ ನಂಬಿಕೊಂಡಡೆ ರೋಗ ಮಾಣದಿಪ್ಪುದೆ?
ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ?
ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ?
ಪ್ರಾಮಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ,
ನಾದ ಬಿಂದು ಸೂಸದ ಮುನ್ನ, ಆದಿಯ ಪ್ರಸಾದವ ಭೇದಿಸಿಕೊಂಡರು_
ಗುಹೇಶ್ವರಾ ನಿಮ್ಮ ಶರಣರು.
256
ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು,
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
ಬಯಲ ಹಿರಿಯರು ಬಯಲನೆ ಅರಸುವರು.
ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?
257
ಅಷ್ಟಾಂಗಯೋಗದಲ್ಲಿ;
ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ]
ಧ್ಯಾನ ಧಾರಣ ಸಮಾಧಿ[ಯೆಂಬ], ಎರಡು ಯೋಗ[ವುಂಟು].
ಅಲ್ಲಿ ಅಳಿದು ಕೂಡುವುದೊಂದು ಯೋಗ,
ಈ ಎರಡು ಯೋಗದೊಳಗೆ,
ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ.
258
ನಾಭಿಮಂಡಲದ ಉದಯವೆ ಉದಯ.
ಮಧ್ಯವಿರಾಳದ ನಿಲವಿನ ಪರಿಯ ನೋಡಾ!
ಪವನಶೂಲದ ಮೇಲೆ ಪರಿಣಾಮವಯ್ಯಾ.
ಊರ್ಧ್ವ ಮುಖದಲ್ಲಿ ಉದಯವಾಯುತ್ತು ಕೆಂಡೆ.
ಮಿಂಚುವ ತಾರಕಿ ಇದೇನೊ ಗುಹೇಶ್ವರಾ.
259
ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ,
ಸೂರ್ಯ ಚಂದ್ರರೆಂಬ ಅಂಕಣಿ, ಬ್ರಹ್ಮನೆ ಹಲ್ಲಣ,
ಸುರಾಳವೆಂದಲ್ಲಿ ನಿರಾಳವಾಯಿತ್ತು_ಗುಹೇಶ್ವರನೆಂಬ ರಾವುತಂಗೆ.
260
ಸಾಸಿರದೆಂಟನೆಯ ದಳದಲ್ಲಿ ಖೇಚರಿ ಚಲ್ಲಣಗಟ್ಟೆ,
ವಾಸುಗಿಯ ಫಣಾಮಣಿ ಪ್ರಜ್ವಲಿಸುವುದ ಕಂಡೆ.
ಅಸುರರೆಲ್ಲ ತಮತಮಗಂಜಿ ಓಸರಿಸಿ ಮುಂದೆ ನಡೆವಲ್ಲಿ,
ನಾಸಿಕ ಮನವ ಮುಸುಕುವುದು ಕಂಡೆ,
ತಾ ಸುಖಸ್ವರೂಪನಾದ; ಸುಖ ಮುಖಪ್ರವೇಶದಿಂದ!
ಗೋಸಾಸಿರ ನಡೆಗೆಟ್ಟವು ಗುಹೇಶ್ವರಾ, ನಿಮ್ಮುವ ನೆರೆದೆನಾಗಿ.
261
ಪಂಚೀಕೃತವೆಂಬ ಪಟ್ಟಣದೊಳಗೆ:
ಈರೈದು ಕೇರಿ, ನಾಲ್ಕೈದು ವೀಥಿ, ಅಲ್ಲಿ ಹಾವ ಕಂಡೆ.
ಹಿಂಡುಗಟ್ಟಿ ಆಡುವ ಮದಗಜವ ಕಂಡೆ!
ಕೇಸರಿಯ ಕಂಡು ಮನ ಬೆದರಿತ್ತು ನೋಡಾ.
ಮೂವರರಸಿಂಗೆ ಇಪ್ಪತ್ತೈದು ಪರಿವಾರ,
ಅಂಜಲಂಜ ಬೆಳಗಾಯಿತ್ತು ಗುಹೇಶ್ವರಾ.
262
ಅಪ್ಪುವಿನ ಬಾವಿಗೆ ತುಪ್ಪದ ಘಟ;
ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ.
ಪರುಷ ಮುಟ್ಟದ ಹೊನ್ನು!
ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ!
ಅರುವಿನ ಆಪ್ಯಾಯನ ಮರಹಿನ ಸುಖವೊ!
ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ.
263
ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು.
ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು,
ಲೆಪ್ಪದ ಜಲದ ಪಾದಘಾತದಂತೆ.
ಕರ್ತೃತ್ವವೆಲ್ಲಿಯದೊ ಗುಹೇಶ್ವರಾ.
264
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ, ಹಸರಿಟ್ಟು ಕರೆದವರಾರೊ?
ಆಕಟಕಟಾ ಶಬ್ದದ ಲಜ್ಜೆ [ಯ] ನೋಡಾ!
ಗುಹೇಶ್ವರನನರಿಯದ ಅನುಭಾವಿಗಳೆಲ್ಲರ
ತರಕಟ ಕಾಡಿತ್ತು.
265
ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
ಬೆಂಕಿಯ ಬೆಳಗ ಕಂಡ_ಇದು ಕಾರಣ,
ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ.
266
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ.
ಸಜ್ಞಾನಭರಿತ, ಅನುಪಮಸುಖಿ_ಗುಹೇಶ್ವರಾ ನಿಮ್ಮ ಶರಣನು.
267
ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ,
ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ.
ಛಪ್ಪನ್ನ ವೀಥಿಗಳ ದಾಂಟಿ, ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು,
ತ್ರಿಯೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ,
ಶಾಸನದ ಲಿಪಿಯಂ ತಿಳಿಯಲೋದಿ,
ಎಂಬತ್ತುನಾಲ್ಕುಲಕ್ಷದ್ವಾರದೊಳಗೆ ಹೊಕ್ಕು ಹೊರವಡುವ ಜೀವನ ತಿಳಿಯಲರಿಯದೆ
ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು,
ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೀತಿಯ
ನಿಮ್ಮ ಶರಣರಲ್ಲದೆ, ಲೋಕದ ಆಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ?
268
ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು.
ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ.
ಅಗ್ನಿ ಜಲದ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು.
ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು.
ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ_
ತಿಳಿಯ ಬಲ್ಲಡೆ ಗುಹೇಶ್ವರನ ನಿಲವು ತಾನೆ!
269
ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ
ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ!
ಅಂಗಸಂಗದ ಮಧ್ಯದಲ್ಲಿದ್ದು ಬೈಚಿಟ್ಟು ಬಳಸಿದ
ಗುಹೇಶ್ವರಾ ನಿಮ್ಮ ಶರಣ.
270
ಅಗ್ನಿ ಮುಟ್ಟಿದುದುವೊ, ಅಕಾಶದಲದೆವೊ
ಉದಕ ಮುಟ್ಟಿದುದುವೊ, ನಿರಾಳದಲದೆವೊ
ಬ್ರಹ್ಮರಂಧದಲದೆವೊ_ಭ್ರಮಿಸದೆ ನೋಡಾ!
ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
ಇದೇನು ಮಾಯೆ ಹೇಳಾ ಗುಹೇಶ್ವರಾ?
271
ಗ್ರಾಮಮಧ್ಯದ ಮೇಲಣ ಮಾಮರ,
ಸೋಮಸೂರ್ಯರ ನುಂಗಿತ್ತಲ್ಲಾ!
ಅಮರಗಣಂಗಳ ನೇಮದ ಮಂತ್ರ,
ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ!
ಸುಮನ ಸಜ್ಞಾನದೊಳಗಾಡುವ ಮಹಾಮಹಿಮಂಗೆ,
ನಿರ್ಮಳವಾಯಿತ್ತು_ಗುಹೇಶ್ವರಾ.
272
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ
ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ!
ಸಮತೆ ಸಮಾಧಿಯೆಂಬ ಸಮರಸದೊಳಗೆ;
ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ,
ಕೊಡನೊಡಯದೆ ಬೆಳಗುತ್ತಿದೆ, ಗುಹೇಶ್ವರಾ.
273
ಕಂಗಳ ಬೆಳಗ ಕಲ್ಪಿಸಬಾರದು, ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ,
ಪ್ರಮಾಣಿಸಬಾರದು.
ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ,
ನಿಂದ ನಿರಾಳ_ಗುಹೇಶ್ವರಾ.
274
ಸ್ಥೂಲ ಸೂಕ್ಷದೊಳಗೆ ಬೆಳಗುವ,
ಮಹಾಬೆಳಗಾಗಿ ಹೊಳೆವ,_ಜ್ಞಾನಜ್ಯೋತಿ ದಳಗಳನೆಲ್ಲವ ಮೀರಿ,
ನೆಳಲನುಂಗಿದ ಬಿಸಿಲೊಳಗೆ ಚಂದ್ರಮನುದಯ.
ಜಲಧಿವಳಯದ ಬೆಳಸ ಹೇಳಲು ಆರ ಅಳವಲ್ಲ.
ಆಳು ಆಳ್ದನ ನುಂಗಿ ಈರೇಳು ಭುವನವ ದಾಂಟಿ
ಗುಹೇಶ್ವರ ನಿಂದ ನಿಲವು ಹೊರಗು ಒಳಗನೆ ನುಂಗಿತ್ತು.
275
ಪ್ರಾಣಲಿಂಗ ಪರಾಪರವೆಂದರಿದು,
ಅಣು ರೇಣು ತೃಣ ಕಾಷ್ಠದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು,
ಇಂತು_ಕ್ಷಣವೇದಿ ಅಂತರಂಗದ ವೇಧಿಸಲ್ಕೆ
ಅಗಣಿತ ಅಕ್ಷೇಶ್ವರ ತಾನೆಂದರಿದು
ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ,
ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
276
ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು,
ಅಂಬು ಏನ ಮಾಡುವುದು?
ಎಲೆ ಎಲೆ ನೋಡಿರಣ್ಣಾ, ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು
ಏನು ಕಾರಣ ಹೇಳಾ ಗುಹೇಶ್ವಾರಾ?
277
ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು!
ನೋಡಿರೆ; ಅಪೂರ್ವ ಅಶತಿಯವ!
ಅಂಧಕ ಹಾವ ಹಿಡಿದ._
ಇದು ಕಾರಣ;ಲೋಕಕ್ಕೆ ಅರುಹದೆ,
ನಾನು ಅರಿದೆನು ಗುಹೇಶ್ವರಾ.
278
ನೀರ ಸುಟ್ಟ ಕಿಚ್ಚಿನ ಬೂದಿಯ ವರ್ಮವ ಬಲ್ಲಡೆ,
ನೀವು ಹೇಳಿರೆ?
ಬಯವ ಸುಟ್ಟ ಕಿಚ್ಚಿನ ಬೂದಿಯ ಕಂಡಡೆ,
ನೀವು ಹೇಳಿರೆ?
ವಾಯುನಿಂದ ಸ್ಥಾನಕ್ಕೆ(ವ?), ಗುಹೇಶ್ವರ ನಿಂದ ನಿಲವ ಕಂಡಡೆ,
ನೀವು ಹೇಳಿರೆ?
279
ಬಂದೂ ಬಾರದು ಹೊಂದಿಯೂ ಹೊಂದದು,
ನಿಂದೂ ನಿಲ್ಲದ ಪರಿಯ ನೋಡಾ!
ಬಿಂದು ನಾದವ ನುಂಗಿತ್ತು, ಮತ್ತೊಂದಧಿಕವುಂಟೆ?
ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ನತ ಸುಖವಿರಲು
ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?
280
ನೆನಹು ನೆನೆವ ಮನದಲ್ಲಿಲ್ಲ, ತನುವಿನಾಶೆ ಮುನ್ನವಿಲ್ಲ.
ಮನ ಮನವನೊಳಕೊಂಡ ಘನಘನವನೇನೆಂಬೆ!
ತನ್ನಲ್ಲಿ ತಾನೆಯಾಯಿತ್ತ!
ನೆನೆಯಲಿಲ್ಲದ ನಿಂದ ನಿರಾಳ ಅನಾಗತವಾದುದ ಕಂಡು
ನಾನು ಬೆರಗಾದೆನು.
ಅಂತು ಇಂತು ಎನಲಿಲ್ಲ, ಚಿಂತೆಯಿಲ್ಲದ ಮಹಾಘನವ.
ಗುಹೇಶ್ವರಲಿಂಗವ ಬೇರೆ ಅರಸಲಿಲ್ಲ.
281
ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ,
ಸಮಾಧಾನವಾಯಿತ್ತು ಸದಾಚಾರ._
ಇಂತೀ ತ್ರಿವಧವು ಏಕಾರ್ಥವಾಗಿ,
ಅರುಹಿನ ಹೃದಯ ಕಂದೆರೆದು,
ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು
ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು
ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು,
ಅಮೃತಸರೋವರದೊಳಣ ವಿವೇಕವೃಕ್ಷ ಪಲ್ಲವಿಸಲು
ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು,
ಪರಮಾನಂದವೆಂಬ ಮಠದೊಳಗೆ, ಪರಿಣಾಮ ವಶ್ಚಿಮಜ್ಯೋತಿಯ ಬೆಳಗಿನಲ್ಲಿ
ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು,
ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು
ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ
ನಮೋನಮೋ ಎಂಬೆ ಗುಹೇಶ್ವರಾ.
282
ಸ್ವಸ್ಥಾನ ಸ್ವ(ಸು?)ಸ್ಥಿರದ ಸಮನಮಂಟಪದೊಳಗೆ,
ನಿತ್ಯನಿರಂಜನ ಪ್ರಭೆಯೊಳಗೆ, ಶಿವಯೋಗದನುಭಾವವೇಕಾರ್ಥಾವಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮಸುಖಿಯಾಗಿರ್ದನು.
283
ಆಧಾರದಲ್ಲಿ ಅಭವನು ಸ್ವಾಯತ,
ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ,
ಮಣಿಪೂರಕದಲ್ಲಿ ಮೃಡನು ಸ್ವಾಯತ,
ವಿಶುದ್ಧಿಯಲ್ಲಿ ಸದಾಶಿವನು, ಸ್ವಾಯತ.
ಆಜ್ಞಾಚಕ್ರದಲ್ಲಿ ಶಾಂತಾತೀತನು ಸ್ವಾಯನು.
ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ!
284
ಆಡು ಮಂದರಗಿರಿಯ ಕೋಡು ಬ್ರಹ್ಮಶಿಖಿಯ,
ಬೇಡಿತ್ತನೀವ ವರದಾನಿಯನೇನೆಂಬೆನು?
ಆಡುತ್ತಾಡುತ್ತ ಅನಲನುರಿದು ಎರಡೊಂದಾದ ಪರಿಯ ನೋಡಾ!
ನೋಡುತ್ತ ನೋಡುತ್ತ ಅನಲನಲ್ಲಿಯೆ ಅರತು ಕೂಡಿದ,
ಮಹಾಘನವನೇನೆಂಬೆನು ಗುಹೇಶ್ವರಾ?
285
ಧರೆಯ ಮೇಲಳ್ಳ ಅರುಹಿರಿಯರೆಲ್ಲರು ನೆರಹಿ
ಪರಿಯಾಯಪರೀಕ್ಷೇಯನೊರೆದು, ಬಣ್ಣವ ನೋಡಿ,
ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ,
ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ
ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲವು_
ಮೇರು ಗಗನವ ನುಂಗಿತ್ತು.
286
ತಾಳಮರದ ಮೇಲೊಂದು ಬಾವಿ ಇದ್ದಿತ್ತಲ್ಲಾ.
ಆ ಬಾವಿಯ ತಡಿಯ ಹುಲ್ಲದು, ಒಂದು ಮೊಲ ಬಂದು ಮೇಯಿತ್ತಲ್ಲಾ!
ಕಾಯಸಹಿತಜೀವವ ಬಾಣಸ ಮಾಡಲರಿಯರು
ಗುಹೇಶ್ವರಾ_ನಿಮ್ಮಾಣೆ.
287
ಏಳು ತಾಳ[ದ] ಮೇಲೆ ಕೇಳುವ ಸುನಾದ,
ಸ್ಥೂಲ ಸೂಕ್ಷ್ಮ ಕೈಲಾಸದ ರಭಸ,
ಗಂಗೆವಾಳುಕಸಮಾರುದ್ರರ ತಿಂಥಿಣಿ,
ಗಗನಗಂಭೀರದ ಶಿವಸ್ತುತಿಯ ನೋಡ[ಲೊಡನೆ]
ಪಿಂಡ ಬ್ರಹ್ಮಾಂಡವಾಯಿತ್ತು_
ಅಖಂಡಿತ ನಿರಾಳ ಗುಹೇಶ್ವರಾ.
288
ವಾಮಭಾಗದಲೊಂದು ಶಿಶು ಹುಟ್ಟುತ್ತ ಕಂಡೆ.
‘ಜೋ ಜೋ’ ಎಂದು ಜೋಗುಳವಾಡಿತ್ತ ಕಂಡೆ.
ಜೋಗುಳವಾಡಿದ ಶಿಶು ಅಲ್ಲಿಯೆ ಲಯವಾಯಿತ್ತು (ಬಯಲಾಯಿತ್ತು?),
ಗುಹೇಶ್ವರನೆಂಬ ಶಬ್ದ ಅಲ್ಲಿಯೆ ಲಯವಾಯಿತ್ತು!
289
ಬ್ರಹ್ಮ ವಿಷ್ಣುವ ನುಂಗಿ, ವಿಷ್ಣು ಬ್ರಹ್ಮನ ನುಂಗಿ,
ಬ್ರಹ್ಮಾಂಡದೊಳಡಗಿ, ಶತಪತ್ರ ಸಹಸ್ರದಳಂಗಳ ಮೀರಿ
ಚಿತ್ರಗುಪ್ತರ ಕೈಯ ಪತ್ರದ ನಿಲಿಸಿತ್ತು
ಗುಹೇಶ್ವರನೆಂಬ ಲಿಂಗೈಕ್ಯ[ದ ನಿಲ]ವು.
290
ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ,
ಧಾರುಣಿಯ ಮೇಲೆ ತಂದಿರಿಸಿದವರಾರೊ?
ಸೋಮ ಸೂರ್ಯರ ಹಿಡಿದೆಳೆತಂದು,
ವಾರಿಧಿಯ ತಡೆಯಲ್ಲಿ ಓಲೆಗಳೆದವರಾರೊ?
ಊರಿಲ್ಲದ ಊರಿನಲ್ಲಿ[ಹೆ]ಮ್ಮಾರಿ ಹೊಕ್ಕುದ ಕಂಡು
ಆರೈಯ ಹೋಗಿ[ನೀ]ನಾನಿಲ್ಲ ಗುಹೇಶ್ವರಾ.
291
ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ,
ಮುರಿಯಿತ್ತು! ಎಂಟಾನೆ ಬಿಟ್ಟೋಡಿದವು!
ಹದಿನಾರು ಪ್ರಜೆ ಬೊಬ್ಬಿಡುತಿರ್ದರು.
ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ
ಗುಹೇಶ್ವರಲಿಂಗ ಶಬ್ದಮುಗ್ಧವಾಗಿರ್ದನು.
292
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತ್ತಿರ್ದುದ ಕಂಡೆ,
ಗಗನದ ಮೇಲೆ ಮಾಮರನ ಕಂಡೆ,
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ]ಗುಹೇಶ್ವರಾ.
293
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ!
ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ?
ಗಗನದ ವಾಯುವ ಬೆಂಬಳಿವಿಡಿದು,
ಅಗ್ನಿ ಅಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ!
ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ,
ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
294
ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ,
ಅರಿಯೆನರಿಯೆ ನೆರೆ ಶಿವಪಥವ
ಗುಹೇಶ್ವರಲಿಂಗದ ನಿಜವನರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ.
295
ಮನದ ಕಾಲತ್ತಲು ತನುವಿನ ಕಾಲಿತ್ತಲು.
ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು.
ಲಿಂಗ ಮುಖದಲಾದ ಸೂಚನೆಯ ಸುಖದ ಕಂಡು ಗಮನ ಕೆಟ್ಟಿತ್ತ.
ಅನುವಾಯಿತ್ತು ಅನುವಾಯಿತ್ತು, ಅಲ್ಲಿಯೆ ತಲ್ಲೀಯವಾಯಿತ್ತು_
ಗುಹೇಶ್ವರನೆಂಬ ಲಿಂಗೈಕ್ಯಂಗೆ!
296
ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ!
ಬಯಲ ಸಿಡಿಲು ಹೊಯ್ದಡೆ
ಹಿಂದಕ್ಕೆ (ಹಿಂದೆ?)ಹೆಣನ ಸುಡುವರಿಲ್ಲ ಗುಹೇಶ್ವರಾ.
297
ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿ,
ರೂಹಿಲ್ಲದ ಅನಲನು ಅವಗ್ರಹಿಸಿತ್ತು ನೋಡಾ!
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ!
ಅತ್ತಲ್ಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ!
ನಿತ್ಯಾನಂದಪರಿಪೂರ್ಣದ ನಿಲವಿನ,
ಅಮೃತಬಿಂದುವಿನ ರಸವ ದಣಿಯುಂಡು,
ಪಶ್ಚಿಮದಲ್ಲಿ ಗುಹೇಶಅವರಲಿಂಗವ ಸ್ವೀಕರಿಸಿತ್ತಲ್ಲಾ.
298
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು.
ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು.
ಗತಿಯನರಸಲುಂಟೆ? ಮತಿಯನರಸಲುಂಟಿ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು.
ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ.
299
ಬೆಕ್ಕ ನುಂಗಿದ ಕೋಳಿ ಸತ್ತು ಕೂಗಿತ್ತು ಕಂಡೆ.
ಕರಿಯ ಕೋಗಿಲೆ ಬಂದು ರವಿಯ ನುಂಗಿತ್ತು ಕಂಡೆ.
(ಕರಿಯ ಕೋಗಿಲೆಯ ರವಿ ಬಂದು ನುಂಗಿತ್ತು ಕಂಡೆ?).
ಸೆಜ್ಜೆ ಬೆಂದು ಶಿವದಾರ ಉಳಿಯಿತ್ತು.
ಪ್ರಾಣಲಿಂಗವೆಂಬ ಶಬ್ದ ವ್ರತಗೇಡಿಯಾಯಿತ್ತು
ನೀರ ಮೇಲಣ ಹೆಜ್ಜೆಯನಾರು ಬಲ್ಲವರಿಲ್ಲ.
ಗುಹೇಶ್ವರನೆಂಬ ಶಬ್ದ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ.
300
ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು?
ಪೂಜಿಸುವ ಭಕ್ತನಾರೊ?ಪೂಜೆಗೊಂಬ ದೇವನಾರೊ?
ಮುಂದು ಹಿಂದು, ಹಿಂದು ಮುಂದಾದಡೆ,
ಗುಹೇಶ್ವರ ನೀನು ನಾನು, ನಾನು ನೀನಾದೊಡೆ?
301
ಪೂರಾಯ ಗಾಯ ತಾಗಿ ನೊಂದೆನೆಂದರಿಯೆನಯ್ಯಾ,
ಇದ್ದೆನೆಂದರಿಯೆನಯ್ಯಾ, ಸತ್ತೆನೆಂದರಿಯೆನಯ್ಯಾ,
ಕಾಯ ಪಲ್ಲಟವಾಯಿತ್ತು ಗುಹೇಶ್ವರಲಿಂಗ ಸ್ವಾಯತವಾಗಿ.
302
ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ ನೋಡಾ.
ಪಿಂಡವೆ ಕುಂಡಲಿಯ ಶಕ್ತಿ, ಪದವೆ ಹಂಸನ ಚರಿತ್ರ,
ಬಿಂದು ಅನಾಹತವೆಂದರಿದು_ಗುಹೇಶ್ವರಲಿಂಗವ ಕೂಡಿದೆನು.
303
ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
ಮತ್ತೊಂದು ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
ಗುಹೇಶ್ವರಾ ನಿಮ್ಮ ನಾಮವಿಂತುಂಟಯ್ಯಾ.
304
ನೆನೆ ಎಂದಡೆ ಏನ ನೆನೆವೆನಯ್ಯಾ?
ಎನ್ನ ಕಾಯವೆ ಕೈಲಾಸವಾಯಿತ್ತು,
ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು.
ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?
ಗುಹೇಶ್ವರಲಿಂಗ ಲೀಯವಾಯಿತ್ತು.
305
ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
ಇಲ್ಲದ ಇಲ್ಲವೆ ಎಲ್ಲಿಂದ ಬಷ್ಟುದೊ?
ಅನುವರಿದು, ತನುವ ಮರೆದ ಭಾವರಹಿತ ಗುಹೇಶಅವರ.
306
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು,
ತುಂಬಿ ನೋಡಾ!
ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರವನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
ತುಂಬಿ ನೋಡಾ!
307
ಅಂತರಂಗ ಸನ್ನಹಿತ, ಬಹಿರಂಗ ನಿಶ್ಚಿಂತವೊ ಅಯ್ಯಾ.
ತನು ತನ್ನ ಸುಖ, ಮನ ಪರಮ ಸುಖವೊ,
ಅದು ಕಾರಣ ಕಾಯ ವಾಯವೊ, ಗುಹೇಶ್ವರ ನಿರಾಳವೊ ಅಯ್ಯಾ.
308
ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
ಭಾವತುಂಬಿ ಪರಿಣಾಮವರತು,
ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ.
309
ಆದಿ ಅನಾದಿ ಒಂದಾದಂದು, ಚಂದ್ರಸೂರ್ಯರೊಂದಾದಂದು,
ಧರೆ ಆಕಾಶ ಒಂದಾದಂದು;
ಗುಹೇಶ್ವರಲಿಂಗನು ನಿರಾಳನು.
310
ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ?
ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ?
ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
‘ನೀ’ ‘ನಾ’ ಎಂಬುದೆ?_ತೆರಹಿಲ್ಲ ಗುಹೇಶಅವರಾ.
ಸೂತ್ರ: ಇಂತು ಪ್ರಾಣಲಿಂಗಿಯ ಸ್ಥಲದಲ್ಲಿ ಅನುಭವ ಮುಖದಿಂದ ಆಚರಿಸಿ ಐಕ್ಯವಾದ ಪ್ರಾಣಲಿಂಗಿ ಮುಂದೆ
ಜ್ಞಾನಮುಖದಿಂದ ಆಚರಿಸಿ ಬೆರಸುವ ಭೇದವೆಂತಿರ್ದದೆಂದಡೆ_ಮುಂದೆ ಶರಣಸ್ಥಲವಾದುದು.
ಶರಣಸ್ಥಲ
311
ವಿರಹದಲುತ್ಯವಾದವರ, ಮಾಯದ ಬೇಳುವೆ ಹತ್ತಿತ್ತಲ್ಲಾ!
ಸ್ವರೂಪ ನಿರೂಪವೆಂದರಿಯರು.
ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ.
312
ಹಿಂದನರಿಯದದು ಮುಂದುನೇನ ಬಲ್ಲುದೊ?
ಉದಯ ಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕೆಳಿದರಲ್ಲಾ!
ಅಂದಂದಿನ ಘಟಜೀವಿಗಳು, ಬಂದ ಬಟ್ಟೆಗೆ ಹೋದರಲ್ಲಾ.
ಗುಹೇಶ್ವರನೆಂಬ ಲಿಂಗ ಆರಿಗೂ ಇಲ್ಲವಯ್ಯಾ.
313
ನೀರ ನಡುವೆ ಒಂದು ಗಿಡು ಹುಟ್ಟಿತ್ತು.
ಆ ಗಿಡುವಿನ ಎಲೆಯ ಮೆಲಬಂದಿತ್ತೊಂದು ಕೋಡಗ.
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ.
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರಾ.
314
ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು.
ಭಕ್ತನ ಅರಿವು ಸಮಾಧಾನದಲ್ಲಿ ಹೋಯಿತ್ತು.
ಜಂಗಮದ ಅರಿವು ಬೇಡಿದಲ್ಲಿ ಹೋಯಿತ್ತು.
ಇಂತು_ಕ್ರಿಯಾಗಮದೊಳಗೆ ಆವಂಗವೂ ಇಲ್ಲ.
ಗುಹೇಶ್ವರಾ ನಿಮ್ಮ ಶರಣರಪೂರ್ವ.
315
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು?
ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು?
ಸಾಣೆಯ ಮೇಲೆ ಶ್ರೀಗಂಧದ ತೇವರಲ್ಲದೆ
ಇಟ್ಟಿಗೆಯ ಮೇಲೆ ತೇಯಬಹುದೆ?
ರಂಭೆಯ ನುಡಿ ಸಿಂಬಿಗೆ ಶೃಂಗಾರವೆ?
ಜ್ಞಾನಿಯ ಕೂಡೆ ಜ್ಞಾನಿ ಮಾತಾಡುವನಲ್ಲದೆ
ಅಜ್ಞಾನಿಯ ಕೂಡೆ ಜ್ಞಾನಿ ಮಾತಾಡುವನೆ?
ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ
ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ?_ಅಂತೆ ಇದ್ದತ್ತು.
ಬರದಲ್ಲಿ ಬರಡ ಕರೆದೆಹೆನೆಂದು,
ಕಂದಲ ಕೊಂಡು ಹೋದರೆ,
ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.
316
ಕಂಗಳ ಮುಂದಣ ಕತ್ತಲೆ ಇದೇನೊ?
ಮನದ ಮುಂದಣ ಮರಣ(ಮರವೆ?)ಇದೇನೊ?
ಒಳಗಣ ರಣರಂಗ ಹೊರಗಣ ಶೃಂಗಾರ!
ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ?
317
ಉಚ್ಚೆಯ ಜವುಗಿನ ಬಚ್ಚಲ ತಂಪಿನಲ್ಲಿ;
ನಿಚ್ಚಕ್ಕೆ ಹೊರಳುವ ಹೀಹಂದಿಯಂತೆ,
ಶಿವನ ಇಚ್ಛೆಯನರಿಯದೆ ಮಾತನಾಡುವರ
ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು?
318
ಒಂದರ ಮೋರೆಯನೊಂದು ಮೂಸಿನೋಡಿ
ಮತ್ತೊಚ್ಚಿ ಬೇಕಿಂಗೆ (ಹೊತ್ತಿಂಗೆ?)ಕಚ್ಚಿಯಾಡಿ ಹೋದಂತೆಯಾಯಿತ್ತು,
ನೋಡಿರೆ, ಕಲಿಯುಗದೊಳಗಣ ಮೇಳಾಪವ!
ಗುರುವೆಂಬಾತ ಶಿಷ್ಯನಂತುವನರಿಯ.
ಶಿಷ್ಯನೆಂಬಾತ ಗುರುವಿನಂತುವನರಿಯ.
ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ.
ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ.
ಇದುಕಾರಣ_ಕಲಿಯುಗದೊಳಗೆ ಉಪದೇಶವ ತೋರುವ (ಮಾಡುವ?)
ಕಾಳಗುರಿಗೆಯ ಮಕ್ಕಳನೇನೆಂಬೆ ಗುಹೇಶ್ವರಾ?
319
ಅಂಬರದೊಳಗೊಂದು ಅಡವಿ ಹುಟ್ಟಿತ್ತು.
ಆ ಅಡವಿಯೊಳಗೊಬ್ಬ ವ್ಯಾಧನೈದಾನೆ.
ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು.
ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು!
ಅರಿವು ಬರಿದುಂಟೆ ಗುಹೇಶ್ವರಾ?
320
ಒಳಗೆ ನೋಡಿಹೆನೆಂದಡೆ ಒಳಗ ನೋಡಲಿಲ್ಲ.
ಹೊರಗೆ ನೋಡಿಹೆನೆಂದಡೆ ಹೊರಗ ನೋಡಲಿಲ್ಲ.
ಜ್ಞಾನವೆಂತುಟೊ? ಅಜ್ಞಾನವೆಂತುಟೊ?
ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ
ಏನು ಕಾರಣ ಅಳುವರೊ ಗುಹೇಶ್ವರಾ?
321
ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,
ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು.
ಸುಡಲಿ_ಅವಂದಿರ ಕೂಡೆ ಮಾರಿ ಹೋರಲಿ.
ಗುಹೇಶ್ವರಾ ನಿಮ್ಮ ಶರಣರಲ್ಲದವರೊಡನೆ,
ಬಾಯಿದೆರೆಯಲಾಗದು.
322
ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ;
ಆ ಸೂಳೆಗೆ ಮೂವರು ಮಕ್ಕಳು ನೋಡಾ!
ಆ ಮಕ್ಕಳ ಕೈ ಬಾಯಲ್ಲಿ ಮೂರುಲೋಕ ಮರುಳಾಗಿ
ಅಚ್ಚುಗಬಡುತ್ತಿರ್ದಡೇನು ಚೋದ್ಯವೊ?
ಕರಿಯ ಬಣ್ಣದ ಮುಸುಕನುಗಿದು ಬೆರಸಬಲ್ಲ ಶರಣಂಗಲ್ಲದೆ
ಪರಮತತ್ವ (ಪರತತ್ವ?)ವೆಂಬುದು ಸಾಧ್ಯವಾಗದು ಗುಹೇಶ್ವರಾ.
323
ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು,
ಮನದ ತಮಂಧ ಬಿಡದು ಮನದ ಕಪಟ ಬಿಡದು.
ಸಟೆಯೊಡನೆ ದಿಟವಾಡೆ ಬಯಲು ಬಡಿವಡೆಯಿತ್ತು!
ಕಾಯದ ಸಂಗದ ಜೀವವುಳ್ಳನ್ನಕರ,
ಎಂದೂ ಭವ ಹಿಂಗದು ಗುಹೇಶ್ವರಾ.
324
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಮ್ಮ (ತಾವು?) ಅರಿಯದೆ ಕೆಟ್ಟರು.
ತಮ್ಮ ಬುದ್ಧಿ ತಮ್ಮನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ?
325
ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು.
ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ!
ಆರುಹಿರಿಯರೆಲ್ಲರೂ ಮರುಳಾಗಿ ಹೋದರು.
ಕರಿಯ ಘಟ್ಟಿಯ ಬಿಳಿದು ಮಾಡಿ
ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ
ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ.
326
ನದೀಜಲ, ಕೂಪಜಲ, ತಟಾಕಜಲವೆಂದಂಬು
ಹಿರಿದು ಕಿರಿದಾದುದನರಿಯರು.
ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ
ಶೀಲಸಂಬಂಧಿಗಳು ಜಾತ್ಯಂಧರು,
ನಿಮ್ಮನೆತ್ತಬಲ್ಲರು ಗುಹೇಶ್ವರಾ?
327
ಶೀಲಶೀಲವೆಂಬ [ನೀಲಿಗ]ವಾರ್ತೆಯ ಬೇಳುವೆ,
ಬಾಲರಾಳಿಯಂತೆ ಆಳಿಗೊಂಡಿತ್ತು.
ಹೇಳಲಿಲ್ಲ ಕೇಳಲಿಲ್ಲದ ವಾಳಾವಳಿಯ ಬರಿಯ ಶಬ್ದ, ಬಯಲ ಹೋರಟೆ!
ಅಂಗಸುಖಿಗಳಿಗೆ ಲಿಂಗವಿಲ್ಲಾಗಿ,
ಗುಹೇಶ್ವರನೆಂಬ ಶೀಲವು ಸೀಮೆಯ ಮೀರಿ ಕಾಡಿತ್ತು.
328
ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ,
ಕಾಳೊರಗ ಬಂದು ಕಡಿಯಿತ್ತು ನೋಡಾ!
ಕೇರಿ ಕೇರಿಯೊಳಗೆಲ್ಲಾ ಹರಿದಾಡುತ್ತಿದ್ದವು,
ಮಾರಿಯ ತೋರದ ಮದಗಜಂಗಳು.
ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ,
ಹಾಳೂರು ಹಾಳಾಯಿತ್ತು ಗುಹೇಶ್ವರಾ!
329
ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ ಭಂಗವಾಯಿತ್ತು.
ವ್ಯಸನದಿಚ್ಛೆಗೆ ಹರಿದಾಡುವವರು ಬಲ್ಲಡೆ ಹೇಳಿರೆ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿಚ್ಛೆಗೆ ಹರಿದು
ಹಂದಿಯೊಡನಾಡಿದ ಕಂದಿನಂತಾದರು.
ಇನ್ನು ಬಲ್ಲರೆ ಗುಹೇಶ್ವರಾ ಮಾಯಾಮುಖರು ನಿಮ್ಮನು?
330
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು.
ಬಲ್ಲೆನೆಂಬ ಅರುಹಿರಿಯರೆಲ್ಲಾ ಅಲ್ಲಿಯೇ ಮರುಳಾದರು.
ನೂಲ ಮಾರಿ ಹತ್ತಿಯ ಬಿಲಿಯ ಹೋದರೆ,
ಅದು ಅತ್ತಲೆ ಹೋಯಿತ್ತು ಗುಹೇಶ್ವರಾ.
331
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು,
ಅದನರಸಲರಸ ಹೋಯಿತ್ತಯ್ಯಾ.
ನಡುನೀರೊಳಗೆ ಮುಳುಗಿ, ಆಳವರಿದು ನೋಡಿ
ಕಂಡೆಹೆನೆಂದಡೆ ಕಾಣಬಾರದು.
ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ
ದೂರದಲ್ಲಿ ಕಾಣಬರುತ್ತಿಹದು ನೋಡಾ.
ಸಾರಕ್ಕೆ ಹೋಗಿ ಹಿಡಿದುಕೊಂಡೆಹೆನೆಂಬ ಧೀರರೆಲ್ಲರ ಮತಿಯ
ಬಗೆಯ ನುಂಗಿತ್ತು ಗುಹೇಶ್ವರಾ.
332
ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು,
ಉಪಚಾರದ ಲಿಂಗ ಉಪಚಾರದ ಜಂಗಮವು.
ಉಪಚಾರದ ಪ್ರಸಾದವ ಕೊಂಡು, ಗುರುವಿಂಗೆ ಭವದ ಲೆಂಕನಾಗೆ,
ಅಂಧಕನ ಕೈಯ ಅಂಧಕ ಹಿಡಿದಂತೆ_
ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ.
333
ಲಿಂಗ_ಜಂಗಮದ ಸಂಬಂಧ ಸಯವ ಮಾಡಿಹೆನೆಂಬರು.
ಗುರು ಮುನ್ನವೊ? ಶಿಷ್ಯ ಮುನ್ನವೊ?
ಆವುದು ಮುನ್ನವೆಂದರಿಯರು ನೋಡಾ!
ಇದು ಕಾರಣ_ಆವ ಸಂಬಂಧವನರಿಯರು ಗುಹೇಶ್ವರಾ.
334
ಕಾಮನ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ,
ಯೋಗಿಯಾದಡೇನು? ಭೋಗಿಯಾದಡೇನು?
ಶೈವನಾದಡೇನು? ಸನ್ಯಾಸಿಯಾದಡೇನು?
ಅಶವನ ತೊರೆದಾತ ವ್ಯಸನವ ಮರೆದಾತ_
ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.
335
ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ?
ಹಿರಿದು ಕಿರಿದೆಂದಲ್ಲಿ ಏನಾಯಿತ್ತು?
ಹಿರಿದು ಕಿರಿದೆಂಬ ಶಬ್ದವಡಗಿದರೆ,
ಆತನೆ ಶರಣ ಗುಹೇಶ್ವರಾ.
336
ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ,
ಇದೇವಯ್ಯಾ, ಸೂಕ್ಷ್ಮದ ಗಂಟಲಗಾಣವಿದೇನಯ್ಯಾ?
ನೆಳಲ ರೂಹಿಂಗೆ ಬಯಲು ಸಯವೆ
ಅಪಾಯರಹಿತ ಗುಹೇಶ್ವರಾ?
337
ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ!
ಸಂಸಾರ ಸಂಗವ ಭೇದಿಸಿ, ನೋಡುವಡೆ ದೂರ,
ಚಿಂತೆಯನೆ ಗೆಲಿದು ಸುಳಿದಡೆ,
ಗುಹೇಶ್ವರನೆಂದರಿದ ಶರಣಸಾರಾಯನು.
338
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ,
ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ.
ಇದೇನೊ? ಇದೆಂತೊ? ಅರಿಯಲೆ ಬಾರದು.
ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ,
ಉರಿ ಹತಿತ್ತು ಮೂರು ಲೋಕದ ಗುಹೇಶ್ವರಾ.
339
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ,
ತಂಗಾಳಿ ಪರಿಮಳದೊಗೂಡಿ ಸುಳಿವಂತೆ ಸುಳಿಯಬೇಕು.
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಾ.
340
ಕಾರ ಮೇಘವೆದ್ದು ಧಾರಾವರ್ತ ಸುರಿವಾಗ,
ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ!
ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ!
ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ
ಸೂರಿಯ (ಸೂರ್ಯ?)ರನೇಕರು ಮಡಿಯರು ಗುಹೇಶ್ವರಾ.
341
ತಾನು ಮಿಂದು ಕಾಲ ತೊಳೆದ ಬಳಿಕ
ಲಿಂಗಕ್ಕೆ ಮಜ್ಜನಕ್ಕೆರೆವರು.
ತಾನು ಲಿಂಗವೊ ಲಿಂಗ ಲಿಂಗವೊ?
ಏನು ಲಿಂಗ[ವು] ? ಬಲ್ಲಡೆ ನೀವು ಹೇಳಿರೆ.
ಲಿಂಗಸಂಬಂಧವನರಿಯದೆ ಕೆಟ್ಟರು ಗುಹೇಶ್ವರಾ.
342
ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
ದೇವರಾದೆವಂದಡೆ ನಾಚಿದೆನು ಗುಹೇಶ್ವರಾ.
343
ನಡೆವರಿಗೊಂದು ಬಟ್ಟೆ, ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು ಹೋ ನಡೆಗೆಟ್ಟಿತ್ತು ನಿಂದಿತ್ತಲ್ಲಾ!
ಗಮನಾಗಮನದ ನುಡಿಯ ಬೆಡಗಿನ ಕೀಲ,
ಮಡಗಿದಾತ ಬಲ್ಲ ಗುಹೇಶ್ವರಾ.
344
ಸುತ್ತಿತ್ತು ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕಿನ ಗಮನವಂದಂದಿಂಗೆ;
ಅತ್ತಲಿತ್ತ ಹರಿವ ಮನವ ಚಿತ್ರದಲ್ಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
345
ಏನೆಂದರಿಯರು ಎಂತೆಂದರಿಯರು,
ಅರಿವನರಿದೆವೆಂಬರು, ಮರಹ ಮರೆದೆವೆಂಬರು.
ಒಂದನರಿದೆನೆಂದಡೆ ಮುಖ ಮೂರಾಯಿತ್ತು.
ಮೂರು ಮುಖವ ಏಕಗ್ರಾಹಕವ ಮಾಡಿದಲ್ಲದೆ
ಶರಣನಲ್ಲ ಗುಹೇಶ್ವರಾ.
346
ಪರಿಪರಿಯ ಅಲೋಹ[ವ] ಪರುಷ ಮುಟ್ಟಲು
ಹೊನ್ನು ಪರಿವರ್ತನಕ್ಕೆ ಒಂದು ಸಲುತ್ತಿರ್ದುವು ನೋಡಾ
ಪರುಷವ ಮಾಡುವ ಷುರುಷರೆಲ್ಲರು
ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ.
ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ.
ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು.
ಪರುಷದಂತಿದ್ದರು ನಮ್ಮ ಗುಹೇಶ್ವರನ ಶರಣರು.
347
ಮಾಮರದೊಳಗೊಂದು ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳು ಉದುರವಿನ್ನೆಂತೊ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ,
ಆ ಫಲವ ನಾನು ಮುಟ್ಟಿನು ಕಾಣಾ ಗುಹೇಶ್ವರಾ.
348
ಸಂಸಾರಸಂಗವ ಭೇದಿಸಿ, ನೋಡುವಡೆ,
ದೂರವೆ? ಕಪಟ ಕನ್ನಡವೆ?
ರವಿಯ ತಪ್ಪಿನ ಸುಳಿವ ಗುಹೇಶ್ವರನೆಂದರಿದ ಶರಣ ಸಂಸಾರಿಯೆ?
349
ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
ನಿನ್ನೊಳಗೆ ಅರಿವು ಭಿನ್ನವಾಗಿರುತ್ತಿರಲು
ಮುನ್ನವೆ ನೀನು ದೂರಸ್ಥ ನೋಡಾ!
ಭಿನ್ನವಿಲ್ಲದ ಅಜ್ಞಾನವ ಭಿನ್ನವ ಮಾಡಬಲ್ಲಡೆ
ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ.
350
ಸುಖವ ಬಲ್ಲಾತ ಸುಖಿಯಲ್ಲ, ದುಃಖವ ಬಲ್ಲಾತ ದುಃಖಯಲ್ಲ.
ಸುಖ_ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ.
ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ,
ಬಲ್ಲ ಗುಹೇಶ್ವರ.
351
ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿ ಸ್ಥಿತಿ ಲಯವಲ್ಲದೆ
ಮರ್ತ್ಯಲೋಕದೊಳಗಣ ಆಕೃತಿ ಅಲ್ಲಿಲ್ಲವೇಕಯ್ಯಾ?
ಆ ಲೋಕದೊಳಗೆ ಉತ್ಪತ್ಯ(ತ್ತಿ?) ಸ್ಥಿತಿ ಲಯ_ಇದೆಂತಹ ಕರ್ಮಬದ್ಧರು?
ಒಂದರ ಪರಿ ಒಂದಕ್ಕಿಲ್ಲ ಕಂಡಿರೆ!
ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ,
ಅಲ್ಲಿಯೆ ಉತ್ಪತ್ತಿ ಸ್ಥಿತಿ ಲಯ_ಇದೆಂತಹ ಕರ್ಮದ ಪರಿಯೊ?
ಮತ್ತಾವ ಪರಿಯೂ ಇಲ್ಲ, ಲಿಂಗದ ಪರಿಯ ಮಾಡಿದ ಗುಹೇಶ್ವರ.
352
ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು?
ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ,
ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ?
ಗುಹೇಶ್ವರಾ, ನಿಮ್ಮ ಶರಣರು,
ಬಾರದ ಭವದಲ್ಲಿ ಬಂದ ಕಾರಣ_ಸುಖಿಗಳಾದರಯ್ಯಾ.
353
ಲೋಕ ಒಂದನೆಂದಡೆ ತಾನೊಂದನೆನಬೇಡ.
ಮತ್ತಾರೇನಂದಡೆಯೂ ತನ್ನನೆಂದರೆನಬೇಡ.
ಭೈತ್ರಕ್ಕೆ ಬೆಂಗುಂಡವಿಕ್ಕಿದಂತಿರಬೇಕು ಹಿರಿಯರು_ಗುಹೇಶ್ವರಾ.
354
ನಾಚಿ ಮಾದುದು ಮಾದುದಲ್ಲ, ನಾಚದೆ ಮಾದುದು ಮಾದುವಲ್ಲ.
ಹೇಸಿ ಮಾದುದು ಮಾದುದಲ್ಲ, ಹೇಸದೆ ಮಾದುದು ಮಾದುದಲ್ಲ.
ಅಲಸಿ ಮಾದುದು ಮಾದುದಲ್ಲ, ಅಲಸದೆ ಮಾದುದು ಮಾದುದಲ್ಲ.
ನಾಚದೆ ಹೇಸದೆ ಅಲಸದೆ ಮಾದಡೆ ಮಾದುದು_ಗುಹೇಶ್ವರಾ.
355
ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ ಹಿಂಗಿ,
ಆರಿಗಿಲ್ಲದ ಅವಸ್ಥೆ ಎನಗಾಯಿತ್ತು.
ಆ ಅವಸ್ಥೆ ಅರತು ನೀನು, ನಾನೆಂದರಿದೆ ಗುಹೇಶ್ವರಾ.
356
ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
ಮನಬಂದ ಪರಿಯಲ್ಲಿ ನುಡಿವಿರಿ,
ಗುಹೇಶ್ವರಲಿಂಗ ನಿಮಗೆಲ್ಲಿಯದೊ?
357
ಆದಿಯನರಿಯರು ಅನಾದಿಯನರಿಯರು,
ಒಂದರೊಳಗಿಪ್ಪ ಎರಡನರಿಯರು,
ಎರಡರೊಳಗಿಪ್ಪ ಮೂರರ ಕೀಲನರಿಯರು,
ಮೂರರ ಸಂದು ಆರಾದುದನರಿಯರು.
ಆರೆಂದು ನುಡಿವ ಗಾರು ಮಾತು ತಾನಲ್ಲ
ಗುಹೇಶ್ವರ[ನ] ನಿಲವನರಿದಡೆ, _ಒಂದೂ ಇಲ್ಲ.
ಅರಿಯದಿರ್ದಡೆ ಬಹುಮುಖವಯ್ಯಾ.
358
ಸುಖವಿಲ್ಲ ಸೂಳೆಗೆ ಪಥವಿಲ್ಲ ಶೀಲಕ್ಕೆ
ಮಾಡಲಾಗದು ನೇಮವ, ನೋಡಲಾಗದು ಶೀಲವ.
ಸತ್ಯವೆಂಬುದೆ ಸತ್ಶೀಲ, _ಗುಹೇಶ್ವರಲಿಂಗವನರಿಯ ಬಲ್ಲವಂಗೆ!
359
ಆಕಾಶ ನಿರಾಕಾರವೆಂಬೆರಡೂ ಸ್ವರೂಪಂಗಳು;
ಒಂದು ಆಹ್ವಾನ, ಒಂದು ವಿಸರ್ಜನ.
ಒಂದು ವ್ಯಾಕುಳ ಒಂದು ನಿರಾಕುಳ.
ಉಭಯಕುಳರಹಿತ ಗುಹೇಶ್ವರಾ_ನಿಮ್ಮ ಶರಣ ನಿಶ್ಚಿಂತನು.
360
ತುಂಬಿದ ತೊರೆಯ ಹಾಯ್ದಹೆವೆಂದು
ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ.
ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ.
ಎಚ್ಚತ್ತು ನಡಿಸಿರೆ.
ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ,
ಹರುಗೋಲು ಮುಳುಗದೆ, ಏರಿದವರು ಸತ್ತರು.
ಇದರೊಳಹೊರಗನರಿದಾತನಲ್ಲದೆ
ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
361
ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ?
ಅರಿವು ಸಾಮಾನ್ಯವೆ?
ಅರಿಯದುದನಾರಿಗೂ ಅರಿಯಬಾರದು
ಗುಹೇಶ್ವರನೆಂಬ ಲಿಂಗವನರಿಯದಡೆರಡು, ಅರಿದೊಡೊಂದೇ
362
ಅರಿದೆವರಿದೆವೆಂಬಿರಿ ಅರಿದ ಪರಿಯೊಂತು ಹೇಳಿರೆ?
ಅರಿದವರು ಅರಿದೆವೆಂಬರೆ?
ಅರಿಯಬಾರದ ಘನವನರಿದು,
ಅರಿಯದಂತಿಪ್ಪರು ಗುಹೇಶ್ವರಾ.
363
ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ,
ಅತೀತಜ್ಞಾನಿ ಆರೂಢ. ಆರೂಢನನಾರೂ ಅರಿಯಬಾರದಯ್ಯಾ.
ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ.
ಈ ಚತುರ್ವಿದದೊಳಗೆ ಆವಂಗವೂ ಇಲ್ಲ.
ಗುಹೇಶ್ವರಾ_ನಿಮ್ಮ ಶರಣ.
364
ಕಂಗಳ ತೂಕ ಲಿಂಗಕ್ಕೆ ಭಾರ.
ಅಂಗಜೀವಿಗಳ ಕೂಡೆ ನುಡಿವನೆ ಶರಣನು?
ನಡೆನುಡಿ ಮುಗ್ಧ, ಗುಹೇಶ್ವರಾ ನಿಮ್ಮ ಶರಣ.
365
ದೂರದ ತುದಿಗೊಂಬನಾರಯ್ಯಾ ಗೆಲುವರು?
ಮೀರಲಿಲ್ಲದ ನಿರಾಳದ ಘನವನು (ನಿಲವನು?),
ಮೀರಿ, ಕಾಬ ಘನವನು ಬೇರೆ ತೋರಲಿಲ್ಲ.
ತೋರಿ ಕಾಬಡೆ ತನ್ನ ಹಿಡಿಯಲ್ಲಿಲ್ಲ.
ಓರೆ ಆವಿನ ಹಾಲನಾರಯ್ಯ ಕರೆವರು?
ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.
366
ನಚ್ಚುಮಚ್ಚಿಂಗೆ ಪೂಜಿಸಿ ನಿಶ್ಚಯವೆಂದೆನಲಿಲ್ಲ.
ತಾನುಲಿಂಗವೊ? ಪ್ರಾಣಲಿಂಗವೊ?
ಆವುದು ಲಿಂಗ? ಬಲ್ಲವರು ನೀವು ಹೇಳಿರೆ
ಅಂಗದಲ್ಲಿ ಅಂ(ಸಂ?)ಗಿಯಲ್ಲ, ಸಂಗದಲ್ಲಿ ವ್ಯಸನಿಯಲ್ಲ
ಅಂಗವಿಲ್ಲದ ಸಂಗ ಗುಹೇಶ್ವರ ನಿಮ್ಮ ಶರಣ.
367
ಎನ್ನಲ್ಲಿ ನಾನು ದೃಷ್ಟವೆಂದಡೆ
ನಿಮ್ಮಲ್ಲಿ ನೀವು ಮೆಚ್ಚುವಿರೆ?
ಸಂದೇಹದಿಂದ ಸವೆಯಿತ್ತು ಲೋಕವು.
ಕಡಿಯುಂಡ ಬಿಂಬ, ಕಬ್ಬುನವುಂಡ ನೀರು
ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
368
ಉಗುಳ ನುಂಗಿ, ಹಸಿವ ಕಳೆದು, ತೆವರ ಮಲಗಿ ನಿದ್ರೆಗೆಯ್ದ
ನೋಡಿ ನೋಡಿ ಸುಖಂಬಡೆದೆನಯ್ಯಾ.
ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ.
369
ಲೋಕವಿರಹಿತ ಶರಣ, ಶರಣವಿರಹಿತ ಲೋಕ.
ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು.
ಅರಿವು ಮರಹಿಲ್ಲದ ಘನವು ಗುಹೇಶ್ವರಾ ನಿಮ್ಮ ಶರಣ.
370
ಇಹಲೋಕ ಪರಲೋಕ ತಾನಿರ್ದಲ್ಲಿ,
ಗಗನ ಮೇರುಮಂದಿರ ತಾನಿರ್ದಲ್ಲಿ,
ಸಕಲ ಭುವನ ತಾನಿರ್ದಲ್ಲಿ,
ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ,
ಅಂತರ ಮಹದಂತರ ತಾನಿರ್ದಲ್ಲಿ,
ಸ್ವತಂತ್ರ ಗುಹೇಶ್ವರಲಿಂಗ ಕಾನಿರ್ದಲ್ಲಿ.
371
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು
ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು
ನವನಾಥಸಿದ್ಧರ ತೊತ್ತಳದುಳಿಯಿತ್ತು,
ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು.
ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು.
ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು.
ಕಾಮನ ಅರೆಯ ಮೆಟ್ಟಿ ಕೂಗಿತ್ತು,
ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು,
ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು;
ಭಾವಸೊಕ್ಕನುಂಡು ಕೊಕ್ಕರನಾಯಿತ್ತು.
ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ_
ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ,
ಲಿಂಗೈಕ್ಯ. _ತಾನೆ ಪ್ರಾಣ ಪುರುಷ.
ಇದನರಿದು ನುಂಗಿದಾತನೆ ಪರಮಶಿವಯೋಗಿ_
ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ!
_ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.
372
ತನ್ನನರಿದ ಅರಿವೆಂತುಟೊ? ತನ್ನ ಮರೆದ ಮರಹೆಂತುಟೊ?
ಅರಿದವರು ಮರೆದವರು
ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಗುಹೇಶ್ವರಾ.
373
ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ,
ನಿನ್ನ ನೀ ತಿಳಿದು ನೋಡಾ.
374
ಜ್ಞಾನಚಕ್ರ:
ಪರುಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ
ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ,
ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ,
ಶಿವಜ್ಞಾನವೆ ಶೈಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ
ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ,
ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ,
ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ,
ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ,
ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_
ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ;
ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು
ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು;
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ,
ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ,
ನಿತ್ಯನಿರಂಜನವೆ ಧೂಪದೀಪಾರತಿ,
ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_
ವಿವೇಕ ವಿಚಾರದಿಂದ ವೀಳೆಯವನವಧರಿಸೂದು.
ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆಸಂತೋಷ.
ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_
ನಿರಾಶಾಪದವೆ ಅನುಕೂಲ, ನಿಶ್ಯಬ್ದವೆ ಅನುಭಾವ,
ಅನುಪಮದ ನಃಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ,
ನಿರಂತರ ಪಾತಾಳ ಊರ್ಧ್ವದ ಪವನಃ_ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ;
ಇಹಲೋಕವೇನು? ಪರಲೋಕವೇನು? _
ಅಲ್ಲಿಂದತ್ತ ಅಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು,
ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ,
ನಮೋನಮೋ ಎಂಬೆನು.
375
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು_ಗುಹೇಶ್ವರಾ.
376
ನಿಮ್ಮಲ್ಲಿ ನೀವು ತಿಳಿದು ನೋಡಿದೆ; ಅನ್ಯವಿಲ್ಲ ಕಾಣಿರಣ್ಣಾ.
ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ.
ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು.
377
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ!
[ಅದು] ಬಗೆಯದು ಭ್ರಮೆಗೊಳ್ಳದು; _ತನ್ನ ಇರವಿನ ಪರಿ ಇಂತುಟಾಗಿ; _
ಜಗದು ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು;
ಬಲೆಯ ನೇಣು ಬಗ್ಗುರಿಯ ಕೈಯಲಿರಲು. _
ಬಲೆಯ ನೇಣ ಕಣ್ಣಿ ಕಳಚೆ,
ಲಿಂಗಕ್ಕೆ ಪ್ರಾಣ ಶರಣೆನುತ್ತವೆ ನಿಂದು,
ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು,
ಮನೋಮಧ್ಯದಲ್ಲಿ ನಿಲಿಸಿ, ನೆನೆವುತ್ತಿರ್ದು ಸುಖಿಯಾದ;
ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ.
ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
378
ಇಲ್ಲವೆಯ ಮೇಲೊಂದು ಉಂಟೆಯ ಪರಿಭಾವ,
ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ!
ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು;
ಅಲ್ಲಿಯೆ ಜ್ಞಾನ ಉದಯಿಸಿತ್ತು!
ಎಲ್ಲಾ ಎಡೆಯಲ್ಲಿ ನಿಂದ ನಿಜಪದವ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
379
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು.
ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ.
ಇದು ಒಂದು ಸೋಜಿಗವ ಕಂಡೆ.
ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ.
380
ಭವವಿರಹಿತಂಗ ಭಕ್ತಿಯ ಮಾಡುವರು ನೀವು ಕೇಳಿರಣ್ಣಾ,
ಭವದ ಬಾಧೆಯೊಳಗೆ ನೀವಿದ್ದು ಅಭವ ಭಕ್ತಿಯ ಮಾಡುವ ಪರಿಯಂತೊ?
ತಾನಭವನಾದಲ್ಲದೆ ಸಹಜಭಕ್ತಿಯ ಮಾಡಬಾರದು ಗುಹೇಶಅವರಾ.
381
ಭವಿಯ ಕಳೆದೆವೆಂಬ ಮರುಳು ಜನಂಗಳು ನೀವು ಕೇಳಿರೆ;
ಭವಿಯಲ್ಲದೆ ನಿಮ್ಮ ತನುಗುಣಾದಿಗಳು?
ಭವಿಯಲ್ಲದೆ ನಿಮ್ಮ ಮನಗಣಾದಿಗಳು?
ಭವಿಯಲ್ಲದೆ ನಿಮ್ಮ ಪ್ರಾಣಗುಣಾದಿಗಳು?
ಇವರೆಲ್ಲರೂ ಭವಿಯ ಹಿಡಿದು ಭವಭಾರಿಗಳಾದರು.
ನಾನು ಭವಿಯ ಪೂಜಿಸಿ ಭವಂನಾಸ್ತಿಯಾದೆನು ಗುಹೇಶ್ವರಾ.
382
ಭವಿಬೀವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ ಪಲ್ಲವಿಸಿತ್ತು!
ಭಕ್ತಿಬೀಜವೃಕ್ಷದ ಫಲದೊಳಗೆ, ಶರಣಬೀಜವೃಕ್ಷ ಪಲ್ಲವಿಸಿತ್ತು!
ಶರಣಬೀಜವೃಕ್ಷದ ಫಲದೊಳಗೆ;
ಕುಲನಾಶಕನಾದ ಶರಣ ಒಂದೆ ಬಸುರಲ್ಲಿ ಬಂದ_
ಬಂದು, ಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ.
ಭವಿಭಕ್ತಿ ಭವಿಬೀಜವೃಕ್ಷದ ತಂಪು ನೆಳಲ ಬಿಟ್ಟು,
ಕುಳ್ಳಿರ್ದಲ್ಲಿಯೆ; ಬಳಿಬಳಿಯೆ ಬಯಲಾದ ಶರಣ!
[ನಾದ]ಬಿಂದು ಬೀಜಪಟ್ಟ ಹಾಳಾಗಿ ಹಾರಿಹೋದಲ್ಲಿ; ಇನ್ನೇನ ಹೇಳಲುಂಟು?
ಗುಹೇಶ್ವರನೆಂಬ ಲಿಂಗವನರಿದು ಭವಿಗೆ ಭವಿಯಾದಾತಂಗೆ
ಇನ್ನೇನು ಪಥ (ಪದ?)ವುಂಟಯ್ಯಾ?
383
ಹುಟ್ಟಿದ ಕೂಸಿಂಗೆ ಪಟ್ಟವ ಕಟ್ಟಿ, ವಿಭೂತಿಯ ಹೂಸಿ,
ಲಿಂಗವ ತೋರಿ_ ‘ಜೋಜೋ’ ಎಂದು
ಜೋಗುಳವಾಡಿದಳು ಮಾಯದೇವಿಯಕ್ಕ!
‘ಜೋಜೋ’ ಎಂಬ ಸರ ಹರಿದು ತೊಟ್ಟಿಲು ಬಿದ್ದಿತ್ತು,
ಕೂಸು ಸತ್ತಿತ್ತು; ಗುಹೇಶ್ವರನುಳಿದನು!
384
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ
ಶರಣನ ಪರಿಯನರಸಲುಂಟೆ? ಗತಿಯ ಹೇಳಲುಂಟೆ?
ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು!
385
ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
ನಿಮ್ಮ ಬಂಧನಕ್ಕಿಕ್ಕಿ ಆಳುವರಯ್ಯಾ.
ಆನು ಕಂಡು ಮರುಗಿ ‘ಅಕಟಕಟಾ’ ಎಂದೆನಲ್ಲಾ!
ಕೂಗಿಲ್ಲ ಬೊಬ್ಬೆಯಿಲ್ಲ ಹೋದ ಹೊಲವನರಿಯರು
ದೇವಾ ಗುಹೇಶ್ವರಾ ಬಾಳುದಲೆಯ ಹಿಡಿದೆನು.
386
ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
ಕಾಯದ ಕಳವಳವ ವಾಯವೆಂದರಿಯ ಬಲ್ಲಡೆ
ದೇವ ಗುಹೇಶ್ವರನ ನಿಲವು ತಾನೆ ನೋಡಾ.
387
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ.
ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ, ವಾಯುವೆ ಶಿವದಾರ,
ಬೆಳಗೆ ಸಿಂಹಾಸನ.
ಅತ್ತಲಿತ್ತ ಚಿತ್ತವ ಹರಿಯಲೀಯದೆ,
ಮಜ್ಜನಕ್ಕೆರೆದು ಸುಖಿಯಾದೆ ಗುಹೇಶ್ವರಾ.
388
ಕರುಣಾದಿ ಗುಣಂಗಳಳಿದು ನವಚಕ್ರಂಗಳು ಭಿನ್ನವಾದ ಬಳಿಕ
ಇನ್ನೇನೊ? ಇನ್ನೇನೊ?
ಪುಣ್ಯ_ಪಾಪವಿಲ್ಲ ಇನ್ನೇನೊ? ಇನ್ನೇನೊ?,
ಸ್ವರ್ಗ_ನರಕವಿಲ್ಲ ಇನ್ನೇನೊ? ಇನ್ನೇನೊ?
ಗುಹೇಶ್ವರಲಿಂಗವ ವೇಧಿಸಿ ಸುಖಿಯಾದ ಬಳಿಕ
ಇನ್ನೇನೊ? ಇನ್ನೇನೊ?
389
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ;
ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ.
ಅಗ್ನಿ ಯನತಿಗಳೆದ ಹೋಮ ಸಮಾಧಿಗಳಿಲ್ಲ.
ವಾಯುವನತಿಗಳೆದ ನೇಮನಿತ್ಯಂಗಳಿಲ್ಲ.
ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ.
ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ.
390
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ?
ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ?
ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ?
ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ?
ಆಕಾಶ ಜಡನೆಂದರಿದವಂಗೆ ಮಂತ್ರ (ತ್ರಾ?)ರೂಢಿ ಏಕಯ್ಯಾ?
ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ,
ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
391
ಬಂದ ಬಟ್ಟೆಯ ನಿಂದು ನೋಡುಲೊಲ್ಲೆ ಕಂದಾ,
ಅದೇನು ಸೋಜಿಗವೊ? _ಬಿಂದು ಛಂದವಲ್ಲ
ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
392
ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ
ಆ ಪೃಥ್ವಿಯ ಚರಿತ್ರವೆ ಚರಿತ್ರ ನೋಡಾ!
ಅಪ್ಪುವಿನಲೊದಗಿದ ಘಟವು ಅಪ್ಪುವಿನಲಡಗಿದಡೆ
ಆ ಅಪ್ಪುವಿನ ಚರಿತ್ರವೆ ಚರಿತ್ರ ನೋಡಾ!
ತೇಜದಲೊದಗಿದ ಘಟವು ತೇಜದಲಡಗಿದಡೆ
ಆ ತೇಜದ ಚರಿತ್ರವೆ ಚರಿತ್ರ ನೋಡಾ!
ವಾಯುವಿನಲೊದಗಿದ ಘಟವು ವಾಯುವಿನಲಡಗಿದಡೆ
ಆ ವಾಯುವಿನ ಚರಿತ್ರವೆ ಚರಿತ್ರ ನೋಡಾ!
ಆಕಾಶದಲೊದಗಿದ ಘಟವು ಆಕಾಶದಲಡಗಿದಡೆ
ಆ ಆಕಾಶದ ಚರಿತ್ರವೆ ಚರಿತ್ರ ನೋಡಾ!
ಗುಹೇಶ್ವರನೆಂಬ ಲಿಂಗದಲೊದಗಿದ ಘಟವು ಲಿಂಗದಲಡಗಿದಡೆ,
ಆ ಲಿಂಗದ ಚರಿತ್ರ ನೋಡಾ.
393
ಸಕಲ ಭುವನಾದಿಭುವನಂಗಳಿಗೆ ತಂದೆ, ಸಕಲದೇವಾಧಿದೇವರ್ಕಳಿಗೆ ತಂದೆ.
ಭವಭವದಲ್ಲಿ ನೀನೆನ್ನ ತಂದೆ.
ಗುಹೇಶ್ವರಲಿಂಗ, ನಿರಾಳದಲ್ಲಿ ನೀನೆನ್ನ ತಂದೆ.
394
ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು.
ಎಲ್ಲಿಯದು ಲಿಂಗ ಎಲ್ಲಿಯದು ಜಂಗಮ?
ಎಲ್ಲಿಯದು ಪಾದೋದಕ ಪ್ರಸಾದವಯ್ಯಾ?
ಅಲ್ಲದವರೊಡನಾಡಿ ಎಲ್ಲರೂ ಮುಂದುಗೆಟ್ಟರಯ್ಯಾ.
ಆನು ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
395
ಆದಿಯ ಶರಣನೊಬ್ಬನ ಮದುವೆಯ ಮಾಡಲು,
ಯುಗ ಜುಗದವರೆಲ್ಲಾ ನಿಬ್ಬಣ ಹೋದರು,
ಹೋದ ನಿಬ್ಬಣಿಗರು ಮರಳರು!
ಮದುವಣಿಗನ ಸುದ್ದಿಯನರಿಯಲು ಬಾರದು.
ಹಂದರವಳಿಯದು, ಹಸೆ ಮುನ್ನಲುಡುಗದು!
ಬಂದಬಂದವರೆಲ್ಲಾ ಮಿಂದುಂಡು ಹೋದರು.
[ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು]
ಇದರಂತುವನರಿದಡೆ_
ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು!
396
ಮರನೊಳಣ ಕಿಚ್ಚು ಮರನಸುಟ್ಟಂತಾದೆನಯ್ಯಾ.
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯಾ.
ಕರುವಿನ ಬೊಂಬೆಯನುರಿಯುಂಡಂತಾದೆನಯ್ಯಾ.
ಗುಹೇಶ್ವರನೆಂಬ ಲಿಂಗವ ಪೂಜಿಸಿ ಭವಗೆಟ್ಟನಯ್ಯಾ.
397
ಐವರ ಸಂಗದಿಂದ ಬಂದೆ ನೋಡಾಯ್ಯಾ.
ಐವರ ಸಂಗದಿಂದ ನಿಂದೆ ನೋಡಾಯ್ಯಾ.
ಈ ಐವರೂ ತಮ್ಮ ತಮ್ಮ ಬಟ್ಟೆಯಲ್ಲಿ ಹೋದರು.
ನಾನೊಬ್ಬನೆ ನಿಸ್ಸಂಗಿಯಾಗಿ ಉಳಿದೆನಲ್ಲಾ!
ಗುಹೇಶ್ವರನೆಂಬ ನಿತ್ಯನಿರಂಜನ ರೂಹಿಲ್ಲದ ಘನವ ಕಂಡೆನಯ್ಯಾ.
398
ಸಟೆ ದಿಟವಾದಲ್ಲಿ ಮುಟ್ಟಿಯೂ ಮುಟ್ಟದೆ ಇರಬೇಕು.
ಅತಿರತಿ ಗತಿಮತಿಗೆ ಮಂದವಾಯಿತ್ತು.
ಎಂಟು ಹಿಟ್ಟು ಪಂಚಮಠವುಂಟು ಧರೆಯ ಮೇಲೆ.
ನರಸುರಾದಿಗಳೆಲ್ಲ ಸಭಾರವ ಹೊತ್ತು ಬಂದೈದಾರೆ.
ಹಿಟ್ಟು ನಷ್ಟ, ಮಠ ಹಾಳು, ಊರಿಗುಪಟಳ,
ಮಠವ ಸುಟ್ಟು ಗುಹೇಶ್ವರ ಬೀದಿಗರುವಾದ.
399
ಮತಿಯೊಳಗೊಂದು ದುರ್ಮತಿ ಹುಟ್ಟಿದ ಬಳಿಕ;
ಮತಿಯ ಮರವೆಯೊಳಕೊಂಡು,
ಭವಕ್ಕೆ ಗುರಿಮಾಡಿ ಕೆಡಹಿತ್ತು ನೋಡಾ.
ಅಖಂಡಿತವ ತಂದು ಮತಿಯೊಳಗೆ ವೇದಿಸಲು,
ಗತಿಗೆಟ್ಟು ನಿಂದಿತ್ತು ಗುಹೇಶ್ವರಾ.
400
ತಲೆಯಿಲ್ಲದೆ ಅಟ್ಟೆ ಜಗವ ನುಂಗಿತ್ತು.
ಅಟ್ಟೆಯಿಲ್ಲದ ತಲೆ ಆಕಾಶವ ನುಂಗಿತ್ತು.
ಅಟ್ಟೆ ಬೇರೆ, ತಲೆ ಬೇರಾದಡೆ_ಮನ ಸಂಚಲಿಸುತ್ತಿದ್ದಿತ್ತು!
ಆಟ್ಟೆಯನೂ ತಲೆಯನೂ ಬಯಲು ನುಂಗಿದಡೆ,
ಆನು ನುಂಗಿದೆನು ಗುಹೇಶ್ವರನಿಲ್ಲದಂತೆ!
401
ಅಹಂಕಾರಮನೆ ಮರೆದು, ದೇಹಗುಣಂಗಳನೆ ಜರೆದು,
ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು.
ಸಹಜದುದಯದ ನಿಲವಿಂಗೆ,
ಮಹಾಘಲಿಂಗದ ಬೆಳಗು ಸ್ವಾಯತವಾದ ಕಾರಣ
ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು.
402
ಕಾಯ ಭಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು.
ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ.
ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು.
ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ?
403
ಬಿತ್ತದ ಬೆಳೆಯದ ತುಂಬಿದ ರಾಶಿಯ ಕಂಡಲ್ಲಿ
ಸುಖಿಯಾಗಿ ನಿಂದವರಾರೊ?
ಇದ, ಹೇಳಲೂ ಬಾರದು ಕೇಳಲೂ ಬಾರದು.
ಗುಹೇಶ್ವರಾ ನಿಮ್ಮ ಶರಣನು,
ಲಚ್ಚಣವಳಿಯದೆ ರಾಶಿಯನಳೆದನು.
404
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು,
ಆತ್ಮಸಂಗದಲ್ಲಿ ಪ್ರಸಾದನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು,
ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ.
ಅಂತರಂಗದಲ್ಲಿ ಸುಳಿದಾಡುವ ತನುಗಾಣಾದಿಗಳ, ಮನಗುಣಾದಿಗಳ,
ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ?
ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ?
ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ?
ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
405
ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು.
ಏನು ಹತ್ತಿತ್ತೆಂದರಿಯೆನಯ್ಯಾ.
ಏನು ಹೊಂದಿ (ಹೊದ್ದಿ?)ತ್ತೆಂದರಿಯೆನಯ್ಯಾ.
ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ
ನಾನೇನೆಂದರಿಯೆನಯ್ಯಾ.
406
ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ.
ನಖಕಂಕಣ (ನ ಖ ಕಂ ಕ ಣ?) ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ!
ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಆಡಗಿ,
ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ!
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು
ಗುಹೇಶ್ವರಲಿಂಗವು ತ್ರಿಕಾಲದ ಪೂಜೆಯ ನುಂಗಿತ್ತು.
407
ಊರಕ್ಕಿ ಊರೆಣ್ಣೆ; _ ‘ಮಾರಿಕವ್ವ ತಾಯೆ ಬಾರೆ,
ಕಮಾರನ ತಲೆಗಾಯಿ’ ಎಂಬಂತೆ;
ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ.
ತಾನು ಲಿಂಗ ತನ್ನ ಮನವೆ ಪುಷ್ಪ.
ಪೂಜೆಯ ಪೂಜಿಸುವಾತನೆ ಸದ್ಭಕ್ತನು_ಗುಹೇಶ್ವರಾ.
408
ವಾಯದ ಪಿಂಡಿಗೆ ಮಾಯದ ದೇವರಿಗೆ
ವಾಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ.
ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು,
ಸೂಜಿಯಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ.
409
ಭಿತ್ತಿ ಮೂವರ ಮೇಲೆ ಚಿತ್ರ ಬರೆಯಿತ್ತು;
ಪ್ರಥಮ ಭಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು;
ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು,
ಮೂರನೆಯ ಭಿತ್ತಿಯ ಚಿತ್ರ ಹೊಯಿತ್ತು ಮರಳಿ ಬಾರದು.
ಗುಹೇಶ್ವರಾ_ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ!
410
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ,
ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ.
ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು,
ಗುಹೇಶ್ವರಾ ನಿಮ್ಮ ನೆನೆದೆನಾಗಿ.
411
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು.
ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು.
ಇನ್ನೂ ಕೊಯ್ದಾನೆ ಪುಷ್ಪಂಗಳನು_
ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ!
ಇನ್ನೂ ಕೊಯ್ದಾನೆ ಪುಷ್ಪಂಗಳನು_ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು.
ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು.
412
ಮಹಾಮೇರುವಿನ ಮರೆಯಲ್ಲಿರ್ದು,
ಭೂತದ ನೆಳಲನಾಚರಿಸುವ ಕರ್ಮಿ, ನೀ ಕೇಳಾ,
ಆ ಮಹಾಲಿಂಗಕ್ಕೆ ಮಜ್ಜನವೆಂದೇನೊ?
ಪರಿಮಳಲಿಂಗಕ್ಕೆ ಪತ್ರಪುಷ್ಪಗಳೆಂದೇನೊ?
ಜಗಜ್ಯೋತಿಲಿಂಗಕ್ಕೆ ಧೂಪದೀಪಾರತಿಗಳೆಂದೇನೊ?
ಅಮೃತಲಿಂಗಕ್ಕೆ ಆರೋಗಣೆಯೆಂದೇನೊ?
ಗುಹೇಶ್ವರಲಿಂಗದಂತುವ ಬಲ್ಲವರಾರೊ?
413
ಹೂ ಕೊಯ್ಯ ಹೋದಡೆ ಹೂ ದೊರೆಕೊಳ್ಳದು.
ಅಗ್ಘವಣಿಯ ತುಂಬುವಡೆ ಅಗ್ಘವಣಿ ತುಂಬದು.
ಪೂಜಿಸ ಹೋದಡೆ ಪೂಜೆ ನೆಲೆಗೊಳ್ಳದು. _
ಇದೇನು ಸೋಜಿಗವೊ ಅಯ್ಯಾ!
ಅರಿದು ಮರೆದವನಲ್ಲ, ಬೆರಗು ಹಿಡಿದವನಲ್ಲ.
ಗುಹೇಶ್ವರನೆಂಬ ಬುದ್ಧಿ ಇಂತುಟು.
414
ಶರಣ, ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದಡೆ,
ಆ ಪುಷ್ಪ ನೋಡ ಕರದೊಳಡಗಿತ್ತಲ್ಲಾ!
ಅದು ಓಗರದ ಗೊಬ್ಬರವ ನುಣ್ಣದು;
ಕಾಮದ ಕಣ್ಣರಿಯದು, ನಿದ್ರೆಯ ಕಪ್ಪೊತ್ತದು.
ಅದು ಅರುಣ ಚಂದ್ರ [ರ] ತೆರೆಯಲ್ಲಿ ಬೆಳೆಯದು.
ಲಿಂಗವೇದಿಯಾಗಿ ಬೆಳೆದ ಪುಷ್ಪವನು
ಗುಹೇಶ್ವರಾ ನಿಮ್ಮ ಶರಣನು ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು.
415
ಗಗನವೆ ಗುಂಡಿಗೆ ಆಕಾಶವೆ ಆಗ್ಘವಣಿ,
ಚಂದ್ರ ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣುದೀಪ,
ರುದ್ರನೋಗರ! _ಸಯಧಾನ ನೋಡಾ!
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ!
416
ಸರೋವರದ ಕಮಲದಲ್ಲಿ ತಾನಿಪ್ಪನು,
ಕೆಂದಾವರೆಯ ಪುಷ್ಪದ ನೇಮವೆಂತೊ?
ಹೂವ ಮುಟ್ಟದೆ ಕೊಯ್ವನೇಮವೆಂತೊ?
ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ
ಗುಹೇಶ್ವರಾ ನಿಮ್ಮ ಶರಣನು.
417
ಹೊರಗನೆ ಕೊಯ್ದ ಹೊರಗನೆ ಪೂಜಿಸಿದವರ ಕಂಡು,
ನಾಚಿದೆ ನಾಚಿದೆನಯ್ಯಾ.
ಒಳಗೆ, ಒಂದು ಅನು(ನಿ?) ಮಿಷಲಿಂಗವ ಕಂಡು,
ಎನ್ನ ಮನೋ ಪುಷ್ಪದಲ್ಲಿ ಪುಜಿಸಿದಡೆ
ನಾಚಿಕೆ ಮಾದು ನಿಸ್ಸಂದೇಹಿಯಾದೆನು_ಗುಹೇಶ್ವರಾ.
418
ಆರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ.
ಮತ್ತೆ ದೇವರ ಪೂಜಿಸುವರಾರೂ ಇಲ್ಲ.
ಉತ್ತರಾಪಥದ ದಶನಾಡಿಗಳಿಗೆ,
ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು?
ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ!
ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು.
419
ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ,
ಭಾವ ತಾಗದ ಪೂಜೆ, ಎವೆ ತಾಗದ ನೋಟ
ವಾಯು ತಾಗದ [ಲಿಂಗದ] ಠಾವ ತೋರಾ ಗುಹೇಶ್ವರಾ.
420
ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ,
ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ.
ನಂದಾದೀವಿಗೆ, ಕುಂದದ ಬೇಳಗು; ಸ್ವತಂತ್ರ ಪೂಜೆ_ಒಂದೇ.
ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ.
421
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
ಭಾವನೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
ಭ್ರಮೆಯಳಿದ ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ?
422
ಗಗನದ ಮೇಲೊಂದು ಸರೋವರ;
ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ದವರೆಲ್ಲರೂ;
ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ
ಒಮ್ಮೆ ನಾಯಕನರಕ ತಪ್ಪದಲ್ಲಾ!
ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವ ಗುಹೇಶ್ವರಾ.
423
ಮಲಿನ ದೇಹಕ್ಕೆ ಮಜ್ಜನವಲ್ಲದೆ, ನಿರ್ಮಲದೇಹಕ್ಕೆ ಮಜ್ಜನವೇಕೊ?
ಉಂಟೆ ವಿಷಯ ಲಿಂಗ ನಿಷ್ಪತಿಯಾದ ಶರಣಂಗೆ?
ಅಗಮ್ಯ ಅಗೋಚರ ಅಪ್ರಮಾಣ ಗುಹೇಶ್ವರಾ_ನಿಮ್ಮ ಶರಣ.
424
ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ.
ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ.
ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು.
ಅಷ್ಪವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಗಳ ಮಾಡುವಡೆ;
ನಿನಗೆ ಅನಂತನಾಮಂಗಳಾದವು ಗುಹೇಶ್ವರಾ.
425
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?
ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?
426
ಮುಂಡಧಾರಿಯ ತಲೆ ಮುಂದೆ ಬರ್ಪುದ ಕಂಡೆ.
ಜಟಾಧಾರಿಯ ತಲೆ ನಡೆದು ಹೋಯಿತ್ತ ಕಂಡೆ.
ಖಂಡಕಪಾಲಿಯ ಖಂಡವ ಕೊಯಿತ್ತ ಕಂಡೆ.
ಬಾಲಬ್ರಹ್ಮಚಾರಿಯ ಬಾರನೆತ್ತಿತ್ತ ಕಂಡೆ.
ಭಕ್ತರೆಲ್ಲರೂ ಸತ್ತು ನೆಲಕಿಕ್ಕಿತ್ತು ಕಂಡೆ.
ಗುಹೇಶ್ವರಾ ನೀ ಸತ್ತು ಲಿಂಗವಾಯಿತ್ತ ಕಂಡೆ.
427
ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ.
ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ
ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ.
428
ಭಕ್ತಂಗೆ ಉತ್ಪತ್ಯ(ತ್ತಿ?)ವಿಲ್ಲಾಗಿ, ಸ್ಥಿತಿಯಿಲ್ಲ.
ಸ್ಥಿತಿಯಿಲ್ಲಾಗಿ ಲಯವಿಲ್ಲ. _ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ,
ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.
429
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ!
ಇದೇನು ಸೋಜಿಗೆ ಹೇಳಾ?
ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ,
ದೇವ ಬಂದಡೆ ದೇಗುಲ ಓಡಿತ್ತ ಕಂಡೆ_ಗುಹೇಶ್ವರಾ.
430
ರಂಗ ಒಂದೇ ಕಂಭ ಒಂದೇ ದೇವರೊಂದೇ ದೇಗುಲ ಒಂದೇ.
ಗುಹೇಶ್ವರಾ ನಿಮ್ಮ ಮನ್ನಣೆಯ ಶರಣರ ದೇವರೆಂದೆಂಬೆ.
431
ಊರ ಹೊರಗೊಂದು ದೇಗುಲ,
ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ.
ಗೊರತಿಯ ಕೈಯಲ್ಲಿ ಸೂಜಿ, ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ!
ಗೊರತಿಯ, ಸೂಜಿಯ, ಹದಿನಾಲ್ಕು ಲೋಕವ;
ಒಂದಿರುಹೆ ನುಂಗಿತ್ತ ಕಂಡೆ! _ಗುಹೇಶ್ವರಾ.
432
ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ.
ತನುವಿನಲ್ಲಿ ಸುಖವ ಧರಿಸಿಕೊಂಡಡೆ, ಆ ತನುವಿಂಗೆ ಕೊರತೆ ನೋಡಾ.
ಅರಿವನರಿದು ಸುಖವಾಯಿತ್ತೆಂದಡೆ,
[ಆ] ಅರಿವಿಂಗೆ ಭಂಗ ನೋಡಾ_ಗುಹೇಶ್ವರಾ.
433
‘ನ’ ಎಂಬುದೆ ನಂದಿಯಾಗಿ, ‘ಮ’ ಎಂಬುದೆ ಮಹತ್ತಾಗಿ,
‘ಶಿ’ ಎಂಬುದೆ ರುದ್ರನಾಗಿ, ‘ವಾ’ ಎಂಬುದೆ ಹಂಸೆಯಾಗಿ,
‘ಯ’ ಎಂಬುದೆ ಅರಿವಾಗಿ, ‘ಓಂ’ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂಧಿ!
434
ಜಗದಗಲದ ಮಂಟಪಕ್ಕೆ, ಮುಗಿಲುಗಲದ ಮೇಲುಕಟ್ಟೆನಲ್ಲಿ
ಚಿತ್ರ [ವಿಚಿತ್ರ]ವ ನೋಡುತ್ತ ನೋಡುತ್ತ;
ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು ದರುಶನವ ನೋಡುತ್ತ ನೋಡುತ್ತ,
ಗುಹೇಶ್ವರನೆಂಬ ಲಿಂಗವು ತಾನೆಯಾಗಿ!
435
ಹಿಂದಣ ಅನಂತವನೂ, ಮುಂದಣ ಅನಂತವನೂ
ಒಂದು ದಿನ ಒಳಕೊಂಡಿತ್ತು ನೋಡಾ!
ಒಂದು ದಿನವನೊಳಕೊಂಡು ಮಾತಾಡುವ
ಮಹಂತನ ಕಂಡು ಬಲ್ಲವರಾರಯ್ಯ?
ಆದ್ಯರು ವೇದ್ಯರು ಅನಂತ ಹಿರಿಯರು,
ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ!
436
ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ?
ಹೊಂದುವರೆಲ್ಲರ ಹೊಂದಬೇಡೆಂದೆನೆ?
ಪ್ರಳಯದಲ್ಲಿ ಅಳಿವರ ಅಳಿಯಬೇಡೆಂದೆನೆ?
ಗುಹೇಶ್ವರಾ ನಿಮ್ಮನರಿದು ನೆರೆದ ಬಳಿಕ,
ಧರೆಯ ಮೇಲುಳ್ಳವರನಿರಬೇಡವೆಂದನೆ?
437
ಆದಿಯಾಧಾರವುಳ್ಳನ್ನಕ್ಕರ ಉಪಚಾರ,
ಎರಡೂ ಒಂದಾದಡೆ ಶಿವಾಚಾರ.
ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ,
ಗುಹೇಶ್ವರನನರಿದಡೆ ಅನಾಚಾರ!
438
ಕಿಚ್ಚಿನೊಳಗೆ(ನೊಡನೆ?)ಹೋರಿದ ಹುಳ್ಳಿಯಂತಾದೆನಯ್ಯಾ.
ಬೆಂದ ನುಲಿಯ ಸಂದಿಕ್ಕಿ ಮತ್ತೊಂದು ಮಾಡಬಾರದಯ್ಯಾ.
ಗುಹೇಶ್ವರಾ_ನಿಮ್ಮ ನಿಲವಿನ ಪರಿ ಇಂತುಟಯ್ಯಾ.
439
ಸತ್ತ ಕೋಳಿ ಎದ್ದು ಕೂಗಿತ್ತ ಕಂಡೆ.
ಮೊತ್ತದ ಮಾಮರನುಲಿಯಿತ್ತ ಕಂಡೆ.
ಕತ್ತಲೆ ಬೆಳಗಾಯಿತ್ತ ಕಂಡೆ.
ಹೊತ್ತಾರೆ ಎದ್ದು ಹೊಲಬುದಪ್ಪೂದ ಕಂಡೆ.
ಇದೇನು ಹತ್ತಿತ್ತೆಂದರಿಯೆ ಗುಹೇಶ್ವರಾ.
440
ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ
ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ?
ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ
ತಾನಾರೆಂಬ ವಿಚಾರವೇಕೆ?
ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ
ಮತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ?
441
ಇಂದು ಸಾವ ಹೆಂಡತಿಗೆ, ನಾಳೆ ಸಾವ ಗಂಡನವ್ವಾ!
ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ!
ಅರಿವು ಕುರುಹನು ಮರವ ನುಂಗಿತ್ತು;
ಗುಹೇಶ್ವರನುಳಿದನವ್ವಾ!
442
ಮರುಳುಂಡ ಮನುಷ್ಯನ ಇರುವಿನ ಪರಿಯಂತೆ,
ವಿವರವನರಿಯಬಾರದು ನೋಡಾ, _ಶಿವಜ್ಞಾನ.
ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು.
ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು!
ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು;
ನಿಸ್ಸೀಮಸುಖಿಗಳು ನೋಡಾ.
443
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ,
ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ!
ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ?
444
ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರಿಷ ಬಂದನೆನಗೆ ನೋಡಾ!
ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ!
ಗುಹೇಶ್ವರನೆಂಬ ಲಿಂಗವನರಿದ ಬಳಿಕ, ‘ನಾ’ ಎಂಬುದಿಲ್ಲ ನೋಡಾ!
445
ನೆಲ ಹುಟ್ಟದಂದಿನ ಧವಳಾರ,
ಧವಳಾರದೊಳಗೊಬ್ಬ ಸೂಳೆ ನೋಡಯ್ಯಾ.
ತಲೆಯಿಲ್ಲದಾತ ನಿಚ್ಚಕ್ಕೆ ಬಪ್ಪ,
ಕರುಳಿಲ್ಲದಾತ ಕುಂಟಿಣಿಯಾದ ನೋಡಯ್ಯಾ.
ಕೈಕಾಲಿಲ್ಲದೆ ಅಪ್ಪಲೊಡನೆ! _
ಇದ ಕಂಡು ಬೆರಗಾದೆ ಗುಹೇಶ್ವರಾ.
446
ಪರಮತತ್ವ (ಪರತತ್ವ) ದೊಳಗಿರಬಲ್ಲಡೆ; ಉಣಲಾಗದು ಉಣದಿರಲಾಗದು.
ಎಲ್ಲರ ಸಂಗದಲ್ಲಿರಲಾಗದು, ಮತ್ತೆ ಒಬ್ಬನೆ ಇರಲಾಗದು.
ತಾಯಿ ಸತ್ತ ಅರುದಿಂಗಳಿಗೆ ತಾ ಹುಟ್ಟಿದ, ಮೂಲ ಗುಹೇಶ್ವರ.
447
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ.
ಗುಹೇಶ್ವರಲಿಂಗದಲ್ಲಿ ಅವರ ಜಗದಾರಾಧ್ಯರೆಂಬೆ.
448
ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ತಾ ನುಡಿವಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
ರೂಹಿಲ್ಲದ ಸಂಗವ ಮಾಡಬೇಕು,
ಭವವಿಲ್ಲದ ಭಕ್ತಿಯ ಮಾಡಬೇಕು.
ತಾನಾವನೆಂದರಿಯದಂತಿಹುದು, ಗುಹೇಶ್ವರಾ.
449
ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ,
ಭಾವವೆ ಕರ್ಪರವಾಗಿ ‘ಪರಮ ದೇಹಿ’ ಎಂದು ಬೇಡುವ
ಪರಮನ ತೋರಯ್ಯಾ ಗುಹೇಶ್ವರಾ.
450
ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ,
ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
ಮನದ ಭಿಕ್ಷಮನುಂಡು, ತನು ಪರಿಣಾಮವನೆಯ್ದಿಹೆ
ಘನಮಹಿಮರ ತೋರಯ್ಯಾ ಗುಹೇಶ್ವರಾ.
451
ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ.
452
ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ_
ಶಿವಶಿವಾ ಗಗನವ ಮನ ನುಂಗಿತ್ತು.
ಆದಿ ವೇದವ ನುಂಗಿ, ವೇದ ಸ್ವಯಂಭುವ ನುಂಗಿ,
ಕಾಲ ಕರ್ಮ ಹಿಂಗಿತ್ತು_ಗುಹೇಶ್ವರಾ ನಿಮ್ಮ ಶರಣಂಗೆ.
453
ಮನದೊಳಗೆ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ
ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ.
454
ಬೋನದೊಳಗೊಂದು ಅನೆ ಇದ್ದಿತ್ತು.
ಬೋನ ಬೆಂದಿತ್ತು ಆನೆ ಬದುಕಿತ್ತು_ಇದೇನು ಸೋಜಿಗವಯ್ಯಾ?
ದೇವ ಸತ್ತ, ದೇವಿ ಕೆಟ್ಟಳು!
ಆನು ಬದುಕಿದೆನು ಗುಹೇಶ್ವರಾ.
455
ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ ನಿರ್ಮಾಲ್ಯವಿಲ್ಲ.
ರುಚಿಗೆ ಎಂಜಲಿಲ್ಲ, ಸುಖಕ್ಕೆ ಆರೋಚಕವಿಲ್ಲ.
ಗುಹೇಶ್ವರಾ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲಯ್ಯಾ.
456
ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು.
ಪರುಷವೇದಿಯ ಸಾಧಿಸ ಹೋದಡೆ ದಾರಿದ್ರ್ಯ ಘನವಾಯಿತ್ತು.
ಮರುಜೇ (ಜ?)ವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ.
ಎಲ್ಲವನೂ ಸಾಧಿಸ ಹೋದಡೆ ಏನೂ ಇಲ್ಲದಂತಾಯಿತ್ತು.
ನಾನು ನಿಜವ ಸಾಧಿಸಿ ಬದುಕಿದೆನು ಗುಹೇಶ್ವರಾ.
457
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
ಮೂವರರಿಯದ ಮುಗ್ಧನ ಠಾವ ತೋರಿಸು ಗುಹೇಶ್ವರಾ.
458
ಪೂರ್ವಬೀಜವು ಬ್ರಹ್ಮಚರ್ಯವೆ? ಅರಿವು ತಾ ಬ್ರಹ್ಮಚರ್ಯವೆ?
ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ?
ಗುಹೇಶ್ವರಾ ನಿಮ್ಮ ಶರಣರ ಪರಿಣಾಮವೆ ಬ್ರಹ್ಮಚರ್ಯವು.
459
ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲಾ.
ನೆಳಲು ಸಾಯಬಲ್ಲುದೆ ಅಂಗಪ್ರಾಣಿಗಳಿಗೆ?
ಸಮುದ್ರದಾಚೆಯ ತಡಿಯಲಲ್ಲಿ ಕಳ್ಳನ ಕಂಡು,
ಇಲ್ಲಿಂದ ಮುನಿದು ಬೈದಡೆ, ಅವ ಸಾಯಬಲ್ಲನೆ?
ಭಾವದಲ್ಲಿ ಹೊಲಿದ ಹೊಲಿಗೆಯ ಭೇದವನರಿಯರು,
ಕಾಮಿಸಿದಡುಂಟೆ ನಮ್ಮ ಗುಹೇಶ್ವರಲಿಂಗವು?
460
ಅಜ್ಞಾನವೆಂಬ ತೊಟ್ಟೆಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು.
461
ಮೋಟದ ಮದುವೆಗೆ ಭಂಡರು ಹರೆಯ ಹೊಯ್ದ,
ಮೂಕೊರತಿಯರು ಕಳಸುವ ಹೊತ್ತರಲ್ಲಾ!
‘ಉಫೇ ಚಾಂಗು ಭಲಾ’ ಎಂದು ನಿಬ್ಬಣ ನೆರೆದು,
ಹೂದಂಬುಲಕ್ಕೆ ಮುನಿವರದೇನಯ್ಯಾ?
ತ್ರಿಜಗವೆಲ್ಲಾ ನಿಬ್ಬಣವಾಯಿತ್ತು,
ಗುಹೇಶ್ವರನನರಿಯದ ಹಗರಣವೊ!
462
ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ!
ನಿಧಾನ ಕಂಡಾಸ ಇರಲು ಬಡತನ ಕಂಡಾ!
ಪ್ರಸಾದ ಕಂಡಾ, ಕೊಂಡಡೆ ಪ್ರಳಯ ಕಂಡಾ!
ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ!
463
ಜಲದೊಳಗೆ ಹುಟ್ಟಿ ನೆಲದೊಳಗೆ ಹುದುಗಿರ್ದುದ,
ಕೆಲಬಲದೊಳಗಿರ್ದವರೆಲ್ಲಾ ಬಲ್ಲರೆ?
ಗಾಳಿಯೊಳಗಿಪ್ಪ ಜ್ಯೋತಿ ಕೆಡದೆ ಇದ್ದುದ ಕಂಡು_ನಾನು ಬೆರಗಾದೆ!
ಬಾಲಕ್ರೀಡೆಯೊಳಗಾಡುತ್ತಿಪ್ಪ ನಾರಿಯ ಮಕ್ಕಳೈವರು,
ಆರೂ ಕಾಣದ ಬಾವಿಯೊಳಗೆ ಬಿದ್ದಿರಲು,
ಬೇರೆ ಮತ್ತೆ ಜ್ಞಾನವೆಲ್ಲಿಯದೊ?
ಗುಹೇಶ್ವರಾ, ನಿಮ್ಮನರಿಯದ, ಬರಿಯರಿವಿನ ಹಿರಯರ, ಕಂಡಡೆ,
ನಾನು ನಾಚುವೆನಯ್ಯಾ.
464
ಕುಲಮದ ಛಲಮದ ವಿದ್ಯಾಮದದವರ ತೋರದಿರಾ.
ಅವರ ಆರೂಢಪದವಿಯನೆನಗೆ ತೋರದಿರಾ.
ಅವರ ಗರುವ ಗಂಭೀರವನೆನಗೆ ತೋರದಿರಾ.
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ.
465
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು!
466
ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ;
ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ!
ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು,
ಹೇಸಿಕೆಯಾಯಿತ್ತು ಗುಹೇಶ್ವರಾ.
467
ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
ಮರುಳುಗೊಂಡಾಡುತ್ತಿದ್ದಾರೆ ನೋಡಾ.
ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ
ಅಂಜದೆ ಪಾಕವ ಮಾಡಿಕೊಂಡು ಉಂಡು,
ಭಂಡವ ಮಾರುತ್ತಿರ್ಪರು ನೋಡಾ.
ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು
ಗುಹೇಶ್ವರನನರಿಯದ ಭವಭಾರಕರೆಲ್ಲರ.
468
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು
ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ
ಕಾಡಲಾಗದು ಭಕ್ತನ, ಬೇಡಲಾಗದು ಭವಿಯ.
ಕಾಡಿ ಬೇಡಿ ನೀವು ಒಲಿಸಿಕೊಂಡಡೆ,
ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ.
469
ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ
ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ!
ಪ್ರಥಮವಿಷಯವಿಂತಿರಲಿಕೆ, ಗುಹೇಶ್ವರ ಏಕೋ ಅದ್ವೈತ!
470
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಸಿಕೊಳಬಹುದೆ!
ಆ ಠಾವು ಹಿಂಗಿದಡೆ ಭಂಗಿತನು ಕಂಡಾ.
ಅಂತರಂಗದಲೊದಗೂದನರಿಯರು
ಗುಹೇಶ್ವರನೆಂಬುದು ಮೀರಿದ ಘನವು!
471
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಹೆ ಕೇಳಿರಣ್ಣಾ:
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು.
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು,
ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ
ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು
ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾವವಾಗಿ ಇರಬೇಕು!
ಈ ಭೇದವನರಿಯದೆ ಸುಳಿವರ ಕಂಡು
ಬೆರಗಾದೆ ಕಾಣಾ ಗುಹೇಶ್ವರಾ.
472
ಹಗಲ ಇರುಳ ಮಾಡಿ, ಇರುಳ ಹಗಲ ಮಾಡಿ,
ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ,
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ.
473
ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ
ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೂ?
ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ?
ಅದೆಲ್ಲಿಯದೊ ಪಾದೋದಕ ಪ್ರಸಾದ?
ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು,_
ಗುಹೇಶ್ವರಾ ನಿಮ್ಮಾಣೆ.
474
ಕಂಕುಳೆಂಬುದು ಕವುಚಿನ ತವರುಮನೆ.
ಕರಸ್ಥಲವೆಂಬುದು [ಕೈ]ಕೆಟ್ಟ ಹುಣ್ಣು.
ಅಮಳೋಕ್ಯವೆಂಬುದು ಬಾಯ ಭಗಂದರ (ಬಗದಳ?).
ಅಂಗಸೋಂಕೆಂಬುದು ಪಾಪದ ತವರುಮನೆ.
ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು.
ಕಂಠವೆಂಬುದು ಗಂಟಲು ಗಾಣ.
ಮತ್ತೆ, ಗುಹೇಶ್ವರನ ಮಾತು ನಿಮಗೇಕೆಲವೊ?
475
ಅರಿವು ಅರಿವು ಎನುತ್ತಿಪ್ಪಿರಿ, ಅರಿವು ಸಾಮಾನ್ಯವೆ?
ಹಿಂದಣ ಹಜ್ಜೆಯ ನೋಡಿ ಕಂಡಲ್ಲದೆ
ನಿಂದ ಹಜ್ಜೆಯನರಿಯಬಾರದು.
ಮುಂದಣ ಹಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚದಲ್ಲದೆ
ತಾನಾಗಬಾರದು. _ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ?
476
ಹರಿದು ಹತ್ತಿ ಮುಟ್ಟಿ ಹಿಡಿದಿಹೆವೆಂದು
ಜಾರಿ ಉರುಳಿ ಬಿದ್ದರು ಅನಂತರು.
ಹಿಡಿದವರೆಲ್ಲ ಹೆಣನುಂಡು ಹೋದರು.
ನಾ ಹಿಡಿದ ಬಂಡಿ (ಬಂದಿ?)
ಒಡಬಂಡಿ (ಒಡಬಂದಿ?)ಯಾಯಿತ್ತು ಗುಹೇಶ್ವರಾ.
477
ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ?
ಕಾಲಕಲ್ಪಿತ ಉಪಾಧಿಯುಳ್ಳನ್ನಕ್ಕರ ಶೀಲವೆಂಬುದು ಭಂಗ.
ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯ ತಾನೆಂದು
ತಿಳಿಯದನ್ನಕ್ಕರ,
ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು?
478
ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ_ನೀವು ಕೇಳಿರೆ.
ಮದ್ಯವಲ್ಲದೇ(ವೇ?)ನು ಅಷ್ಟಮದಂಗಳು?
ಮಾಂಸವಲ್ಲದೇ(ವೇ?)ನು ಸಂಸಾರಸಂಗ?
ಈ ಉಭಯವನತಿಗಳದಾತನೆ, ಗುಹೇಳ್ವರಲಿಂಗದಲ್ಲಿ ಲಿಂಗೈಕ್ಯನು.
479
ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ.
ಮೂರು ಬಟ್ಟೆ ಕೂಡಿದ ಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಳೆ.
ಆ ಮಾರಿಯ ಬಾಯೊಳಗೆ ಮೂರು ಘಟ್ಟವಿಷ್ಪುವು.
ನಂಜಿನ ಸೊನೆ ಸುರಿವುತ್ತಿಷ್ಪುದು.
ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು.
ಐದು ಬಾಯ ಹುಲಿ ಆಗುಳಿಸುತ್ತಿಷ್ಪುದು.
ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು.
480
ಜಂಗಮ ಘನವೆಂಬೆನೆ ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
ಮೂಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ? ತನು_ಮನ_ಧನದಲ್ಲಿ ವಂಚಕನಾಗಿ ಕಿರಿದಾದ.
_ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ.
ಘನವ ಬಲ್ಲವರಾರೊ ಗುಹೇಶ್ವರಾ?
481
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು.
ಜಂಗಮಗಳೆಲ್ಲರೂ (ಜಂಗಮವೆಲ್ಲ?)
ಉಪಜೀವಿಗಳಾಗಿ, ಹೋದರು (ಹೋಯಿತ್ತು?).
ಇದೇನೊ? ಇದೆಂತೊ? ಅರಿಯಲೆ ಬಾರದು.
ಕಾಯಗುಣ ನಾಸ್ತಿಯಾದಾತ ಭಕ್ತ,
ಪ್ರಾಣಗುಣ ನಾಸ್ತಿಯಾದಾತ ಜಂಗಮ,
ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ.
482
ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರು (ಉಲಿವುತ್ತಿಪ್ಪರೆಲ್ಲರು?);
ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು,
ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲ ನಾಸ್ತಿಯಾಗದು.
ಇದೆತ್ತಣ ಉಲುಹೊ ಗುಹೇಶ್ವರಾ?
483
ಜಗ[ದ್]ವಂದ್ಯರೆಂದು ನುಡಿದು ನಡೆವರು ನೋಡಾ.
ಭವಬಂಧನದ ಕುಣಿಕೆಯ ಕಳೆಯಲರಿಯರು ನೋಡಾ.
ಭವ ತಮ್ಮ ತುಳಿ ತುಳಿದು ಕೊಂದಿತ್ತು ನೋಡಾ!
ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ,
ನಿಃಶಬ್ದ ವೇದಿಸದಿರ್ದಡೆ, ಗುಹೇಶ್ವರ ನೋಡಿ ನಗುತ್ತಿಪ್ಪನೋಡಾ!
484
ಲೋಕದವರನೊಂದು ಭೂತ ಹಿಡಿದಡೆ,
ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು.
ಲಾಂಭನ ಧಾರಿ ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ?
ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ
ಮಾನವರನೇನೆಂಬೆ ಗುಹೇಶ್ವರಾ?
485
ಏನೆಂದರಿಯರು ಎಂತೆಂದರಿಯರು,
ಬರುಮಾತಿನ ಬೊಮ್ಮವನಾಡುತ್ತಿಪ್ಪರು.
ರುದ್ರನ ನೊಸಲ ಕಣ್ಣ ಕಿಚ್ಚಿನೊಳಗೆ
ತ್ರಿಪುರವ ಸುಡಲರಿಯದೆ
ಕಾಮನ ಕಣ್ಣ ಕಿಚ್ಚಿನೊಳಗೆ ತ್ರಿಪುರವ ಸುಡುತ್ತಿಪ್ಪರು.
ಭೂಮಿಯಾಕಾಶವ ಮೆಟ್ಟಿ,
ಕಾಮಗಣಂಗಳ ಕೂಡೆ ಕಾದಿ ಗೆಲಲರಿಯದೆ
ನೀಲಗಿರಿಯ ಮೇಲೆ ನಿಂದು
ಉಲಿದು (ಉಲಿಯ?) ಉಯ್ಯಾಲೆಯ ನಾಡುತ್ತಿಪ್ಪರಯ್ಯಾ.
ಗುಹೇಶ್ವರಾ ನಿಮ್ನನರಿದೆಹೆವೆಂಬವರೆಲ್ಲ
ಬರುದೊರೆವೋದರಯ್ಯಾ.
486
ಗಗನದ ಮೇಘಂಗಳೆಲ್ಲ ಸುರಿದು[ವು]ಭೂಮಿಯ ಮೇಲೆ.
ಭೂಮಿ ದಣಿಯುಂಡು ಸಸಿಗಳೆಲ್ಲಾ ಬೆಳೆದವು.
ಬಹುವಿಕಾರದಿಂದ ಬೆಳೆದ ಸಸಿ[ಯ], ವಿಕಾರದಿಂದ ಗ್ರಹಿಸುವ
ಕಾಮವಿಕಾರಿಗಳು, ಲಿಂಗವನೆತ್ತೆ ಬಲ್ಲರು ಗುಹೇಶ್ವರಾ.
487
ಮರನುಳ್ಲನ್ನಕ್ಕ ಎಲೆ ಉಲಿವುದು ಮಾಬುದೆ?
ಶರೀರೆವುಳ್ಳನ್ನಕ್ಕೆ ವಿಕಾರ ಮಾಬುದೆ?
ಅಯ್ಯಾ ಸುಳುಹುಳ್ಳನ್ನಕ್ಕ ಸೂತಕ ಹಿಂಗೂದೆ
ಗುಹೇಶ್ವರಾ?
488
ಅರಿವಿನ ಬಲದಿಂದ ಕೆಲಬರು
ಅರಿಯದವರ ಗೆಲಬೇಕೆಂದು,
ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು!
ಅರಿವು ತೋರದೆ ಇರಬೇಕು_ಕಾಯನಿರ್ಣಯ ನಿಃಪತಿಯೆಂಬಾತನು.
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು,
ಅರಿವು ತೋರದೆ ಎರಡೆಂಬ ಭಿನ್ನವೇಷದ ತೋಟ್ಟು
ಡಂಬಕವ ನುಡಿದೆಹೆವೆಂಬ ಉದ್ದಂಡರ
ಗುಹೇಶ್ವರ ಕಂಡರೆ ಕನಲುವ.
489
ಹೋಮವ ಮಾಡುವರ ಕಂಡೆ;
ಹೊಗೆಯ ನಿಲಿಸುವರ ಕಾಣೆ.
ದೂರ ದಾರಿ ನಡೆವರ ಕಂಡೆ;
ಕಾಲುಗಳ ನುಂಗುವರ ಕಾಣೆ.
ಆಲು (ರು?)ತ್ತ ಬೊಬ್ಬೆಗೊಟ್ಟು ರಣದೊಳಗೆ ಅಳಿದು
ಮುಂಡ ಮುಂದೆ ನಡೆದಾಡುವರ ಕಂಡೆ,
ಹರಿದ ಶಿರವ ಹಿಡಿದುಕೊಂಡು,
ಕುಣಿದಾಡುವರ ಕಾಣೆ ಗುಹೇಶ್ವರಾ.
490
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯಪ್ಪುದೆ?
ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ,
ಕನ್ನದಲಿ ಸವೆದ ಕಬ್ಬುನದಂತೆ,
ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು.
ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?
491
ಶಬ್ದಿಯಾದಾತ ತರುಗಳ ಹೋತ, ನಿಶ್ಯಬ್ದಿಯಾದಾತ ಪಾಷಾಣವ ಹೋತ.
ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ.
ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ.
ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು
ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
492
ನಾದದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು, ಎಲೆ ಮರುಳೆ!
ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು
ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಗುಹೇಶ್ವರಲಿಂಗದ ಬಾರಿಗೊಳಗಾಗಿ,
ಇವೆಲ್ಲವನುಂಟುಮಾಡಲರಿಯೆನಾಗಿ_ಎನಗಿಲ್ಲವೆನುತಿರ್ದೆನಯ್ಯಾ.
493
ಮುಂದುಳೂರಿಗೆ ಬಟ್ಟೆ ಇದೇ ಹೋಗೆಂದಡೆ
ಅಂಧಕನೇನು ಬಲ್ಲನು ಹೇಳಾ?
ಸಂಗ್ರಾಮದಲ್ಲಿ ಓಡಿದ ಹಂದೆ ಗೆಲಬಲ್ಲನೆ ಹೇಳಾ?
ನಿಂದ ನಿಲವಿನ (ನೀರಿನ?) ಮಡುವ ಕಂದನೀಸಾಡ ಬಲ್ಲನೆ ಹೇಳಾ?
ಗುಹೇಶ್ವರನೆಂಬ ನಿರಾಳದ ಘನವ
ಪಂಚೇಂದ್ರಿ[ಯ]ಕನೆತ್ತ ಬಲ್ಲನು ಹೇಳಾ?
494
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು;
ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ!
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
ಆಕಾಶವೆಲ್ಲ ಜಲಮಯವಾಯಿತ್ತು!
ತುಂಬಿದ ಜಲವನುಂಡುಂಡು ಬಂದು
ಅಂಜದ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ.
495
ರೂಪ[ನೆ] ಕಂಡರು, ನಿರೂಪ [ನೆ] ಕಾಣರು.
ಅನುವನೆ ಕಂಡರು, ತನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ_ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು!
496
ಇರುಳೊಂದು ಮುಖ ಹಗಲೊಂದು ಮುಖ
ಕಾಯವೊಂದು ಮುಖ ಜೀವವೊಂದು ಮುಖ,
ಬುದ್ಧಿಯನರಿಯದಿದೆ ನೋಡಾ!
ಪ್ರಾಣಲಿಂಗವೆಂಬ ಭ್ರಾಂತು ನೋಡಾ!
ಇದುಕಾರಣ_ಮೂರುಲೋಕವೆಯ್ದೆ
ಬರುಸೂರೆವೋಯಿತ್ತು ಗುಹೇಶ್ವರಾ.
497
ಭಾವದಲ್ಲಿ ಭ್ರಮಿತರಾದವರ
ಸೀಮೆಯೇನು? ನಿಸ್ಸೀಮೆಯೆನು?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
498
ಅಘಟಿತ ಘಟಿತನೆ ವಿಪರೀತ ಚರಿತ್ರನೆ,
ಸಾವರ ಕೈಯಲ್ಲಿ ಪೂಜಿಗೊಂಬರೆ ಲಿಂಗಯ್ಯಾ?
ಸಾವರ ನೋವರ ಕೈಯಲ್ಲಿ ಪೂಜಿಗೊಂಬುದು
ಲಜ್ಜೆ ಕಾಣಾ_ಗುಹೇಶ್ವರಾ.
499
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
ಬೆಳಗೂ ಅದೆ, ಕತ್ತಲೆಯೂ ಅದೆ!
ಇದೇನು ಚೋದ್ಯವೊ? ಒಂದಕ್ಕೊಂದಂಜದು!
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ_ಗುಹೇಶ್ವರಾ.
500
ತತ್ವವೆಂಬುದು ನೀನೆತ್ತ ಬಲ್ಲೆಯೊ?
ಸತ್ತು ಮುಂದೆ ನೀನೇನ ಕಾಬೆಯೊ?
ಇಂದೆ ಇಂದೆಯೊ ಇಂದೆ ಮಾನವಾ
ಮಾತಿನಂತುಟಲ್ಲ ಶಿವಾಚಾರ, ದಸರಿದೊಡಕು ಕಾಣಿರಣ್ಣಾ.
ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ.
ಏಕೋ ರಾತ್ರಿಯ ಬಿಂದು ನೋಡಾ!
ಗುಹೇಶ್ವರನ ಕೂಡಿದ ಕೂಟ
ಇಂದು ಸುಖ, ಮುಂದೆ ಲೇಸು!
501
ಪೃಥ್ವಿ ಅಪ್ಪು ತೇಜ ವಾಯು ಆಕಾಶದಲ್ಲಿ
ಬೆಳೆಯುತ್ತಿದ್ದಡೇನು ನೋಡಾ.
ಘನ ಘನವನರಿದೆನೆಂಬ ಮರುಳು ಮಾನವರ ನೋಡಾ.
ನಿರ್ಣಯವಿಲ್ಲದ ನಿರ್ವಿಕಾರ ಗುಹೇಶ್ವರನೆಂಬ ಮಹಾಘನದ
ತಿಳಿಯರು ನೋಡಾ!
502
ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು.
ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು.
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲರಿಗೆಯೂ ಸಾವು!
ಮಹಾಪುರುಷರಿಗೆಯೂ ಸಾವು!
ಶಿವ ಶಿವಾ, ಈ ಸಾವನರಿಯದೀ ಲೋಕ!
ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ
ಆ ಮಹಿಮಂಗೆ ಸಾವಿಲ್ಲ.
ಈ ಸಾವನರಿಯದ ಅರೆಮರುಳಗಳ ಅರಿವು
ಮಾನ (ಮಹಾ?) ಹಾನಿ ಕಾಣಾ ಗುಹೇಶ್ವರಾ.
503
ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ,
ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ?
ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ?
ದೇವರಿಗೆ ದೇವಲೋಕ, ಮಾನವರಿಗೆ ಮರ್ತ್ಯಲೋಕ,
ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
504
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ!
ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು.
ರವಿಯ ರಥದಚ್ಚು ಮುರಿಯಿತ್ತು!
ಶಶಿ ವಂಶದ ನಿಲವನು ರಾಯ (ರಾಹು?) ಗೆದ್ದುದ ಕಂಡು
ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ.
505
ಸನಕ ಸನಂದಾದಿ ಮುನಿಜನಂಗಳೆಲ್ಲರೂ, ಭಸ್ಮಾಂಗಿಗಳೆಲ್ಲರೂ_
ಇವರು ಸತ್ಯರೆಂಬುದು ಹುಸಿ, ನಿತ್ಯರೆಂಬುದು ಹುಸಿ,
ಸತ್ತರೆಂಬುದು ದುಟ ಗುಹೇಶ್ವರಾ!
506
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ.
ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ.
ಮೀನಜರಿಗೆ ಮೀನ ಪ್ರಳಯವಾದಲ್ಲಿ,
ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ.
ಆ ಅಸಹಸ್ರನೆಂಬ ಗಣೇಶ್ವರಂಗೆ ಪ್ರಳಯದಲ್ಲಿ ಅಳಿದುಳಿದಲ್ಲಿ,
ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ
ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ.
ಇಂತಹ ರುದ್ರಾವತಾರ ಹಲವಳಿದಡೆ,
ಗುಹೇಶ್ವರಲಿಂಗವನೆಂದೂ ಅರಿಯ!
507
ಬೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ,
ಮರಣವಾರಿಗೂ ಮನ್ನಣೆಯಿಲ್ಲ!
ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ.
ಇದು ಕಾರಣ_ಗುಹೇಶ್ವರಾ ನಿಮ್ಮ ಶರಣರು
ಕಾಲನ ಬಾರಿಗೆ ಕಲ್ಪಿತರಾಗರು!
508
ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತು ಬಿದ್ದ, ರುದ್ರನೆಂಬವ ಅಬದ್ಧವಿಚಾರಿ!
ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ, ನಿಮ್ಮ ತಾಗುವುದು ಗುಹೇಶ್ವರಾ.
509
ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು
ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು!
ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು.
ರಂಜನೆಗೊಳಗಪ್ಪುದೆ? _ಆಗರದ ಸಂಚವನರಿಯರು!
ರಂಜಕನೂ ಅಲ್ಲ, ಭುಂಜಕನೂ ಅಲ್ಲ,
ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು!
510
ಆದಿ ತ್ರೈಯುಗದಲ್ಲಿ ದೇವ ದಾನವ ಮಾನವರು
ಮಾಯಾಮೋಹದಲ್ಲಿ ಹುಟ್ಟಿ ತೊಳಲಿ ಬಳಲುತ್ತೈದಾರೆ!
ಆವ ವೇಷವಾದಡೇನು? ತಾಮಸಧಾರಿಗಳು,
ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಬಕರು!
ಹೂಳದ ಹುಣ್ಣಿಂಗೆ ಆರಯ್ಯಾ ಮದ್ದನಿಕ್ಕುವರು?
ಇದೇನು ಗುಹೇಶ್ವರ? ಸೊರೆಯ ಬಣ್ಣದ ಹಿರಿಯರು!
511
ಯುಗ ಜುಗದ ಬಲ್ಲೆನೆಂಬವರು,
ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು.
ಬಾಯ ಬಾಗಿಲು [ಉಲುಹು], ತಲೆಹೊಲದ ಹುಲ್ಲೊಣಗಿತ್ತು.
ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ.
512
ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಭಿಕ್ಷನ ಬೇಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು. _
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು.
513
ದೇವಲೋಕದವ[ರೆಲ್ಲರ] ವ್ರತಗೇಡಿಗಳೆಂಬೆ.
ಮರ್ತ್ಯಲೋಕದವ [ರೆಲ್ಲರ] ಭಕ್ತದ್ರೋಹಿಗಳೆಂಬೆ.
ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ.
ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ_
ಗುಹೇಶ್ವರಾ ಲಿಂಗೈಕ್ಯವನರಿಯರಾಗಿ.
514
ಹರಿ ಹೊಲಬನರಿಯ, ಬ್ರಹ್ಮ ಮುಂದನರಿಯ,
ರುದ್ರ ಲೆಕ್ಕವ ಮರೆದು ಜಪವನೆಣಸುತ್ತೈದಾನೆ.
ಈಶ್ವರ ಪವನಯೋಗದಲ್ಲಿ ಮಗ್ನನಾದ.
ಸದಾಶಿವ ಭಾವದಲ್ಲಿ ಭ್ರಮಿತನಾದ.
ಒಂದಂಡಜದೊಳಗಣ ಬಾಲಕರೈವರು,
ನಿಮ್ಮನೆತ್ತಿ ಬಲ್ಲರು ಗುಹೇಶ್ವರಾ.
515
ಕಾಯವೆ ಸತ್ತು ಮಾಯವೆ ಉಳಿಯಿತ್ತು.
ಎರಡರ ಸುಖದುಃಖವನರಿಯರು ನೋಡಾ.
ಅದೇನೆಂದರಿಯರು ಅದೆಂತೆಂದರಿಯರು ನೋಡಾ.
ಹಿರಿಯರೆಲ್ಲಾ ವೃಥಾಯ ಹೋದರು ನೋಡಾ.
ಕಣ್ಣ ಮುಂದಣ ಕಪ್ಪ ಕಳೆಯಲರಿಯರು ನೋಡಾ.
ಗುಹೇಶ್ವರನೆಂಬ ಶಬ್ದಕ್ಕೆ ನಾಚರು ನೋಡಾ!
516
ಆಮರದ ಹೊಲಬನರಿಯದೆ ಜಗ ಬರಡಾಯಿತ್ತು.
ಅಂಗದ ಹೊಲಬನರಿಯದೆ ಯೋಗ ಭಂಗವಾಯಿತ್ತು.
ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು.
ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು,
ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ!
517
ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ!
ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ,
ಉಪಚಾರಕ್ಕೋಸುಗರ!
ಸಾವಿಂಗೆ ಸಂಗಡವಾದೆಯಲ್ಲಾ_ಗುಹೇಶ್ವರಾ!
518
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ?
ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ?
ನಾನರಿದೆನೆಂಬಾತ ಇದಿರ ಕೇಳಲುಂಟೆ?
ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
ಮಾತಿನ ಮಾತಿನೊಳಗೆ ಅರಿವೆಂಬುದುಂಟೆ?
ಸೂತಕ ಹಿಂಗದೆ ಸಂದೇಹವಳಿಯದೆ,
ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ?
ಜ್ಯೋತಿಯ ಬಸಿರೊಳಗೆ ಜನಿಸಿದ
ಕಾಂತಿಯೂಥ(ಯುತ?) ಬೇಳಗು ಗುಹೇಶ್ವರಾ ನಿಮ್ಮ ಶರಣ!
519
ಇರುಳ ನುಂಗಿತ್ತು, ಇರುಳಿಲ್ಲ; ಹಗಲ ನುಂಗಿತ್ತು ಹಗಲಿಲ್ಲ.
ಅರಿವ ನುಂಗಿತ್ತು ಅರಿವಿಲ್ಲ, ಮರಹ ನುಂಗಿತ್ತು ಮರಹಿಲ್ಲ.
ಕಾಯವ ನುಂಗಿತ್ತು ಕಾಯವಿಲ್ಲ, ಜೀವನ ನುಂಗಿತ್ತು ಜೀವವಿಲ್ಲ.
ಇವೆಲ್ಲವ ನುಂಗಿತ್ತು_ಇದೇನಯ್ಯಾ, ಸಾವ ನುಂಗದು ಗುಹೇಶ್ವರಾ?
520
ಅಡಿಗಡಿಗೆ ತೊಳೆದು ಕುಡಿವಡೆ ಹೋಟ್ಟೆಯ ಜಲಗರಕುತ್ತ ಬೆಳೆಯಿತ್ತೆ?
ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ?
ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
ನಾ ನಿಮ್ಮ ಪೂಡಿಸಿ ಬದುಕಿದೆನು ಗುಹೇಶ್ವರಾ!
521
ಮಜ್ಜನಕ್ಕೆರೆವಡೆ ಭೂತವಿಕಾರ, ಪ್ರಮಥ ಗಣಂಗಳೆಲ್ಲರೂ ಪ್ರೇತರು.
ವೀರಭದ್ರ ಗಣಂಗಳೆಲ್ಲರೂ ಬ್ರಹ್ಮರಾಕ್ಷಸರು.
ಅರ್ಧನಾರೀಶ್ವರರೆಲ್ಲರೂ ಚಿಕ್ಕಮಕ್ಕಳ ಮೇಲೆ, ತಪ್ಪ ಸಾಧಿಸಿ ಕಾಡಿ ಉಂಬರು. _
ಈ ನಾಲ್ಕು ಸ್ಥಲದೊಳಗೆ ಆವುದೂ ಅಲ್ಲ
ಗುಹೇಶ್ವರಾ ನಿಮ್ಮ ಲಿಂಗೈಕ್ಯವು!
522
ಭಕ್ತಿಯೆಂಬುದು ಯುಕ್ತಿಯೊಳಗು, ಪೂಜೆಯೆಂಬುದು ನಿರ್ಮಾಲ್ಯದೊಳಗು.
ಪ್ರಸಾದವೆಂಬುದು ಓಗರದೊಳಗು, ಆಚಾರವೆಂಬುದು ಅನಾಚಾರದೊಳಗು.
ಧರ್ಮವೆಂಬುದು ಅಧರ್ಮದೊಳಗು, ಸುಖವೆಂಬುದು ದುಃಖದೊಳಗು.
ವ್ರತವೆಂಬುದು ವೈರಾಗ್ಯದೊಳಗು, ನೇಮವೆಂಬುದು ಉದ್ದೇಶದೊಳಗು.
ಅಹಿಂಸೆಯೆಂಬುದು ಹಿಂಸೆಯೊಳಗು! _ಇವಾವಂಗವೂ ಇಲ್ಲದೆ
ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!
523
ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ.
ಶರಣಸತಿ ಲಿಂಗಪತಿ ಎಂಬ ಶಬ್ದ ಸರ್ವಗುಣಸಾಹಿತ್ಯ ಎಂಬಾತ
ಕರ್ಮೇಂದ್ರಿಯ ಭೋಗಕ್ಕೆ ಬಾರದ ಭೋಗಿ.
ಗುಹೇಶ್ವರಾ ನಿಮ್ಮ ಶರಣ,
ಆವ ಭೀತನೂ ಅಲ್ಲ ಆವ ಕರ್ಮಿಯೂ ಅಲ್ಲ.
524
ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ.
ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ. _
ಇಂತೀ ಚತುರ್ವಿಧದೊಳಗಿಲ್ಲ,
ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!
525
ಊರೊಳಗೊಬ್ಬ ದೇವ, ಮಡುವಿನಲೊಬ್ಬ ದೇವ,
ಅಡವಿಯಲೊಬ್ಬ ದೇವ, ಮಡಿಲಲೊಬ್ಬ ದೇವ.
ನೀರು ನೀರ ಕೂಡಿ, ಬಯಲು ಬಯಲ ಕೂಡಿ
ನರನೆಂಬ ದೇವ ತಾ ನಿರಾಳವೊ!
ಲಿಂಗವೆಂಬುದೊಂದು ಅನಂತ[ದ] ಹೆಸರು,
ಗುಹೇಶ್ವರನೆಂಬುದದೇನೊ?
526
ತನುವಿನ ಕೊರತೆಗೆ ಸುಳಿಸುಳಿದು, ಮನದ ಕೊರತೆಗೆ ನೆನೆನೆನೆದು,
ಭಾವದ ಕೊರತೆಗೆ ತಿಳಿತಿಳಿದು, ಶಬ್ದದ ಕೊರತೆಗೆ ಉಲಿದುಲಿದು,
ಗುಹೇಶ್ವರನೆಂಬ ಲಿಂಗವು ಮನದಲ್ಲಿ ನೆಲೆಗೊಳ್ಳದಾಗಿ!
527
ಹುಸಿಯುಳ್ಳಾತ ಭಕ್ತನಲ್ಲ ಬಾಧೆಯುಳ್ಳಾತ ಜಂಗಮವಲ್ಲ,
ಆಸೆಯುಳ್ಳಾತ ಶರಣನಲ್ಲ.
ಇಂತಪ್ಪ ಆಸೆ ಹುಸಿ ಬಾಧೆಯ ನಿರಾಕರಿಸಿ ಇರಬಲ್ಲಡೆ_
ಗುಹೇಶ್ವರಾ ನಿಮ್ಮ ಶರಣ.
528
ಆಶೆಯ ವೇಷದ ಧರಿಸಿ ಭಾಷೆ ಪಲ್ಲಟವಾದರೆ
ಎಂತಯ್ಯಾ ಶರಣಪಥ ವೇದ್ಯವಹುದು?
ತ್ರಿಭುವನದ ಮಸ್ತಕದ ಮೇಲಿಪ್ಪ ಮೂರು ಗಿರಿಯ ಹುಡಿಗುಟ್ಟದನ್ನಕ್ಕರ
ಎಂತಯ್ಯಾ ಶಿವಪಥ ಸಾಧ್ಯವಹುದು?
ಭದ್ರೆ ನಿಭದ್ರೆಯೆಂಬವರ ಮೂಲವ ನಾಶಮಾಡದನ್ನಕ್ಕರ,
ಎಂತಯ್ಯಾ ಲಿಂಗೈಕ್ಯವು?
ಅತಳಲೋಕದಲ್ಲಿ ಕುಳ್ಳಿರ್ದು, ಬ್ರಹ್ಮಲೋಕವ ಮುಟ್ಟಿದೆನೆಂಬವರೆಲ್ಲ
ಭವಭಾರಕ್ಕೊಳಗಾದುದ ಕಂಡು
ನಾನು ಬೆರೆಗಾದೆನು ಗುಹೇಶ್ವರಾ.
529
ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು.
530
ಭಸ್ಮವ ಹೂಸಿ ಬತ್ತಲೆಯಿದ್ದಡೇನು ಬ್ರಹ್ಮಚಾರಿಯೆ?
ಅಶನವನುಂಡು ವ್ಯಸನವ ಮರೆದಡೇನು ಬಹ್ಮಚಾರಿಯೇ?
ಭಾವ ಬತ್ತಲೆಯಿರ್ದು ಮನ ದಿನ ದಿಗಂಬರವಾಗಿರ್ದಡೆ
ಅದು ಸಹಜ ನಿರ್ವಾಣವು ಕಾಣಾ ಗುಹೇಶ್ವರಾ.
531
ಶರಣಸಂಬಂಧವನರಿದವನು ಎಂತಿರ್ದಡೇನಯ್ಯಾ?
ತಿಳಿದು ನೋಡಿ ನಡೆಯದಿರ್ದಡೆ ಭಕ್ತಿವಿರೋಧ.
ತೆರನನರಿದು ಮರವೆಯಳಿದು ಸುಳಿವನಾಗಿ
ಉಪಜೀವಿಕನಲ್ಲ ಕೇಳಿರಣ್ಣಾ.
ಗುಹೇಶ್ವರನ ಶರಣನ ಸಂಗಸುಖದ ಉರವಣೆಯ ಸೋಂಕು
ಲೋಕಕ್ಕೆ ವಿರೋಧ!
532
ನೆಲನಿಲ್ಲದ ಭೂಮಿಯ ಮೇಲೊಂದು ಗಿಡು ಹುಟ್ಟಿತ್ತು!
ಸಿಡಿಲು ಬಣ್ಣದವೆಂಟು ಹೂವಾದವು ನೋಡಾ.
ಕೊಂಬಿನೊಳಗೆ ಫಲದೋರಿ ಬೇರಿನೊಳಗೆ ಹಣ್ಣಾಯಿತ್ತು!
ಆರೂ ಕಾಣದ ಠಾವಿನಲ್ಲಿ ತೊಟ್ಟು ಬಿಟ್ಟು ಬಿದ್ದ ಹಣ್ಣ
ಮೆದ್ದವನಲ್ಲದೆ ಶರಣನಲ್ಲ ಗುಹೇಶ್ವರಾ.
533
ಧ್ಯಾನ ಸೂತಕ, ಮೌನ ಸೂತಕ, ಜಪ ಸೂತಕ, ಅನುಪ್ಠಾನ ಸೂತಕ.
ಗುಹೇಶ್ವರನೆಂಬ ಲಿಂಗವನರಿದ ಬಳಿಕ ಸುತಕ ಹಿಂಗಿತ್ತು,
ಯಥಾ ಸ್ವೇಚ್ಛೆ.
534
ಕೂರಹ ಮುಟ್ಟದೆ, ಕೂದಲು ಹರಿಯದೆ ಬೋಳಾಗಬೇಕು.
ಕಾಯ ಬೋಳೋ? ಕಪಾಲ ಬೋಳೋ?
ಹುಟ್ಟುವುದು ಬೋಳೋ? ಹುಟ್ಟದ ಹೋಹುದು ಬೋಳೋ?
ಗುಹೇಶ್ವರಾ.
535
ನಿರಾಳಾಸ್ಥಾನದಲ್ಲಿ ಆಪ್ಯಾಯನವಿಲ್ಲದೆ ಹೋಯಿತ್ತದೇನೆಂಬೆನಯ್ಯಾ?
ಹಲವು ನಾಮವಾದೆಲ್ಲಾ!
ಚಂದಚಂದದ ಚರಿತ್ರನಲ್ಲ_ನಿಲ್ಲು ಮಾಣು.
ನಿಮ್ಮಿಚ್ಛೆಯ ಪಡೆದರೆಮ್ಮವರು.
ಇಂತಹ ದೇವನು ಅಂತಹ ದೇವನು ಎಂಬ ನಾಮ ಉರಿಸದು,
ಒಲ್ಲೆ ಕಾಣಾ ಗುಹೇಶ್ವರಾ.
536
ಆಗದಂತೆ ಆದೆನು, ಜಗದ ಆಗುವ ಕಂಡು ಬಲ್ಲೆನಾಗಿ ಒಲ್ಲೆನು.
ಜಗ ನಿಲ್ಲದು ಕಂಡಯ್ಯಾ.
ಮಾಡಿ ಮಾಡಿ ಕೆಡಿಸದಿರಾ, ನೀ ನಾಡಿಂಗೆ ಮರುಳಾಗದಿರಾ!
ಬೇಡು ಗುಹೇಶ್ವರಾ ನಿರಾಳವನೆನ್ನಲ್ಲಿ.
537
ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು.
ಕಾನನದ ಕಿಚ್ಚು ಬಂದು ಊರೊಳಗೆ ಉರಿಯಿತ್ತು.
ಆರಿಸಿರೊ ಆರಿಸಿರೊ ನಾಲ್ಕುದಿಕ್ಕಿನ ಬೇಗೆಯ.
ಅ ಭೂ ಭೂ ಕಾರವ ದೃಷ್ಟಿ ಮುಟ್ಟಿದಡೆ
ಆಟ್ಟೆ ಸಹಸ್ರವಾಡಿತ್ತು! ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರಾ
538
ಪರಿಣಾಮದೊಳಗೆ ಮನದ ಪರಿಣಾಮವೆ ಚೆಲವು.
ಸಂಗದೊಳಗೆ ಶರಣರ ಸಂಗವೆ ಚೆಲುವು.
ಕಾಯಗೊಂಡು ಹುಟ್ಟಿದ ಮೂಢರೆಲ್ಲರು
ಸಾಯದ ಸಂಚವನರಿವುದೆ ಚೆಲುವು_ಗುಹೇಶ್ವರಾ.
539
ಜಗತ್ಸೃಷ್ಟವಹ ಅಜನ ಕೊಂಬು ಮುರಿಯಿತ್ತು.
ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ!
ಉದಯ ನಿಂದಡೆ ಅಸ್ತಮಾನವಹುದು.
ಊರು ಬೆಂದು ಉಲುಹಳಿದುದು. _ಇದೇನು ಸೋಜಿಗವೊ!
ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
540
ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಉರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.
541
ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು,
ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲಿಕ್ಕದ
ಬಲ್ಲಿದ ತಳವಾರನೀತನು!
ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ
ಬಲ್ಲಿದ ತಳವಾರನೀತನು!
ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ
ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ.
542
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನಕ್ಕರ?
ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ?
ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ?
ತಾನು ತಾನಾದ ಶರಣನ ನಿಲವಿಂಗೆ
ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ?
543
ಆಡುತಾಡುತ ಬಂದ ಕೋಡಗ,
ಜಪವ ಮಾಡುವ ತಪಸಿಯ ನಂಗಿತ್ತಲ್ಲಾ!
ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು!
ಮುಂದಣ ಮೊಲನ ಹಿಂದಣ ಕೋಡಗವ
ಕಂಬಳಿ ನುಂಗಿತ್ತು ಗುಹೇಶ್ವರಾ.
544
ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ
ಇಲ್ಲಿಂದತ್ತಲೆ ನೋಡಾ.
ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು,
ಲಿಂಗಸನ್ನಹಿತ ಅಪಾರಮಹಿಮನು.
ಸುರಾಸುರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದರು!
ಸರಸದೊಳಗಲ್ಲ ಹೊರಗಲ್ಲ ಕೇಳು ಭಾವ ಗುಹೇಶ್ವರ.
545
ಕಿಚ್ಚಿನ ದೇವನು, ಕಂಡದ ದೇವನು,
ಮಾರಿಯ ದೇವನು, ಮಸಣದ ದೇವನು,
ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ.
ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ,
ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಗುಹೇಶ್ವರಾ.
546
ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಾಲಾ, ನಿಮ್ಮ ಕಂಡವರಾನೊ?
ಅಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು!
547
ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
ಎನ್ನ ಕೈ ನೋಡಿ ಭೋ ಕಲಿವೀರ ಸುಭಟರು.
ಎನ್ನ ಕೈ ನೋಡಿ ಭೋ ಅರುಹಿರಿಯರು.
ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ,
ಎನ್ನ ಕೈ ನೋಡಿ ಭೋ.
548
ಆಸುರವಾದುದು ಬೀಸರವಾಯಿತ್ತು.
ಬಲ್ಲೆನೊಲ್ಲೆ ನೀ ಕೊಡುವ ವರವನು.
ನಾ ಬೇಡಿತ್ತು ನಿನ್ನ ಮುಖದಲ್ಲಿಲ್ಲ ಗುಹೇಶ್ವರಾ.
549
ಅತಿರಥ ಸಮರಧರೆನಿಪ ಹಿರಿಯರು,
ಮತಿಗೆಟ್ಟು ಮರುಳಾದರಲ್ಲಾ!
ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ.
ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು.
ಇದ ಕಂಡು ಬೆರಗಾದೆ ಗುಹೇಶ್ವರಾ.
550
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು
ಮುಂದಣ ಕವಿಗಳೆನ್ನ ಕರುಣದ ಕಂದಗಳು.
ಆಕಾಶದ ಕವಿಗಳೆನ್ನ ತೊಟ್ಟಿಲು ಕೂಸು.
ಹರಿಬ್ರಹ್ಮರೆನ್ನ ಕಕ್ಷಕುಳ.
ನೀ ಮಾವ ನಾನಳಿಯ ಗುಹೇಶ್ವರಾ.
551
ದೇವಲೋಕದ ದೇವಗಣಂಗಳೆಲ್ಲ ಎನ್ನ ಹೊರಗೆಂಬರು;
ಅದು ದಿಟವೆ.
ಸತ್ಯ ಸಾತ್ವಿಕ ಸದ್ಭಕ್ತರು ಎನ್ನ ಹೊರಗೆಂಬರು;
ಅದು ದಿಟವೆ.
ಹದಿನಾಲ್ಕು ಭುವನದೊಳಗೆ ಅವರು ತಾವಿರಲಿ,
ನಾ ನಿಮ್ಮೊಳಗು ಗುಹೇಶ್ವರಾ.
552
ಪಂಚಮಹಾಪಾತಕವಾವುವೆಂದರಿಯರು_
ಭವಿಯ ತಂದು ಭಕ್ತದ ಮಾಡುದು ಪ್ರಥಮ ಪಾತಕ.
ಭಕ್ತರಿಗೆ ಶರಣೆಂಬುದು ದ್ವೀತೀಯ ಪಾತಕ, ಗುರುವೆಂಬುದು ತೃತೀಯ ಪಾತಕ.
ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ.
ಗುಹೇಶ್ವರಲಿಂಗದಲ್ಲಿ ಹಿರಿದು ಭಕ್ತಿಯ ಮಾಡುದು ಪಂಚಮ ಪಾತಕ!
553
ಆಗಮ್ಯ ಅಗೋಚರನೆಸಿಕೊಂಡು, ಅವರಿವರ ಕೈಗೆ ಎಂತು ಬಂದೆ?
ಉಗುರುಗಳೆಲ್ಲ ಸುತ್ತಿದವೆ? ಅಗ್ಘವಣಿ ಪತ್ರೆ ಅರತವೆ ಅಯ್ಯಾ?
ಎನ್ನ ಕರಸ್ಥಲದೊಳಗಿರ್ದು ಎನ್ನೊಡನೆ ನುಡಿಯೆ,
ನಿನ್ನ ಹಲ್ಲ ಕಳೆದಡೆ ಒಡೆಯರುಂಟೆ ಗುಹೇಶ್ವರಾ?
554
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ
ಷಡುವರ್ಣವೆಂದೆನ್ನ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ.
ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ.
ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
555
ಆಡಾಡ ಬಂದ ಕೋಡಗ ಹಂದರವನೇರಿತ್ತಲ್ಲಾ!
ನೋಡ ಬಂದವರ ಕಣ್ಣೆಲ್ಲಾ ಒಡೆದವು.
ಬೆಣ್ಣೆಯ ತಿಂದವರ ಹಲ್ಲೆಲ್ಲಾ ಹೋದವು!
ಇದೇನು ಸೋಜಿಗ ಹೇಳಾ ಗುಹೇಶ್ವರಾ?
556
ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.
557
ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ (ತೊಟ್ಟಡೆ?)
ತಪ್ಪದೆ ತಾಗಿತ್ತಲ್ಲಾ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ!
ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು.
ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?
558
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ. _
ನಾ ದೇವ ಕಾಣಾ ಗುಹೇಶ್ವರಾ!
559
ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ.
ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ.
ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ.
ಇದು ತಕ್ಕುದೆಂದರಿದು, ಕೊಳಬಲ್ಲಡೆ
ಸಿಕ್ಕುವನು ನಿಮ್ಮ ಗುಹೇಶ್ವರನು.
ಕಲ್ಲ ಹೋರಿನೊಳಗೊಂದು ಕಾರ್ಯವ ಕಾಬಡೆ,
ಕಲ್ಲ ಬೆದಕದೆ ಕಪ್ಪೆಯ ಸೋಂಕದೆ
ಅಲ್ಲಿಯ ಉದಕವ ಕುಡಿಯ ಬಲ್ಲಡೆ_ಅದು ಯೋಗ.
ಬಲ್ಲಡೆ ನಿಮ್ಮಲ್ಲಿ ನೀವೆ ತಿಳಿದು ನೋಡಿರೆ.
ಅರಿವ ಯೋಗಕ್ಕಿದು ಚಿಹ್ನವಯ್ಯಾ:
ಕಲ್ಲು ಕಪ್ಪೆಯೊಳಗಣ ಹುಲ್ಲುರಿಯದೆ ಆಟ್ಟುಂಬತೆ ಗುಹೇಶ್ವರಾ.
560
ನೀರಿಲ್ಲದ ನೆಳಲಿಲ್ಲದ ಬೇರಿಲ್ಲದ ಗಿಡುವ
ತಲೆಯಿಲ್ಲದ ಮೃಗ ಬಂದು ಮೇಯಿತ್ತು.
ಕಣ್ಣಿಲ್ಲದ ಕುರುಡನು ಕಂಡನಾ ಮೃಗವ.
ಕೈಯಿಲ್ಲದ ವ್ಯಾಧನು ಎಚ್ಚನಾ ಮೃಗವ.
ಕಿಚ್ಚಿಲ್ಲದ ನಾಡಿಗೊಯ್ದ ಸುಟ್ಟು ಬಾಣಸವ ಮಾಡೆ
ಲಿಂಗಕ್ಕರ್ಪಿತವಾಯಿತ್ತು ಗುಹೇಶ್ವರಾ!
561
ನೀ ನಾನೆಂಬ ಭಾವವಾರಿಂದಾಯಿತ್ತು ಹೇಳಾ?
ನೀನೆಂಬುದು ಅಜ್ಞಾನ, ನಾನೆಂಬುದು ಮಾಯಾಧೀನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ
ಭಿನ್ನವಿಲ್ಲದೆ ಅರಿಯಬಲ್ಲಡೆ;
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
562
ಇಪ್ಪತ್ತೈದು ತತ್ವದ ಹತ್ತೆಂದು ದ್ವಾರದಲ್ಲಿ ಬಳಲುವ
ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ?
ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ
ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು.
ಮತ್ತ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?
563
ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು.
ರೂಪೆಂಬೆನೆ? ನೇತ್ರದೆಂಜಲು. ರುಚಿಯೆಂಬೆನೆ? ಬಿಹ್ವೆಯೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು, ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಭಿನ್ನವಳಿದ, ಬೆಳಗಿನೊಳಣ ಬೆಳಗು
ಗುಹೇಶ್ವರನೆಂಬ ಲಿಂಗವು.
564
ಹಸಿವರತಲ್ಲದೆ ಪ್ರಸಾದಿಯಲ್ಲ.
ತೃಷೆಯರತಲ್ಲದೆ ಪಾದೋದಕಿಯಲ್ಲ.
ನಿದ್ರೆಯರತಲ್ಲದೆ ಭವವಿರಹಿತನಲ್ಲ.
ಅನಲ_ಪವನವರತಲ್ಲದೆ ಪ್ರಾಣಲಿಂಗಿಯಲ್ಲ. _
ಇದು ಕಾರಣ, ಗುಹೇಶ್ವರಲಿಂಗವು ಎಲ್ಲರಿಗೆಲ್ಲಿಯದೊ?
565
ಪಿಂಡಬ್ರಹ್ಮಂಡದೊಳಗೆ ತಂಡ ತಂಡದ ಲೋಕ.
ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ,
ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು
ನಡುರಂಗದಲ್ಲಿ ಕೊಡನೊಡೆಯಲೀಯದೆ;
ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ
ಉಂಡು ಸುಖಿಯಾದೆ ಗುಹೇಶ್ವರಾ.
566
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ?
ಅದು ದೊರಕೊಳ್ಳದು ನೋಡಾ!
ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು
ಇಹ ಪರವೆಂಬುದೊಂದು ಭ್ರಾಂತಳಿದು,
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ
ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.
567
ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು,
ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ,
ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ,
ಈಶ್ವರ ಮೇಲೋಗರ, ಸದಾಶಿವ ತುಪ್ಪ;
ಉಣಲಿಕ್ಕಿ ಕೈಕಾಲು ಮುರಿತ್ತು ಗುಹೇಶ್ವರಾ.
569
ಉಂಡೆನುಟ್ಟಿನೆಂಬ ಸಂದೇಹ ನಿನಗೇಕಯ್ಯಾ?
ಉಂಬುದೆ ಅಗ್ನಿ? ಉಡುವುದೆ ಪೃಥ್ವಿ?
ನೀನೆಂದು ಉಂಡೆ? ನಾನೆಂದು ಕಂಡೆ?
ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತನೆಂಬ ಅಂಜಿಕೆ
ನಿನಗೆ ಬೇಡ, ಅಂಜದಿರು, _
ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ.
570
ಮೇರುಮಂದಿರದಲ್ಲಿ ಈರೈದರ ತಲೆ,
ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು.
ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು.
ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ
ಶರಣು ಶರಣೆನುತಿದ್ದೆನು.
ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರವ?) ಬೇಡಿದಡೆ
ಖಂಡಕಪಾಲದಲ್ಲಿ ಉಂಡ ತೃಪ್ತಿ,
ಅಖಂಡಿತ ನಿರಾಳ ಗುಹೇಶ್ವರ.
571
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ.
[ಶಿಷ್ಯನ ಪ್ರಸಾದ ಗುರುವಿಂಗಲ್ಲದೆ] ಗುರುವಿನ ಪ್ರಸಾದ ಶಿಷ್ಯಂಗಿಲ್ಲ!
ಇದು ಕಾರಣ, _ಗುರುವೆ ಓಗರ, ಓಗರವೆ ಅರ್ಪಿತ.
ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ!
ಸುಡು ಸುಡು, ಶಬ್ದಸೂತಕರ ಕೈಯಲ್ಲಿ,
ಸ್ಥಾವರ ವಿಧಿವಶವಾಯಿತ್ತು ಗುಹೇಶ್ವರಾ.
572
ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ.
ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ.
ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ.
ನೆಲಹಿನ ಮೇಲಣ ಬೆಣ್ಣೆ_ಇದು ದಿಟವೊ?
ನಾರಿವಾಳದ ಕಾಯೊಳಗಣ ತಿರುಳ
ಒಡೆಯದೆ ಮೆಲಬಲ್ಲಡೆ ಬೆಡಗು_ಗುಹೇಶ್ವರಾ.
573
ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ ಬೇಡಬಲ್ಲಡೆ,
ಅದು ವರ್ಮ, ಅದು ಸಂಬಂಧ.
ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ
ಅದು ವರ್ಮ, ಅದು ಸಂಬಂಧ.
ಅವರ ನಡೆ ಪಾವನ, ಅವರ ನುಡಿ ತತ್ತ್ವ,
ಅವರು(ರು?) ಜಗದಾರಾಧ್ಯರೆಂಬೆ ಗುಹೇಶ್ವರಾ.
574
ಉಂಡೆಹೆನೆಂದಡೆ; ಕಂಡೆಹೆನೆಂದಡೆ ಪ್ರತಿಯಿಲ್ಲ.
ನೋಡಿಹೆನೆಂದಡೆ_ಉದಕದೊಳಗಣ ಜ್ಯೋತಿಯಂತಾದವು (ಜ್ಯೋತಿಯಂತೆ?)
ಗುಹೇಶ್ವರಾ, ನಿಮ್ಮ ನಾಮದ ಹಿಡಿದು ಬಿಟ್ಟಡೆ ಭಂಗವಯ್ಯಾ.
575
ಉಂಡಡೇನೊ? ಉಣದೆ ಇರ್ದಡೇನೊ?
ಸೋಂಕಿಚವೇನೊ? ಅಸೋಂಕಿತವೇನೊ?
ಹುಟ್ಟೂದಿಲ್ಲಾಗಿ ಹೊಂದೂದಿಲ್ಲ
ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರಾ.
576
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ
ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು
ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ
ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ.
ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ,
ಆಯುತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
577
ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು
ಎಲ್ಲಿ ಚುಂಬಿಸಿದಡೂ ಇನಿದಹುದು.
ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ?
ಎಲ್ಲ ವಿದ್ಯೆವನೂ ಬಲ್ಲೆವೆಂದೆಂಬರು,
ಅವರು ಅ(ಸ?)ಲ್ಲದೆ ಹೋದರಯ್ಯಾ ಗುಹೇಶ್ವರಾ.
578
ನಿರವಯ ನಿರ್ಗುಣ ನಃಶೂನ್ಯಲಿಂಗಕ್ಕೆ
ಶರಣರು ತಮ್ಮ ತಮ್ಮ ತನುಗುಣಾದಿಗಳ
ಅರ್ಪಿಸಿಹೆನೆಂಬುದೆ ಮಹಾಪಾಪ!
ಅವು ತಮ್ಮ ತನುವಿನಲ್ಲಿಪ್ಪುದೆ ಭಂಗ, ಅದೇ ಕರ್ಮ,
ಈ ಉಭೆಯ ನಾಸ್ತಿಯಾಗದ ಸುಳುಹು
ಮುಂದೆ ಕಾಡಿಹುದಯ್ಯಾ ಗುಹೇಶ್ವರಾ.
579
ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ ಶಬ್ದ
ಬೇಡಲಿಲ್ಲದ ವರ_ನೋಡಿರೆ ನಿರಾಳವ!
ಬಾಡಲಿಲ್ಲದ ಸಸಿಯ ಬೆಳಸು
ಕೂಡದೆ ಕೂಡಿತ್ತೊಂದು ಸುಖವ ಕಂಡೆ ನಾನು.
ಇಲ್ಲದ ಉಪಕಾರ ಮೆಲ್ಲದ ಸವಿಯಿಂದ
ಸುಖಿಯಾದೆ ಗುಹೇಶ್ವರಾ.
580
ನಾನು ಸಜ್ಜೀವವೊ, ನೀನು ಸಜ್ಜೀವವೊ?
ನಿನಗೆಯೂ ಎನಗೆಯೂ ಸಂಬಂಧವಯ್ಯಾ,
ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ?
ಎನ್ನ ಪ್ರಸಾದವು ನಿನಗೆ ನಿನ್ನ ಪ್ರಸಾದವು ಎನಗೆ.
ಎನಗೆಯೂ ನಿನಗೆಯೂ ಏಕಪ್ರಸಾದ ಕಾಣಾ ಗುಹೇಶ್ವರಾ.
581
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ!
ತಲೆ ತಲೆಯಾತಲೆ ನುಂಗಿತ್ತಲ್ಲಾ!
ಸತ್ತು ಹಾಲ ಸವಿಯ ಬಲ್ಲಡೆ,
ರಥದ ಕೀಲ ಬಲ್ಲಡೆ_ಅದು ಯೋಗ!
ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?
582
ಅರಿವಿನೊಳಗೊಂದು ಮರವೆಯದೆ, ಮರಹಿನೊಳಗೊಂದು ಅರಿವವೆ.
ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲದೆ?).
ತಾನೆಂಬಲ್ಲಿ ನಿಷ್ಟತಿಯಿದೆ_ಇದೇನು ಹೇಳಾ ಗುಹೇಶ್ವರಾ?
583
ಜೂಜಿನ ವೇಧಯುಂಟು ಜಾಗರದ ಬಲವಿಲ್ಲ;
ಆಗಲೂ ಗೆಲಲುಂಟೆ ಪ್ರಾಣಪದತನಕ?
ರತುನದ ಸರ ಹರಿದು ಸೂಸಿ ಬಿದ್ದಡೆ
ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ,
ಸರ್ಪಿಣಿ ಸರ್ಪನ ನುಂಗಿ [ದೀಪದ ನುಂಗಿತ್ತು]
ಇದು, ಯೋಗದ ದೃಷ್ಟಾಂತ ಗುಹೇಶ್ವರಾ.
584
ಭೂತಳದ ಮತಿವಂತರು ಆತ್ಮನ ಸ್ಥಲವಿಡಲು
ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ,
ವ್ರತದ ಭ್ರಮೆಗಳ ಸುಟ್ಟು, ಚಿತ್ತ ಭಸ್ಮವ ಧರಿಸಿ
ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ,
ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ.
585
ನೋಡೂದ ನೋಡಲರಿಯದೆ, ಕೆಟ್ಟತ್ತೀ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ!
586
ಭುವನ ಹದಿನಾಲ್ಕರ ಭವನದ ಕೀಲನೆ ಕಳೆದು
ಉರವಣಿಸುವ ಪವನಂಗಳ ತರಹರಿಸಿದಡೆ_ಅದು ಯೋಗ!
ಚತುರಸದೊಳಗಣ ನಿಲವ ಕಾಣಬೇಕು.
ವಜ್ರ ನೀಲದ ಹೊದಿಕೆಯಲ್ಲಿರ್ದ ಭುವನಂಗಳ ಹೊದ್ದಿ
ಮಾಣಿಕವ ನುಂಗಿ ಉಗುಳದು_ಗುಹೇಶ್ವರಾ.
587
ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ?
ಪವನಸ್ಥಾನವನರಿದ ಬಳಿಕ, ಬಂದು ಬಂದು ಸುಳಿಯಲಿಲ್ಲ.
ಇದರಂತುವನಾರು ಬಲ್ಲರು ಗುಹೇಶ್ವರಾ_ನಿಮ್ಮ ಶರಣರಲ್ಲದೆ?
588
ಆಕಾಶವ ನುಂಗಿದ ಸರ್ಪನ ಫಣಿಯ ಮಣಿಯೊಳಗಣ ಕಪ್ಪೆ,
ವಾಯುವನಲನ ಸಂಚವ ನುಂಗಿತ್ತದೇನೊ?
ರೂಹಿಲ್ಲದ ತಲೆಗೆ, ಮೊಲೆ ಮೂರಾಯಿತ್ತ ಕಂಡೆ!
ಉಂಡಾಡುವ ಶಿಶುವಿನ ಕೈಯಲ್ಲಿ ಮಾಣಿಕದಾರತಿಯ ಕಂಡೆ!
ಕಾಯವಿಲ್ಲದ ಹೆಣನ ವಾಯುವಿಲ್ಲದೆ ಜವನೆಳೆದೊಯ್ದನೆಂಬ
ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ!
589
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು_ಚೈತನ್ಯಾತ್ಮಕನೆ ಚಿತ್ಸ್ವರೂಪನೆಂದರಿಯ ಬಲ್ಲಡೆ
ಆತನೆ ಶರಣ ಗುಹೇಶ್ವರಾ.
590
ಆಕಾಶದ ಬೀಜ ಆಗ್ನಿಯಲೊದಗಿ, ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು.
ಅರಿದೆಹೆನೆಂಬವನನಾರಡಿಗೊಂಡಿತ್ತು.
ಈ ನಿರ್ಣಯವನರಿಯದ ಮಾನವಾ,
ಗುಹೇಶ್ವರನೆಂಬುದು ಬಯಲ ವಿಕಾರ!
591
ಹರಿದರಸಿಹೆನೆಂದಡೆ ಮನದ ವಿಕಾರ.
ಸುಳಿದರಸಿಹೆನೆಂದಡೆ ಪವನ ವಿಕಾರ.
ನಿಂದರಸಿಹೆನೆಂದಡೆ ಕಾಯವಿಕಾರ.
ಒಳಗರಸಿಹೆನೆಂದಡೆ ಜ್ಞಾನವಿಕಾರ.
ಅರಸಲಿಲ್ಲದೆ ಬೆರಸಬಲ್ಲಡೆ, ಆತನೆ ಶರಣ ಗುಹೇಶ್ವರಾ.
592
ಹತ್ತು ಬಣ್ಣದ ಗಿಡುವಿಂಗೆ,
ಹತ್ತಲೆ, ಹತ್ತು ಹೂ, ಹತ್ತು ಕಾಯಾಯಿತ್ತು.
ಹತ್ತು ಹತ್ತು ಘನದಲ್ಲಿ ಅಳವಟ್ಟು,
ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ
ಆ ಕಾಯ ಲಿಂಗ ಉದಯ (ಲಿಂಗಮಯ?)ವಹುದು ಕಾಣಾ
ಗುಹೇಶ್ವರಾ.
593
ಪ್ರಾಣ, ಲಿಂಗದಲ್ಲಿ ಸಮನಿಸದು; ಲಿಂಗ, ಪ್ರಾಣದಲ್ಲಿ ಸಮನಿಸದು.
ಪ್ರಾಣ ಲಿಂಗ, ಲಿಂಗ ಪ್ರಾಣವೆಂಬುದು
ಸಂದು ಸಂಶಯವಲ್ಲದೆ ನಿಜವಲ್ಲ ಕೇಳಾ.
ದಶಪ್ರಾಣವಳಿದು ಲಿಂಗವೆ ತಾನೆಂದರಿಯ ಬಲ್ಲಡೆ
ಅದೇ ಪ್ರಾಣಲಿಂಗ ಗುಹೇಶ್ವರಾ!
594
ತನು ಒಂದು ದ್ವೀಪ, ಮನ ಒಂದು ದ್ವೀಪ,
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ. _
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರಾ_ನಿಮ್ಮ ಸ್ಥಾನಂಗಳು.
595
ಆದಿಯಲ್ಲಿ ಶಿವದಾರವ ಕಂಡೆ; ಬೀದಿಯಲ್ಲಿ ಬಿದ್ದ ಸೆಜ್ಜೆಯ ಕಂಡೆ.
ಪ್ರಾಣಲಿಂಗವ ಬೈಚಿಟ್ಟುಕೊಂಡೆ.
ಕಾಯವಳಿದು ಚೀವ ನಿಮ್ಮಲ್ಲಿಗೆ ಬಂದಡೆ
ಎನ್ನಿಂದ ವ್ರತಗೇಡಿಗಳಿಲ್ಲ ಗುಹೇಶ್ವರಾ.
596
ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ,
ಹೊದ್ದಿದ ಆಶ್ರಮವ ನಾನೇನೆಂಬೆನು ಶಿವನೆ?
ಭದ್ರಕಾಳಿಯ ಬಸಿರೊಳಗಿರ್ದ ಬಾವಿಯ ಸರ್ಪನು,
ಸಿದ್ಧರಸದ ಘಟಿಕೆಯ ನುಂಗಿ ಎದ್ದು ಆಡಿತ್ತು ನೋಡಾ!
ಹದ್ದಿನ ಹೆಡೆಯಲ್ಲಿ ಮಾಣಿಕವಿದ್ದುದು
ಇಲ್ಲೆಂಬ ಎದ್ದು ಹೇಳವ ಕನಸು ತಾನಲ್ಲ ಗುಹೇಶ್ವರ.
597
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು
ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು
ಓದಿತ್ತು ಅಗಣಿತ ಪುರಾಣ[ವ], ಅನಾಮಯ ಶಾಸ್ತ್ರವನು,
ಅನುಪಮ ವೇದವೆಂದು. _
ನಿಃಸ್ಥಲದ ಸ್ಥಲವಿಡಲು,
ನಿರ್ಮಳತ್ಮಂಗೆ ಇಹವಿಲ್ಲ ಪರವಿಲ್ಲ!
ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ
ಸರ್ವಾಂಗ ಲಿಂಗವು!
598
ಅಂಗೈಯೊಳಗಣ ಸಿಂಹಾಸನವಿದೇನೊ?
ಅಂಗೈಯ ಮೇಲೆ ಸಿಂಹಾಸನವೆಂದೇನೊ?
ಧೂಪ ದೀಪ ನಿವಾಳಿಯೆಂದೇನೊ?
ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಂಬುದೇನೊ?
ಗುಹೇಶ್ವರನೆಂಬ ನಿರಾಳ!
599
ಕಂಗಳಲ್ಲಿ ನಟ್ಟಗಾಯವನಾರಿಗೆ ತೋರಬಹುದಯ್ಯಾ?
ಮನ ಸೋಂಕಿದ ಸುಖವ ಮೊಟ್ಟೆಯ ಕಟ್ಟಬಹುದೆ?
ಆತ ನಿಂದ ನಿಲವಾತಂಗ ಸಾಧ್ಯವಾಯಿತ್ತು.
ಆತ ನಿಂದ ನಿಲವನೇನೆಂಬೆ ಗುಹೇಶ್ವರಾ.
600
ಅರಿದೆಹೆನರಿದೆಹೆನೆಂದಡೆ ಆದೇಕೊ ಮುಂದೆ ಮರವೆ?
ನೀನರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ,
ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ!
ಸ್ವತಂತ್ರ ಘನದೊಳಗಿರ್ದು, ನಿಜವನರಿದೆಹೆನೆಂದಡೆ
ಮೂರ್ತಿ ಕಿರಿದಲ್ಲ, ನಿಲ್ಲು ಮಾಣು.
ಗುಹೇಶ್ವರನೆಂಬ ಲಿಂಗದ ಘನಘಟ್ಟಿಯನರಿವಡೆ
ನಿನ್ನರಿವೆಲ್ಲವ ಹರಿಹಂಚು ಮಾಡಿ,
ನೀನರಿ ಮರುಳೇ_ಅನುಭಾವಿಯಾದಡೆ.
601
ಎನ್ನ ಕಂಗಳೊಳಗಣ ರೂಹಿಂಗೆ ಆನು ಬೇಟಗೊಂಡು ಬಳಲುವಂತೆ,
ಹಿಡಿದು ನೆರೆಯಲಿಲ್ಲಯ್ಯಾ.
ತುರೀಯದ ತವಕವನೇನೆಂಬೆನಯ್ಯಾ.
ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ?
ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?
602
ಅರುವೆಯನು ಒಂದು ಒರಲೆ ಕೊಂಡಡೆ,
ಆಕಾಶವನು ಉಡು ಮೇಯಿತ್ತಲ್ಲಾ!
ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ!
ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು!
603
ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ,
ಬೆಂದಿತ್ತೆಂದರಿಯಬಾರದು ಬೇಯದೆಂದರಿಯಬಾರದು.
ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ
ಮರಳಿ ಹುಟ್ಟಲ್ಲಿಲ್ಲ ಕಾಣಾ ಗುಹೇಶ್ವರಾ.
604
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು.
ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು.
ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ?
ಭ್ರಾಂತು ಭ್ರಾಂತನೆ ನುಂಗಿ
ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ!
605
ಕಂಡದ ಗಿರಿಯ ಮೇಲೊಂದು, ಅರಗಿನ ಕಂಭವಿದ್ದಿತ್ತು ನೋಡಯ್ಯಾ.
ಅರಗಿನ ಕಂಭದ ಮೇಲೆ ಹಂಸೆಯಿದ್ದಿತ್ತು.
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ!
ಸೂತ್ರ: ಇಂತು ಶರಣಸ್ಥಲದಲ್ಲಿ ಜ್ಞಾನಮುಖದಿಂದಾಚರಿಸಿ ಐಕ್ಯವಾದ ಶರಣನು ಮುಂದೆ ಸಮರಸದಿಂದಾಚರಿಸಿ ಬೆರಸಿ
ನಿರಾಳದಲ್ಲಿ ವಿಶ್ರಾಂತಿಯನೈದುವ ಭೇದವೆಂತಿದ್ದುದೆಂದಡೆ ಮುಂದೆ ಐಕ್ಯಸ್ತಲವಾದುದು.
ಐಕ್ಯಸ್ಥಲ
606
ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು.
607
ಕೋಣನನೂ ಕುದುರೆಯನೂ; ಹಾವನೂ ಹದ್ದನೂ;
ಮೊಲನನೂ ನಾಯನೂ, ಇಲಿಯನೂ, ಬೆಕ್ಕನೂ,
ಹುಲಿಯನೂ ಹುಲ್ಲೆಯನೂ_ಮೇಳೈಸುವಂತೆ
ಮೇಳವಿಲ್ಲದವನ ಒಕ್ಕತನ, ಆಳಿಯ ಬಾಳುವೆ,
ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ! _ಕೇಳು ಗುಹೇಶ್ವರಾ
ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ!
608
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೇ ಭಂಗ,
ಹಂಗು ನೋಡಾ, ಹಂಗಿನ ಶಬ್ದ ನೋಡಾ!
ಕೊಡನ ತುಂಬಿದ ಹಾಲನೊಡೆಯ ಹಾಯಿಕಿ
ಇನ್ನು ಉಡುಗಿಹೆನೆಂದಡೆ ಉಂಟೆ ಗುಹೇಶ್ವರಾ?
609
ಶಬ್ದ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು,
ತಮ್ಮ ತಾವರಿಯರು.
ಇದು ಕಾರಣ_ಮೂರು ಲೋಕವೆಲ್ಲವು,
ಬರುಸೂರೆವೋಯಿತ್ತು ಗುಹೇಶ್ವರಾ.
610
ಉರವಣಿಸುವ ಮನ ಮುಟ್ಟುವನ್ನಬರ ಕಾಡುವುದು?
ಘನ ಘನದಲ್ಲಿ ಮನ ನಂಬುವನ್ನಬರ ಕಾಡುವುದು.
ಮಹಂತ ಗುಹೇಶ್ವರನೆಂಬ ಶಬ್ದವುಳ್ಳನ್ನಬರ ಕಾಡುವುದು.
611
ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು
ಇದಾವನಾವನ ಕಾಡದಯ್ಯಾ?
ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ!
ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)
612
ಭಾವವಳಿಯದೆ ಬಯಕೆ ಸವೆಯದೆ
ಐಕ್ಯವು ಆವ ಘನವೆಂದಡಹುದೆ?
ಶಬ್ದ ಸಂಭ್ರಮದ ಮದವಳಿಯದೆ,
ತನ್ನ ಇದಿರಲ್ಲಿ ಪ್ರತಿಯುಳ್ಳಡೆ, ಏನೆಂದಡೂ ಅಹುದೆ?
ಗುಹೇಶ್ವರನೆಂಬ ಶಬ್ದಸಂದಳಿಯದೆ
ಬೇಸತ್ತು ಬಯಲಾದಡೆ ಆಯತವಹುದೆ?
613
ಕೆರೆಯಲುಂಡು ತೊರೆಯ ಹೊಗಳುವರು.
ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು.
ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ
ಭವನ ಹರಿಯಲರಿಯರು.
ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ
ಮಹದ ಮಾತೇಕೋ ಗುಹೇಶ್ವರಾ?
614
ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು.
ಪಂಚಭೂತಸಂಗದಿಂದ ಕರ್ಪುರವಾಯಿತ್ತು.
ಈ ಎರಡದ ಸಂಗವೇನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ?
615
ಎರಡಂಬರಯ್ಯಾ ಕರಣದ ಕಂಗಳಲ್ಲಿ ನೋಡಿದವರು.
ಎರಡುವನತಿಗಳೆದು ಒಂದೆಂಬರಯ್ಯಾ.
ಕಾಮಿಸೂದಿಲ್ಲಾಗಿ ಕಲ್ಪಿಸೂದಿಲ್ಲ.
ಭಾವಿಸೂದಿಲ್ಲಾಗಿ ಬಯಸೂದಿಲ್ಲ.
ಗುಹೇಶ್ವರನೆಂಬುದಿಲ್ಲಾಗಿ ಮುಂದೆ ಬಯಲಿಂಬುದೂ ಇಲ್ಲ.
616
ಹುಲ್ಲ ಕಿಚ್ಚುವ, ಕಲ್ಲ ಬೀಜವ, ನೀರ ನೆಳಲುವ,
ಗಾಳಿಯ ನಾರುವ, ಅಗ್ನಿಯ ಹಗಿನುವ, ಬಿಸಿಲಿನ ರುಚಿಯ
ತನ್ನ ಬೆಳಗುವನಾರು ಬಲ್ಲರು ಗುಹೇಶ್ವರಾ ನಿಮ್ಮ ಶರಣರಲ್ಲದೆ?
617
ಹೊರಸಿನೆಕ್ಕೆಯ ಶಂಖದ ಮಣಿಯ ಪವಣಿಸಬಲ್ಲವರು
ನೀವಾರಾದಡೂ ಪವಣಿಸುರಯ್ಯಾ, _ಇದ ನಾನರಿಯೆನಯ್ಯಾ.
ಒಂದು ತಾಳುಮರದ ಮೇಲೆ ಮೂರು ರತ್ನವಿಹುದ ನಾಬಲ್ಲೆ:
ಒಂದು ರತ್ನ ಉತ್ಪತ್ಯ_ಸ್ಥಿತಿ_ಲಯಕ್ಕೊಳಗಾಯಿತ್ತು.
ಒಂದು ರತ್ನ ಹದಿನಾಲ್ಕು ಭುವನಕ್ಕೆ ಬೆಲೆಯಾಯಿತ್ತು.
ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು
ಗುಹೇಶ್ವರ ಲಿಂಗೈಕ್ಯವು. _ನಿಶ್ಯಬ್ದಂ ಬ್ರಹ್ಮ ಉಚ್ಯತೇ.
618
ಅಂಗದ ಧರೆಯ ಮೇಲೆ ಮೂರು ಬಾವಿಯುಂಟು:
ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು.
ನಡುವಡ ಬಾವಿಯ ಮುಟ್ಟಿದಾತ ಉತ್ಪತ್ಯ_ಸ್ಥಿತಿ_ಲಯಕ್ಕೊಳೆಗಾದನು.
ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು. _
ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಹ್ರಹ್ಮವ ದಾಂಟಿ,
ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು!
619
ಒಟ್ಟೆಯ ಮರಿ ಮೂರೊಟ್ಟಿಯನಿಕ್ಕಿತ್ತು.
ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು.
ಬೆಟ್ಟವ ಬೆಳ್ಳಕ್ಕಿ ನುಂಗಿತ್ತು.
ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ.
ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ!
620
ಸ್ಥೂಲವನು ಬ್ರಹ್ಮನಳವಡಿಸಿಕೊಂಡ.
ಸೂಕ್ಷ್ಮವ ವಿಷ್ಣುವಳವಡಿಸಿಕೊಂಡ.
ಕಾರಣವ ರುದ್ರನಳವಡಿಸಿಕೊಂಡ.
ನಿಃಕಾಯವ ಈಶ್ವರನಳವಡಿಕೊಂಡ.
ನಿರಂಜನವ ಸದಾಶಿವನಳವಡಿಸಿಕೊಂಡ.
ನಿರವಯವ ವ್ಯೋಮಾತೀತನಳವಡಿಸಿಕೊಂಡ.
ಈ ಷಡುಸ್ಥಲದವರೆಲ್ಲ ಬಯಲನಳವಡಿಸಿಕೊಂಡು
ಬಯಲಾಯಿತ್ತು ಕಾಣಾ ಗುಹೇಶ್ವರಾ.
621
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ,
ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ.
ಹೊರಗೆಯೂ ಇಲ್ಲ_ಏನಾಯಿತ್ತೆಂದರಿಯೆನಯ್ಯಾ.
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ ಎಂದೂ ಇಲ್ಲ.
622
ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ.
ಅದೇನೆಂಬೆನಯ್ಯಾ ಎಂತೆಂಬೆನಯ್ಯಾ?
ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ.
623
ಅರಿದೆನೆಂಬುದು ತಾ ಬಯಲು,
ಅರಿಯೆನೆಂಬುದು ತಾ ಬಯಲು.
ಅರುಹಿನ ಕುರುಹಿನ ಮರಹಿನೊಳಗೆ
ಗುಹೇಶ್ವರನೆಂಬುದು ತಾ ಬಯಲು!
624
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು.
ಸ್ಘಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು.
ವಾಯುವಿನ ಸಂಚಿದ ಪರಿಮಳದ ನಿಲವಿನಂತೆ
ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
625
ಅರಿದರಿದು ಅರಿವು ಬಂಜೆಯಾಯಿತ್ತು.
ಮರೆ ಮರೆದು ಮರಹು ಬಂಜೆಯಾಯಿತ್ತು.
ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು,
626
ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು.
ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು.
ದೇವರಿಲ್ಲ ಭಕ್ತರಿಲ್ಲ; ನಾನೂ ಇಲ್ಲ ನೀನೂ ಇಲ್ಲ;
ಗುಹೇಶ್ವರಾ, ಪೂಜಿಸುವರೂ ಇಲ್ಲ, ಪೂಜೆಗೊಂಬವರೂ ಇಲ್ಲ.
627
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ
ಹೆಲವ ಹಂಬಲಿಸಿತ್ತೆನ್ನ ಮನವು,
ಮನ ಘನವನರಿಯದು, ಘನ ಮನವನರಿಯದು.
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲ ಒಂದು ಮಾತಿನೊಳಗು!
628
ಅವಿರಳ ವಿಟನ ಮದುವಿಗೆ ನಿಬ್ಬಣಗಿತ್ತಿಯರೆಲ್ಲ ಬಂದು
ಕೆಂಡದ ದಂಡೆಯನೆ, ಮುಡಿದು, ಅಂಡಜವೆಂಬ ಅರಿಷಣವ ಮಿಂದು,
ಉರಿಯೆಂಬ ಹಚ್ಚಡದ ಹೊಂದಿಕೆ (ಹೊದಕೆ?)ಯಲ್ಲಿ_
ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು ನೀರಲಡಿಗೆಯ ಮಾಡಿ;
ವಾಯದ ಕೂಸಿಂಗೆ ಮಾಯದ ಮದವಣಿಗ;
ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು.
ಕೂಸೆದ್ದು ಕುಣಿದಾಡಿ ಸೂಲಗಿತ್ತಿಯ ನಿಗ್ರಹಿಸಿತ್ತು (_ನವಗ್ರಹಿಸಿತ್ತು?)
ಗುಹೇಶ್ವರಾ ಒಬ್ಬ ಇಬ್ಬ ಮೂವರು
ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು?
629
ಸತ್ತಾತನೊಬ್ಬ ಹೊತ್ತಾತನೊಬ್ಬ, _
ಈ ಇಬ್ಬರನೂ ಒಯ್ದ ಸುಟ್ಟಾತನೊಬ್ಬ.
ಮದವಣಿಗನಾರೊ? ಮದವಳಿಗೆ ಯಾರೊ?
ಮದುವೆಯ ನಡುವೆ ಮರಣವಡ್ಡಬಿದ್ದಿತ್ತು.
ಹಸೆಯಳಿಯದ ಮುನ್ನ ಮದವಣಿಗನಳಿದ.
ಗುಹೇಶ್ವರಾ_ನಿಮ್ಮ ಶರಣನೆಂದೂ ಅಳಿಯ.
630
ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ಆನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು.
ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
631
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು.
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು.
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು.
ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು_
ಇವರೆಲ್ಲರೂ ಬಯಲನೆ ಪೂಜಿಸಿ ಬಯಲಾಗಿ ಹೋದರು.
ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ
ಸುಖಿಯಾದನು ಗುಹೇಶ್ವರಾ.
632
ಹೊರಗನೆ ಕೊಯ್ದ ಹೊರಗನೆ ಪೂಜಿಸಿ
ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ.
ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ,
ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ!
ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ
ತನು ಸಂದಣಿಸಿತ್ತು ಗುಹೇಶ್ವರಾ.
633
ಶಯನಾಸನ ಪರವಿಲ್ಲೆಂದುದು.
ಜ್ಞಾನಾಜ್ಞಾನ ಭಾವ ನೋಟ ತಾನಲ್ಲ,
ಅರಿವಿನ ಭಾವ ಸ್ವತಂತ್ರವಿಲ್ಲ ಕಾಣಾ.
ಆಕಾಯದಲ್ಲಿ ಅದ್ವೈತ ಚರಿತ್ರ;
ಅರಿವಿನಲನುಗ್ರಹಿಸಿ ಸಕಾಯದಲ್ಲಿ ಸದೈವ ಚರಿತ್ರ.
ಮರಹು ಉದಯಿಸದ ನಿರುಗೆಯ ಪವನ ಬ್ರಹ್ಮರಂಧ್ರರಹಿತ!
ಶಯನಾಸನವೆಂದಲ್ಲಿ ಗುಹೇಶ್ವರನೆನಲು ಹೇಸಿತ್ತು.
634
ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ!
ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ
ಬಂಜೆಯ ಮಗನ ಜೋಗುಳವಾಡುತ್ತೈದಾರೆ,
ಉರಿಯ ಚಪ್ಪರವನಿಕ್ಕಿ_
ಗುಹೇಶ್ವರನ ಕಂದನು ಲೀಲೆಯಾಡಿದನು!
635
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ.
ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ.
ತನಗೆ ಗುರುವಿಲ್ಲ ಗುರುವಿಗೆ ತಾನಿಲ್ಲ.
ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ.
ಬಯಲ ಬಿತ್ತಲಲ್ಲ ಬೆಳೆಯಲಿಲ್ಲ, ಒಕ್ಕಲಿಲ್ಲ ತೂರಲಿಲ್ಲ.
ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ!
636
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
ಮಾಡಿದಡೇನಹುದೊ? ಮಾಡದಿರ್ದಡೇನಹುದೊ?
ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ.
ಮಾಡಿದಡೇನಹುದೊ?
637
ನಿಜವನರಿದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ,
ಘನವ ಕಂಡ ಮಹಿಮನೆ, ವರವನೊಳಕೊಂಡ ಪರಿಣಾಮಿಯೆ,
ಬಯಲಲೊದಗಿದ ಭರಿತನೆ,
ಗುಹೇಶ್ವರಲಿಂಗನಿರಾಳವನೊಳಕೊಂಡ ಸಹಜನೆ!
638
ಭವಿಯ ಕಳೆದೆಹೆವೆಂಬ ಅಪ್ರಮಾಣಿಗಳು ನೀವು ಕೇಳಿರೆ,
ಭವಿಯ ಕಳೆದೆಹೆವೆಂಬ ಭವಭಾರಿಗಳು ನೀವು ಕೇಳಿರೆ;
ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ!!
639
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯವ ಬಯಲಾಗಿ ಬಯಲಾಯಿತ್ತಯ್ಯ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
640
ನಾರು ಬೇರಿನ ಕುಟಿಲ ಕಪಟದ
ಯೋಗವಲ್ಲಿದು ನಿಲ್ಲಿ ಭೋ.
ಕಾಯ ಸಮಾಧಿ ಕರಣ ಸಮಾಧಿ_
ಯೋಗವಲ್ಲಿದು ನಿಲ್ಲಿ ಭೋ.
ಜೀವ ಸಮಾಧಿಯೆಂಬುದಲ್ಲ,
ನಿವ ಸಹಜಸಮಾಧಿ ಗುಹೇಶ್ವರಾ!
641
ವಸ್ತುಕ ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು
ಇತ್ತಿತ್ತಲಲ್ಲದೆ ಅತ್ತತ್ತಲಾರುಬಲ್ಲರು.
ಇವರೆತ್ತಲೆಂದರಿಯರು_ಗಿಳಿವಿಂಡುಗೆಡೆವರು ನಿಮ್ಮನೆತ್ತಬಲ್ಲರು
ಗುಹೇಶ್ವರಾ?
642
ಅಕ್ಷರದಲಭ್ಯಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ?
ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ,
ಆದಿನಿರಾಳ ಮಧ್ಯನಿರಾಳ ಊರ್ಧ್ವನಿರಾಳ ಗುಹೇಶ್ವರ.
643
ಕಾಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ,
ತನುವಲ್ಲ ಹುಸಿಸ್ಥಲ_ಶರಣನೆಂತೆಂಬೆ?
ಮಾತಿನಂತುಟಲ್ಲ ಕ್ರಿಯಾಸಮ (ಕ್ರಿಯಾಗಮ?) ಸ್ಥಲ.
ಉತ್ಪತ್ಯ_ಸ್ಥಿತಿ_ಲಯರಹಿತ ನಿಜಸ್ಥಲ,
ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ.
644
ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ,
ದೃಷ್ಟಿವಾಳಕ ತಾನಲ್ಲ.
ಬೇರೊಂದ ವಿವರಿಸಿಹೆನೆಂದಡೆ,
ಆರ ಮೀರಿದಲ್ಲದೆ ಅರಿಯಬಾರದು.
ಅರಿವನರಿದು ಮರಹ ಮರೆಯದೆ,
ಮನದ ಬೆಳಗಿನೊಳಗಣ ಪರಿಯನರಿಯದೆ
ವಾದಿಸಿ ಕೆಟ್ಟು ಹೋದರು ಗುಹೇಶ್ವರಾ,
ಸಲೆ ಕೊಂಡ ಮಾರಿಂಗೆ!
645
ಪರಿಣಾಮ ಪರಿಮಿತ ದೊರೆಕೊಂಡಾತಂಗೆ
ಬಳಿಕೇಕೊ ಬರು ಮಾತಿನವರೊಡನೆ ಗೋಷ್ಠಿ?
ಬಳಿಕೇಕೊ ಬರಿಯ ಸಂಭ್ರಮಿಗಳೊಡತಣ ಅನುಭಾವ?
ಐವತ್ತೆರಡಕ್ಷರ ತಮ್ಮಲ್ಲಿ ತಾವು ಉಲಿಯದಂತೆ ಉಲಿದವು,
ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೊ?
646
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ
ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
647
ನಿಮ್ಮ ನೆನೆವುತ್ತಿದ್ದಿತ್ತು_ನೆನೆವ ಮುಖವಾವುದೆಂದರಿಯದೆ,
ಪೂಜೆಯ ಪೂಜಿಸುತ್ತಿದ್ದಿತ್ತು_ಪೂಜೆಯ ಮುಖವಾವುದೆಂದರಿಯದೆ;
ಆಡಿ ಹಾಡಿ ಬೇಡುತ್ತಿದ್ದಿತ್ತು_ಬೇಡುವ ಮುಖವಾವುದೆಂದರಿಯದೆ;
ಕಾಯದಲ್ಲಿ ಇಲ್ಲ, ಜೀವದಲ್ಲಿ ಇಲ್ಲ, ಭಾವದಲ್ಲಿ ಇಲ್ಲ;
ಭರಿತವು ಅದು ತಾವಪ್ಪುದು.
ತಾನಲ್ಲದುದೇನ ಹೇಳುವ ಕೌತುಕವ?
ಗುಹೇಶ್ವರನೆಂಬ ಹೆಸರೊಳಗಿದ್ದುದ
ಬೆಸಗೊಂಬವರಿಲ್ಲ ನಿರಾಳದ ಘನವ!
648
ನಿತ್ಯ ನಿರಂಜನ ತಾನೆಂದರಿಯದೆ, ‘ತತ್ತ್ವಮಸಿ’ ಎಂದು
ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ!
ತಮ್ಮ ತಾವರಿಯದೆ,
ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?
649
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ,
ಉದಕಲಿಂಗದ ಅನುಭಾವವೇಕೊ?
ಮಾತಿನ ಮಾತಿನ ಮಹಂತರು ಹಿರಿಯರು!
ಗುಹೇಶ್ವರನೆಂಬ ಲಿಂಗಸಾರಾಯ,
ತೋರದು ತೋರದು ಬಹುಮುಖಿಗಳಿಗೆ.
650
ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ:
ಚತುರ್ದಶ ಭುವನದೊಳಗಿಲ್ಲ, ಹೊರಗಿಲ್ಲ.
ಏನೆಂದರಿಯರು ಎಂತೆಂದರಿಯರು ಹೇಳಿರಯ್ಯಾ (ಹೇಳಯ್ಯಾ)
ಕೃತಯುಗದಂದಿನ ಮಾತು ಬೇಡ
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ.
651
ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ?
ತಿಳುಹಿನ ಮುಂದಣ ಸುಳುಹು ತಾನೇನೊ?
ಸರದ ಸಮತೆಯ ಪರಿಣಾಮವ ನೋಡಾ!
ಗುಹೇಶ್ವರನೆಂಬುದು ಅದೆ ಕಂಡಾ!
652
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ,
ಪರಾಪರವೆಂದು ನುಡಿಯುತ್ತಿದ್ದಿತ್ತು.
ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
ವೇದವಿಜ್ಞಾನವೆಂದುದಾಗಿ, ‘ತತ್ತ್ವಮಸಿ’ ವಾಕ್ಯಂಗಳೆಲ್ಲವೂ
ಹುಸಿಯಾಗಿ ಹೋದವು.
ಸಚ್ಚಿದಾನವೆಂದುದಾಗಿ
ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು.
ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
653
ಯುಗಜುಗ ಮೆಡಿನಲ್ಲಿ ಬ್ರಹ್ಮಾಂಡಗಳಳಿವಲ್ಲಿ
ಲಿಂಗವೆಂದರಿತವರಾರೊ?
ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು!
ದೇವನೆಂದರಿತವರಾರೊ?
ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ
ಗುಹೇಶ್ವರಾ ನಿಮ್ಮ ಶರಣ ಬಲ್ಲ!
654
ಕಾಲಚಕ್ರದ ವಚನ:
ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು
ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೊ,
ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ
ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ.
ಚಟುಕು ಮುನ್ನೂರರವತ್ತು ಕೂಡಿದೊಡೆ ಒಂದು ವಿಘಳಿಗೆ,
ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ.
ದಿನ ಮೂವತ್ತು ಕೂಡಿದೊಡೆ ಒಂದು ಮಾಸ
ಮಾಸ ಹನ್ನೆರಡು ಕೂಡಿದೊಡೆ ಒಂದು ಸಂವತ್ಸರ_
ಇಂತೀ ಕಾಲಚಕ್ರಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ.
ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು,
ತಿರುಗಿ ಬರುತ್ತಿಹರು ಕಾಣಿರೆ.
ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟು ಸಾವಿರವರ್ಷ ವರ್ತಿಸಿ ನಿಂದಿತ್ತು.
ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರು ಸಾವಿರ ವರ್ಷ ವರ್ತಿಸಿ ನಿಂದಿತ್ತು.
ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕು ಸಾವಿರ ವರ್ಷ ವರ್ತಿಸಿ ನಿಂದಿತ್ತು.
ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡು ಸಾವಿರ ವರ್ಷ ವರ್ತಿಸಿ ನಿಂದಿತ್ತು.
_ಇಂತೀ ನಾಲ್ಕುಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ,
ನಾಲ್ವತ್ತು ಮೂರು ಲಕ್ಷವು ಇಪ್ಪತ್ತು ಸಾವಿರ ವರುಷ ಕಟ್ಟಳೆಯಾಯಿತ್ತು
ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ
ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ.
ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ
ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವವಪ್ಪುದ.
ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ
ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು,
ಆ(ದಿ) ವಿಷ್ಣುವಿನ ಒಂದು ದಿನವಪ್ಪುದು. (ಅಂಥ ವಿಷ್ಣುವಿನ ಒಂದು ದಿನದಲ್ಲಿ)
ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ,
ಅಂಥಾ ಭೂತಸಂಹಾರಂಗಳು
ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು
ಪೃಥ್ವಿಯೆಲ್ಲಾ ಜಲಪ್ರಳಯ.
ಅಂಥಾ ಜಲಪ್ರಾಳಯವೆಂಟು ಜಾರಿ ತಿರುಗಿದಡೆ ವಿಷ್ಣುವಿಂಗೆ ಮರಣ,
ರುದ್ರಂಗೆ ನಿಮಿಷ.
ಅಂಥಾ ರುದ್ರನ ಒಂದು ನಿಮಿಷದಲ್ಲಿ
ಅತಳ ರುದ್ರನ ಒಂದು ನಿಮಿಷದಲ್ಲಿ
ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ_
ಇಂತು ಕೆಳಗೇಳು ಭುವನಂಗಳು,
ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ
ಭುವರ್ಲೋಕ ಭೂಲೋಕ ಮೊದಲಾಗಿ_ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ
ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದು ದಿನ.
ಅಂಥಾದಿನ ಮುನ್ನೂರರುವತ್ತು ಕೂಡಿದಡೆ ಒಂದು ವರುಷ.
ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು.
ಅಂಥಾ ರುದ್ರರು ಅನೇಕರು ಹೋದರಲ್ಲಾ,
ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ
ಈಶ್ವರರೆಂಬವರು
ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು.
ತಪಕ್ಕೆ ಬಿಜಯಂಗೈವರು ಆ ರುದ್ರರು.
ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು.
ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಬೋಯಿತ್ತು.
ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕಾಲ
ಅದು ತೊಡೆದು ಹೋಯಿತ್ತು_ಬಳಿಕ ಮಹಾ ಪ್ರಕಾಶದ ಬೆಳಗು.
ಇಂತಹ ಕಾಲಂಗಳು ಈ ಪರಿಯಲಿ ತಿರುಗಿ ಬಹುತ್ತಿಹವು ಕಾಣಿರೆ!
ಅಂತಹ ಕಾಲಂಗಳೂ ಅರಿಯುವು, ಅಂತಹ ದಿನಂಗಳೂ ಅರಿಯವು
ಅಂತಹ ದೇವತೆಗಳೂ ಅರಿಯರು, _
ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು
ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ! ನಿರಾಮಯ!
655
ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ.
ಮುಂದೆ ಎಷ್ಟ ಪ್ರಳಯ ಬಂದಹುದೆಂದರಿಯೆ.
ತನ್ನ ಸ್ಥಿತಿಯ ತಾನರಿಯದಡೆ ಅದೇ ಪ್ರಳಯವಲ್ಲಾ!
ತನ್ನ ವಚನ ತನಗೆ ಹಗೆಯಾದಡೆ ಅದೇ ಪ್ರಳಯವಲ್ಲಾ!
ಇಂತಹ ಪ್ರಳಯ ನಿನ್ನಲುಂಟೆ ಗುಹೇಶ್ವರಾ?
656
ಘನವ ಮನ ಕಂಡು ಅದನೊಂದು ಮಾತಿಂಗೆ ತಂದು ನುಡಿದಡೆ
ಅದಕ್ಕದೇ ಕಿರಿದುನೋಡಾ.
ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ!
657
ಸಚರಾಚರವೆಂಬುದೊಂದು ಕಿಂಚಿತ್ತು.
ಚತುರ್ಯುಗವೆಂಬುದೊಂದು ಕಿಂಚಿತ್ತು.
ಅಪ್ಪುದೆಂಬುದೊಂದು ಕಿಂಚಿತ್ತು, ಆಗದೆಂಬುದೊಂದು ಕಿಂಚಿತ್ತು.
ತಾನು ಶುದ್ಧವಾದ ಶರಣಂಗೆ
ಗುಹೇಶ್ವರನೆಂಬುದೊಂದು ಕಿಂಚಿತ್ತು.
658
ತಾ ಸುಖಿಯಾದಡೆ ನಡೆಯಲು ಬೇಡ.
ತಾ ಸುಖಿಯಾದಡೆ ನುಡಿಯಲು ಬೇಡ.
ತಾ ಸುಖಿಯಾದಡೆ ಪೂಜಿಸಲು ಬೇಡ,
[ತಾ ಸುಖಿಯಾದಡೆ ಉಣಲು ಬೇಡ] ಗುಹೇಶ್ವರಾ.
659
ನಾದ ಮುನ್ನವೊ ಬಿಂದು ಮುನ್ನವೊ?
ಕಾಯ ಮುನ್ನವೊ ಜೀವ ಮುನ್ನವೊ?
ಜೀವ ಕಾಯದ ಕುಳಸ್ಥಳಂಗಳ ಬಲ್ಲವರು ನೀವು ಹೇಳಿರೆ?
ಗುಹೇಶ್ವರಾ ನೀನು ಮುನ್ನವೊ ನಾನು ಮುನ್ನವೊ?
ಬಲ್ಲವರು ನೀವು ಹೇಳಿರೆ?
660
ಅರಿವರತು ಬೆರಗು ಹತ್ತಿತೆಂಬ ಜ್ಞಾನವಿದೇನೊ?
‘ನಾಹಂ’ ಎಂಬಲ್ಲಿ ತಾನಾರೊ?
‘ಪರಬ್ರಹ್ಮಸೋಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ?
ಚಿದಹಂ ಎಂಬ ಹಮ್ಮಿನ ಮಾಲೆ ಇದೇನು ಹೇಳಾ?
“ನಿಃಶಬ್ದಂ ಬ್ರಹ್ಮ ಉಚ್ಯತೇ” ಎಂಬ ಶಬ್ದವಿಡಿದು
ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ?
661
ವಸುಧೆಯಿಲ್ಲದ ಬೇಳಸು ರಾಜಾನ್ನ ಹೆಸರಿಲ್ಲದ ಓಗರ,
ವೃಷಭ ಮುಟ್ಟಿದ ಹಯನು,
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆ.
ಶಿಶು ಕಂಡ ಕನಸಿನಂತೆ, ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು!
662
ಧರೆಯಗಲದ ಹುಲ್ಲೆ ಹರಿದು ಮೇಯಿತ್ತು ಕಂಡೆ.
ಬಲೆಯ ಬೀಸುವ ಗಂಡರಾರೂ ಇಲ್ಲ,
ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ.
ಶಿರವ ಹಿಡಿದಹೆದೆನೆಂಬವರಿನ್ನಾರೂ ಇಲ್ಲ.
ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೇಳ್ಳಾರ?)ವ ಬಿಟ್ಟು,
ಬೇಂಟೆಕಾರ ಬಲೆಯ ಬೀಸದಡೆ ಹುಲ್ಲೆಯಂಜಿ ಹೋಯಿತ್ತು.
ಮರುಳುದಲೆಯಲ್ಲಿ ಹುಲ್ಲೆಯನೆಸೆಯ ಬೇಕೆಂದು
ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ದಡೆ?)
ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು
ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು.
ಹತ್ತೆ ಸಾರಿದ ಮೃಗವ ತಾನೆಚ್ಚಡೆ
ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು.
ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು
ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು.
ಗುಹೇಶ್ವರಾ ನಿಮ್ಮ ಶರಣ
ಕಟ್ಟಿದಿರ ಬಾಣಸದ ಮನೆಗೆ ಬಂದನು.
663
ಕಾಯದೊಳಗೆ ಕರುಳುಳ್ಳನ್ನಕರ ಹಸಿವು ಮಾಣದು.
ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ
ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ,
ಏನೆಂಬೆ ಗುಹೇಶ್ವರಾ?
664
ಆರು ಬಣ್ಣದ ಮೃಗವು ತೋರಿಯಡಗಿತ್ತು.
ಬಯಲ ಮೂರು ಲೋಕದೋಳಗೆ ಸಾರಿ, ಹಜ್ಜೆಯ ನೋಡಿ
ತೊರೆಯ ಬೆಂಬಳಿವಿಡಿದು ತೋಹಿನಲ್ಲಿಗೆ ಬಂದಿತ್ತು, ಮೃಗವು.
“ಸೋsಹಂ ಸೋsಹಂ” ಎನ್ನತ್ತಿದ್ದಿತ್ತು, ಇಹಪರವ ಮೀರಿ ನಿಂದಿತ್ತು.
ತೋರಲಿಲ್ಲದ ಬಿಲ್ಲು ಬೇರೆನಿಸದ ಬಾಣ,
ಅರುಹಿನ ಕೈಯಲ್ಲಿ ಕುರುಹ ಬಾಣಸವ ಮಾಡಿ
ತೆರಹಿಲ್ಲದ ಪಾದಕದಲ್ಲಿ (ಶಾಖದಲ್ಲಿ?) ಅಡಿಗೆಯ ಮಾಡಿದ ಬೋನವ
ಅರ್ಪಿತವ ಮಾಡಿದ ಪ್ರಾಸದದಿಂದ ಸುಖಿಯಾದೆ ಗುಹೇಶ್ವರಾ.
665
ನಿರಾಳವೆಂಬ ಶಿಶುವಿಂಗೆ ಪೃಥ್ವಿಯೆಂಬ ತೊಟ್ಟಿಲು,
ನಿಜೈಕ್ಯವೆಂಬ ತಾಯಿ ಬಂದು ಮೊಲೆಯ ಕೊಟ್ಟು ಬೇಣ್ಣೆಯನಿಕ್ಕಿ;
ವಾಯು ಬಂದು ತೊಟ್ಟಿಲ ತೂಗಿ ಜೋಗುಳವಾಡಿದಡೆ,
ಆಕಾಶ ಬಂದು ಶಿಶುವನೆತ್ತಿಕೊಂಡು ಬೆಳೆಯಿಸಿತ್ತಲ್ಲಾ!
ನಿರಾಳವೆಂಬ ಹಸಿವು_ತೃಷೆಯ ಶಿಶುವಿಂಗೆ ಬೇಕೆಂದು
ಮುಗ್ಧೆಯ ಬೆಸಗೊಳಲರಿಯರು ಮೂರುಲೋಕವು ಗುಹೇಶ್ವರಾ.
666
ಉಲಿವ ಮರದ ಪಕ್ಷಿಯಂತೆ, ದೆಸೆದಸೆಯನಾಲಿಸುತ್ತಿರ್ದೆ.
ಅರಿವರಿಲ್ಲ ಅರಿವರಿಲ್ಲ ಅರಿದು ಮರೆಯಿತ್ತಯ್ಯಾ.
ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ
ತನ್ನ ತಾನಿರ್ದನು ಗುಹೇಶ್ವರಯ್ಯನು.
667
ಮೂರದಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ.
ಎಂಟರಲ್ಲಿ ಕಂಡುದಿಲ್ಲ ಒಂದರಲ್ಲಿ ನಿಂದುದಿಲ್ಲ.
ಏನೆಂದೆಂಬೆ? ಎಂತೆಂದೆಂಬೆ?
ಕಾಯದಲ್ಲಿ ಅಳಿದುದಿಲ್ಲ ಜೀವದಲ್ಲಿ ಉಳಿದುದಿಲ್ಲ,
ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ.
668
ವಾಯು ನಿದ್ರೆಗೆಯ್ದಡೆ ಆಕಾಶ ಜೋಗುಳವಾಡಿತ್ತು.
ಬಯಲು ಬಳಲಿದೆನೆಂದಡೆ ನಿರಾಳ ಮೊಲೆಗೊಟ್ಟಿತ್ತು.
ಆಕಾಶವಡಗಿತ್ತು ಜೋಗುಳ ನಿಂದಿತ್ತು
ಗುಹೇಶ್ವರನೈದಾನೆ ಇಲ್ಲದಂತೆ.
669
ಉಪಾಧಿಕ ಮನವು!
ಉಪಾಧಿಕರಹಿತನ ಮನ ನಿಂದಲ್ಲಿ ನಿವಾತವಾಯಿತ್ತು.
ಆನಂದದ ಭಾವವು!
ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು.
ಲಿಂಗೋದಯ ಪ್ರಜ್ವಲಿಸುತ್ತಿದೆ,
ಗುಹೇಶ್ವರಲಿಂಗವು ತಾನೆಯಾಗಿ!
670
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ
ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಲ್ಲಯ್ಯಾ.
ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆ[ಯ]
ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು.
ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
671
ಅಂಗೈಯೊಳಗಣ ನಾರಿವಾಳದ ಸಸಿ,
ಅಂಬರದೆರಳೆಯ ನುಂಗಿತ್ತಲ್ಲಯ್ಯಾ.
ಕಂಭದೊಳಗಣ ಮಾಣಿಕ್ಯದ ಬಿಂದು
ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ.
ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ
ನಿರ್ವಯಲಾಯಿತ್ತು ಗುಹೇಶ್ವರಾ!
672
ಮನದ ಕೊನೆಯ ಮೊನೆಯ ಮೇಲೆ ನೆನೆದ ನೆನಹು
ಜನನ ಮರಣವ ನಿಲಿಸಿತ್ತು.
ಜ್ಞಾನಜ್ಯೋತಿಯ ಉದಯ ಭಾನುಕೋಟಿಯ ಮೀರಿ,
ಸ್ವಾನುಭಾವದ ಉದಯ ಜ್ಞಾನ ಶೂನ್ಯದಲಡಗಿದ
ಘನವನೇನಂಬೆ ಗುಹೇಶ್ವರಾ!
673
ಭಾವಕ್ಕೆ ಇಂಬಿಲ್ಲ ಶಬ್ದ ಮೀಸಲು ನೋಡಾ.
ನುಡಿಗೆ ಎಡೆಯಿಲ್ಲ ಎಡೆಗೆ ಕಡೆಯಿಲ್ಲ.
ಗುಹೇಶ್ವರನೆಂಬ ಶಬ್ದ ವೇದಿಸಲೊಡನೆ!
674
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಲ್ಲ.
ನೆನೆವ ಮನವನತಿಗಳೆದ ಘನಕ್ಕೆ ಘನವನೆಂತೆಂಬೆ?
ತನ್ನಲ್ಲಿ ತಾನಾಯಿತ್ತು, ಭಿನ್ನವಿಲ್ಲದೆ ನಿಂದ ನಿಜವು.
ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ.
ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ.
675
ಬೆಳಗು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೆಯಾಗಿ
ಕಾಬ ಕತ್ತಲೆಯ ಕಳೆದುಳಿದು
ನಿಮಗೆ ಆನು ಗುರಿಯಾದೆ ಗುಹೇಶ್ವರಾ.
676
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.
ಹೇಳಲೆಂತೂ ಬಾರದು ಕೇಳಲೆಂತೂ ಬಾರದು.
ಎಂತಿರ್ದುದಂತೆ!
ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ
ಗುಹೇಶ್ವರಾ?
677
ಜಗದದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ
ಅದೇನೆಂಬೆ ಹೇಳಾ? ಮಹಾಘನವನದೆಂತೆಂಬೆ ಹೇಳಾ?
ಗುಹೇಶ್ವರನೆಂಬ ಲಿಂಗವನರಿದು ಮರೆದಡೆ,
ಲೋಯಿಕರದ ಮೇಲೆ ಬಂಡಿ ಹರಿದಂತೆ!
678
ಕಡಲ ಮೇಲಣ ಕಲ್ಲು, ಸಿಡಿಲು ಹೊಯ್ದ ಬಾವಿ!
ತಡದ ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು.
ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ!
ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು_
ಏನೂ ಇಲ್ಲದ ಊರೊಳಗೆ ಹಿಡಿದಡೆ
ನುಂಗಿತ್ತು ನೋಡಾ ಹೆಮ್ಮಾರಿ ಗುಹೇಶ್ವರಾ.
679
ತುಂಬಿ ಪರಿಮಳವ ನುಂಡಿತೊ, ಪರಿಮಳ ತುಂಬಿಯ ನುಂಡಿತೊ?
ಲಿಂಗ ಪ್ರಾಣವಾಯಿತೊ? ಪ್ರಾಣ ಲಿಂಗವಾಯಿತೊ?
ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲ್ಲೆ.
680
ಬೆಣ್ಣೆಯ ಕಂದಲ ಕರಗಲಿಟ್ಟಡೆ
ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು!
ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ!
681
ಎಂಬತ್ತುನಾಲ್ಕು ಲಕ್ಷ ಒಟ್ಟೆ ಮೂರು ತತ್ತಿಯನಿಕ್ಕಿತ್ತ ಕಂಡೆ.
ಆನೆ ಆಡ ಹೋದಡೆ ಒಂದು ಚಿಕ್ಕಾಡು ನುಂಗಿತ್ತು ಕಂಡೆ,
ನಾರಿಯಾಡ ಹೋದಡೆ ಒಂದು ಚಂದ್ರಮತಿಯ ಕಂಡೆನು.
ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆನು.
ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ನೀವು ಹೇಳಿರೆ.
682
ತೆರಹಿಲ್ಲದ ಘನ ಕುರುಹಿಂಗೆ ಬಾರದ ಮುನ್ನ
ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು?
ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆಯ.
ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು?
ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
683
ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ,
ಮರಳಿ ಬಾಣವನರಸಲುಂಟೆ?
ಗುಹೇಶ್ವರನೆಂಬ ಲಿಂಗವನರಿದು
ಮರಳಿ ನೆನೆಯಲುಂಟೆ?
684
ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾದವರಲ್ಲಿ ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ? _ಗುಹೇಶ್ವರನೆಂಬ ನಿಜ ನಿಂದವರಲ್ಲಿ?
685
ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
ಏನೆಂಬೆ ಲಿಂಗವ ಎಂತೆಂಬೆ ಲಿಂಗಯ್ಯಾ?
ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.
686
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ,
ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ.
ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ!
ಮನವನೊಳಕೊಂಡ ಜ್ಞಾನಕ್ಕೆ ಭಂಗ;
ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೆ ಗುಹೇಶ್ವರಾ?
687
ತನುವಿಲ್ಲದೆ ಕಂಡು ಕಂಡು ನಿಂದೆ.
ಬೆರಗಿಲ್ಲದೆ ಕಂಡು ಕಂಡು ಬೆರಗಾದೆ.
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ!
688
ಘನವ ಕಂಡು ಮನ ಅವಗ್ರಾಹಕವಾಯಿತ್ತು.
ಕಂಡು ಕಂಡು ಮನ ಮಹಾಘನವಾಯಿತ್ತು,
ತಲ್ಲೀಯವಾಯಿತ್ತು! _ತದುಗತ ಶಬ್ದ ಮೂಗ್ಧವಾದುದನೇನೆಂಬೆ
ಗುಹೇಶ್ವರಾ?
689
‘ನಾ’ ‘ನೀ’ ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರಪ್ಯನಲ್ಲ ಸಾಯುಜ್ಯನಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ.
690
ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ,
ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು.
ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ
ಕಡುಗಲಿಯ ವಿದ್ಯೆಯನು ನೋಡಿ,
ನೋಡದ ನಿರ್ಭಾವ ವೀರವಿತರಣೆಯಿಂದ,
ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ
ಬೆಡಗು ನುಂಗಿ ಅಡಗಿತ್ತು.
691
ನುಡಿಯಿಂದ ನಡೆಗೆಟ್ಟಿತ್ತು, ನಡೆಯಿಂದ ನುಡಿಗೆಟ್ಟಿತ್ತು.
ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು.
ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.
692
ನಿರ್ಮಿಕಲ್ಪಿತವೆಂಬ ನಿಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ?)
ನೋಡಿಹೆನೆಂದಡೆ ನೋಡಲ್ಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ?
693
ಅಂಗದೊಳಗಣ ಸವಿ, ಸಂಗದೊಳಗಣ ರುಚಿ,
ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು!
ಚಂದ್ರಕಾಂತದ ಗಿರಿಗೆ ಬಿಂದು ತೃಪ್ತಿಯ ಸಂಚ!
ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು.
ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ,
ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು!
694
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ!
ಕಾಣೆನೆಂಬ ನುಡಿಗೆಡೆಯ ಕಾಣೆ!
ಕುರುಹುಗೆಟ್ಟು ಅರಿವ ನೆರೆಯರಿದು
ಬೆರಸಿದೆನೆಂಬ ಬಿರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ.
ಗದ್ಯ: ಸ್ವಸ್ತಿ ಸಮಸ್ತಭುವನಜನದ ತಿಮಿರಹರಣ ಕಾರಣ ಸ್ವರೂಪರುಂ, ಭಕ್ತಿ ದೇಹಿಕದೇವರುಂ, ಭಕ್ತವತ್ಸಲರುಂ
ಸರ್ವಾಂಗಪ್ರಾಣಲಿಂಗಮೂರ್ತಿ ವಿಲಾಸರುಂ, ಪುಲಿ ಗೆರೆಯ ಪುರವರಾಧೀಶ್ವರರುಂ ಅಪೂರ್ವ ಸ್ವಯಂಭು ಚಿನ್ನದಕ್ಷಿಣ
ಶ್ರೀ ಸೋಮನಾಧ ದೇವರ ದಿವ್ಯ ಶ್ರೀ ಪಾದಪದ್ಮಾರಾಧಿಕರುಂ ತ್ರಿಕಾಂಡನಿಷ್ಠರುಂ, ಋಗ್ಯಜುಸ್ಸಾಮಾಥ ರ್ವಣಾಂತರ್ಗತ
ಪ್ರತಿಪಾದ್ಯ ಪ್ರಮುಖರುಂ ಶ್ರುತಿ ಸ್ಮೃತಿ ಪುರಾಣಾಗಮೇತಿಹಾಸಾದಿ ನಾನಾ ಶಾಸ್ತ್ರಕೋವಿದರುಂ ಪರಮ ವೀರಶೈವಾಗಮಾಚಾರ್ಯರುಂ
ಸಕಲ ಪ್ರಸಾದ ಪಂಚಾಕ್ಷರೀಮಂತ್ರಸಿದ್ಧರುಂ, ನಿತ್ಯ ಪರಿಪೂರ್ಣ ಸಚ್ಚಿದಾನಂದ ನಿರಂಜನ ಪರಂಜ್ಯೋತಿ ಸ್ವರೂಪರುಮಪ್ಪ
ಮಹಾಲಿಂಗದೇವರು ತಮ್ಮ ದಿವ್ಯಜ್ಞಾನಾನಂದಸಿದ್ಧಿವರಪ್ರಸನ್ನ ಪ್ರಸಾದವನು ನಿಜ ಸತ್ಶಿಷ್ಯ ಭಕ್ತಿಭಾಂಡಾರಿ
ಜಕ್ಕಣ್ಣಾಚಾರ್ಯಂಗೆ ಸತ್ಪ್ರೇಮ ಮಹಾನುಭಾವ ಸಂಬೋಧೆ ಸಂಬಂಧ ನಿರೂಪಣಕಾರಣಾರ್ಥಂ ವಿರಚಿತಮಪ್ಪ ಪ್ರಭುದೇವರ
ಷಡು ಸ್ಥಲದೊಳು ಐಕ್ಯನ ವರ್ಗಂ ಷಷ್ಟಮ ಪರಿಚ್ಛೇದಃ